×
Ad

ಜಿಲ್ಲಾ ಕಾರಾಗೃಹದಲ್ಲಿ ರಾಜಯೋಗದಿಂದ ಆದರ್ಶ ಜೀವನ ಮತ್ತು ಆರೋಗ್ಯ ಶಿಬಿರ

Update: 2017-07-20 16:18 IST

ಚಿಕ್ಕಮಗಳೂರು, ಜು.20: ಜೀವಿಗಳಲ್ಲಿ ಮಾನವ ಜೀವಿ ಶ್ರೇಷ್ಠ ಮತ್ತು ಮಾನವ ಜೀವನ ಮಹತ್ವವಾದುದು. ಜಗತ್ತು ಒಂದು ದೊಡ್ಡ ಕರ್ಮಕ್ಷೇತವಾಗಿದ್ರೆ ಕರ್ಮಮಾಡದೇ ಇರಲು ಸಾಧ್ಯವೇ ಇಲ್ಲ ಎಂದು ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿಧ್ಯಾಲಯದ ರಾಜಯೋಗಿನಿ ಬಿ.ಕೆ.ಭಾಗ್ಯಕ್ಕ ತಿಳಿಸಿದರು.

ಅವರು ಜಿಲ್ಲಾ ಕಾರಾಗೃಹದಲ್ಲಿ ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದಿಂದ ಹಮ್ಮಿಕೊಂಡಿದ್ದ ರಾಜಯೋಗದಿಂದ ಆದರ್ಶ ಜೀವನ ಮತ್ತು ಆರೋಗ್ಯ ಸಾಪ್ತಾಹಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಕರ್ಮಕ್ಷೇತ್ರವೇ ಕುರುಕ್ಷೇತ್ರವಾಗಿದ್ದು, ವಿರೋಧಾಭಾಸಗಳು ನಮ್ಮದೇ ಕರ್ಮದ ಕಾರಣ ಎದುರಾಗುತ್ತವೆ. ಎಂತಹ ಬೀಜವೋ ಅಂತಹ ಬೆಳೆ. ಅದೇ ರೀತಿ ಎಂತಹ ಕರ್ಮವೋ ಅಂತಹ ಫಲ ಅವಶ್ಯಕವಾಗಿ ಪ್ರಾಪ್ತವಾಗುತ್ತದೆ ಎಂದು ಹೇಳಿದರು.

ನಮ್ಮ ಪ್ರತಿಯೊಂದು ಸಂಕಲ್ಪವೂ ಒಂದೊಂದು ಶಕ್ತಿಶಾಲಿ ಬೀಜವಿದ್ದಂತೆ. ಶ್ರೇಷ್ಠ ಸಮರ್ಥ ಸಂಕಲ್ಪದಿಂದ ಶ್ರೇಷ್ಠ ಕರ್ಮಗಳಾಗುತ್ತವೆ. ಆಗ ಎಲ್ಲರೂ ಬಯಸುವ ಸಫಲತೆ ಎಂಬ ಶ್ರೇಷ್ಠ ಫಲ ಪ್ರಾಪ್ತವಾಗುತ್ತದೆ. ಬದುಕು ಸಾರ್ಥಕವೆನಿಸುತ್ತದೆ. ಇದರಿಂದ ಮಾನಸಿಕ ಆರೋಗ್ಯ, ಶಾರೀರಿಕ ಆರೋಗ್ಯ ಸಹಜವಾಗಿ ದೊರೆಯುತ್ತದೆ. ಉದಾಹರಣೆಗೆ ಅಂಗುಲಿಮಾಲಾ, ವಾಲ್ಮೀಕಿ ಮುಂತಾದವರು. ಪರಿವರ್ತನೆಗೆ ಸರ್ವರಿಗೂ ಅವಕಾಶವಿದೆ ಎಂದು ನುಡಿದರು.
  
ಯಾರು ಪರಿವರ್ತನೆಯನ್ನು ತಂದುಕೊಳ್ಳುವರೋ ಅವರೇ ಮಹಾನ್ ಆತ್ಮರಾಗುತ್ತಾರೆ. ಆ ಕಾರಣ ತಾವು ಇದನ್ನು ಬಂಧೀಖಾನೆ ಎಂದು ಭಾವಿಸದೇ ಒಂದು ಪರಿವರ್ತನಾ ಸ್ಥಾನವೆಂದು ಭಾವಿಸಿ ಪರಿವರ್ತನೆ ಹೊಂದಿ ಬಿಡುಗಡೆಹೊಂದಿ ತಮ್ಮ ಭವಿಷ್ಯವನ್ನು ಶ್ರೇಷ್ಠ ಮಾಡಿಕೊಳ್ಳುವ ದೃಢ ಸಂಕಲ್ಪವನ್ನು ಕೈಕೊಳ್ಳಲು ಮುಂದಾಗಬೇಕೆಂದು ಕರೆನೀಡಿದರು.  

ಕಾರಾಗೃಹದ ಅಧೀಕ್ಷಕ ವಿಜಯಕುಮಾರ ಚೌವ್ಹಾಣ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಧ್ಯಾತ್ಮಿಕ ಜ್ಞಾನ, ರಾಜಯೋಗ ಪ್ರತಿಯೊಬ್ಬರಿಗೂ ಬಹಳ ಅಗತ್ಯ. ಕಾರಾಗೃಹ ವಾಸಿಗಳಿಗೆ ನಿರಂತರವಾಗಿ ನಡೆಯಬೇಕು. ಇದರಿಂದ ಅನೇಕರು ಮನ: ಪರಿವರ್ತನೆ ಹೊಂದಿ ಉತ್ತಮ ಬದುಕನ್ನು ನಡೆಸುತ್ತಿರುವ ಉದಾಹರಣೆಗಳು ಹಲವಾರು ಇವೆ. ಕಾರಾಗೃಹ ಶಿಕ್ಷೆಯನ್ನು ಅನುಭವಿಸುವ ಕೇಂದ್ರವಲ್ಲ ಮನ:ಪರಿವರ್ತನೆಯ ಕೇಂದ್ರವಾಗಿದೆ ಎಂದು ತಿಳಿಸಿದರು. ಶಿಬಿರದಲ್ಲಿ ಇಡೀ ಶರೀರವನ್ನು ಕ್ರಿಯಾಶೀಲಗೊಳಿಸುವ ಚಪ್ಪಾಳೆಯೋಗವನ್ನು ನಿತ್ಯ ಕಲಿಸಲಾಯಿತು.  ಕಾರ್ಯಕ್ರಮದಲ್ಲಿ ಮುಖ್ಯ ವಾರ್ಡನ್ ಸಂಗಪ್ಪ, ಚೀಫ್ ವಾರ್ಡರ್ ಮಹೇಶ್, ಕಾರಾಗೃಹದ ಸಿಬ್ಬಂಧಿ, 175 ಕ್ಕೂ ಹೆಚ್ಚು ಕಾರಾಗೃಹ ವಾಸಿಗಳು ಬಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News