×
Ad

ಚಿಕ್ಕಮಗಳೂರು ಜಿಲ್ಲೆಯಲ್ಲಿ ಗಾಳಿ, ಮಳೆಯ ಆರ್ಭಟ: ಮರ ಬಿದ್ದು ಮಹಿಳೆ ಮೃತ್ಯು

Update: 2017-07-20 15:39 IST

ಚಿಕ್ಕಮಗಳೂರು, ಜು.20:  ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಾದ್ಯಂತ ಬಿಡುವಿಲ್ಲದಂತೆ ಸುರಿಯುತ್ತಿರುವ ಮಳೆ ಮತ್ತು ಗಾಳಿಯ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ಇದರೊಂದಿಗೆ ಕಳಸದಲ್ಲಿ ಮರ ಬಿದ್ದು ಮಹಿಳೆಯೋರ್ವರು ಮೃತಪಟ್ಟಿದ್ದು, ವಿವಿಧೆಡೆ ಹಾನಿ ಸಂಭವಿಸಿದೆ.
 
ಕಳಸ ಪೊಲೀಸ್ ಠಾಣಾ ವ್ಯಾಪ್ತಿಯ ದುಂಡಿಗೆ ಎಂಬಲ್ಲಿನ ಮಹಿಳೆ ಭಾಗ್ಯ(33) ಮರ ಉರುಳಿ ಬಿದ್ದು ಮೃತಪಟ್ಟಿದ್ದಾರೆ. ಇವರು ತಮ್ಮ ಇಬ್ಬರು ಮಕ್ಕಳನ್ನು ಶಾಲೆಗೆ ಬಿಟ್ಟು ಬರಲೆಂದು ಗುರುವಾರ ಬೆಳಗ್ಗೆ ತೆರಳಿದ್ದರು. ಈ ಸಮಯದಲ್ಲಿ ಭಾರಿ ಗಾಳಿಯ ಆರ್ಭಟಕ್ಕೆ ಮರವೊಂದು ಉರುಳಿ ಭಾಗ್ಯ ಅವರ ಮೇಲೆ ಬಿದ್ದ ಪರಿಣಾಮ, ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಸ್ಥಳೀಯರು ಕಳಸ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ಬಳಿಕ, ಮಂಗಳೂರು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ. ಅವರ ಇಬ್ಬರು ಮಕ್ಕಳು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಆಕೆಯ ಪತಿ ಸಂತೋಷ್ ನೀಡಿದ ದೂರಿನಂತೆ ಕಳಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳಸ-ಹೊರನಾಡು-ಕುದುರೇಮುಖ ಸಂಪರ್ಕದ ಹೆಬ್ಬಾಳ ಸೇತುವೆ ಭದ್ರಾ ನದಿ ನೀರಿನಿಂದ ಸಂಪೂರ್ಣ ಮುಚ್ಚಿ ಹೋಗಿದೆ. ಇದರಿಂದ ಪ್ರವಾಸಿಗರು ಸೇರಿದಂತೆ ಸ್ಥಲೀಯರ ಓಡಾಟಕ್ಕೆ ತೊಂದರೆ ಉಂಟಾಗಿದೆ.  ಮೂಡಿಗೆರೆ ತಾಲೂಕಿನಲ್ಲಿ ಹೇಮಾವತಿ ಮತ್ತು ಜಪಾವತಿ ನದಿಗಳು ತುಂಬಿ ಹರಿಯುತ್ತಿದೆ. ಚಿನ್ನಿಗ-ಜನ್ನಾಪುರದ ಸರಕಾರಿ ಶಾಲೆಯ ಆವರಣದ ಗೋಡೆಯ ಮರ ಉರುಳಿ ಬಿದ್ದು ನೆಲಸಮವಾಗಿದೆ. ಮೂಡಿಗೆರೆ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದೊಳಗಿನ ಮರವೊಂದು ಸರಕಾರಿ ಶಾಲೆಯ ಶೌಚಾಲಯದ ಮೇಲೆ ಬಿದ್ದು ಹಾನಿ ಸಂಭವಿಸಿದೆ.

 ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ, ಶೃಂಗೇರಿ ತಾಲೂಕುಗಳಲ್ಲಿ ವಿದ್ಯುತ್ ಕಂಬಗಳ ಮೇಲೆ ಅಲಲ್ಲಿ ಮರ ಉರುಳಿ ಬಿದ್ದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯಗಳುಂಟಾಗಿದೆ. ಮಳೆ ಮತ್ತು ಗಾಳಿಯ ಆರ್ಭಟ ಹೆಚ್ಚಿರುವ ಹಿನ್ನೆಲೆಯಲ್ಲಿ ಗುರುವಾರ ಮಳೆ ಅಧಿಕ ಇರುವ ತಾಲೂಕುಗಳಲ್ಲಿ ಸರಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ.

ಶೃಂಗೇರಿ ಮತ್ತು ಮೂಡಿಗೆರೆ ತಾಲೂಕುಗಳಲ್ಲಿ ಅತೀ ಹೆಚ್ಚಿನ ಮಳೆಯಾಗುತ್ತಿದೆ. ಮೂಡಿಗೆರೆ ತಾಲೂಕಿನ ಮುಗ್ರವಳ್ಳಿ ಮತ್ತು ಹುನುಮನಹಳ್ಳಿ ಎಂಬಲ್ಲಿ ಭತ್ತದ ಗದ್ದೆಗಳು ಜಲಾವೃತವಾಗಿದೆ. ಮುಂದಿನ ಎರಡು ದಿನ ಮಳೆಯ ಅಬ್ಬರ ಹೆಚ್ಚಿದರೆ ಸುತ್ತಮುತ್ತಲ ತಗ್ಗು ಪ್ರದೇಶಗಳು ಜಲಾವೃತವಾಗುವ ಭೀತಿ ಎದುರಾಗಿದೆ. ಶೃಂಗೇರಿ-ಹರಿಹರ ಮಾರ್ಗ ಮಧ್ಯೆ ಮರ ಉರುಳಿ ಬಿದ್ದು ವಿದ್ಯುತ್ ತಂತಿ ಕಡಿದುಕೊಂಡಿದೆ. ಗೋಣಿಬೀಡು, ಬಾಳೆಹೊನ್ನೂರು ಹಾಗೂ ಜಯಪುರ ಹೋಬಳಿಯಲ್ಲಿ ಸಂಪೂರ್ಣ ವಿದ್ಯುತ್ ಕಡಿತ ಉಂಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News