ಪ್ರತ್ಯೇಕ ನಾಡ ಧ್ವಜ ಬೆಂಬಲಿಸಿ ರ್ಯಾಲಿ
ಶಿವಮೊಗ್ಗ, ಜು. 20: ರಾಜ್ಯಕ್ಕೆ ಪ್ರತ್ಯೇಕ ನಾಡ ಧ್ವಜವನ್ನು ಅಧಿಕೃತವಾಗಿ ಮಾಡಲು ಸರ್ಕಾರ ಮುಂದಾಗಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಗತಿಸಿದೆ.
ಜಿಲ್ಲಾಧಿಕಾರಿ ಕಚೇರಿ ಎದುರು ಈ ಸಂಬಂಧ ಬೃಹತ್ ಕನ್ನಡ ಧ್ವಜವನ್ನು ಪ್ರದರ್ಶಿಸುವುದರ ಮೂಲಕ ಬೆಂಬಲ ವ್ಯಕ್ತಪಡಿಸಿದ ಕಾರ್ಯಕರ್ತರು ಪ್ರತ್ಯೇಕ ನಾಡಧ್ವಜದಿಂದ ರಾಷ್ಟ್ರಧ್ವಜಕ್ಕೆ ಮತ್ತು ರಾಷ್ಟ್ರೀಯತೆಗೆ ಯಾವುದೇ ರೀತಿಯ ಅಗೌರವ ಅಥವಾ ಧಕ್ಕೆ ಬರುವುದಿಲ್ಲ ಎಂದರು.
ಕನ್ನಡ ಧ್ವಜ ಕನ್ನಡ ಪ್ರೇಮವನ್ನು ಬಿಂಬಿಸುವುದಲ್ಲದೆ, ಕರ್ನಾಟಕದಲ್ಲಿ ಕನ್ನಡವೇ ಭಾಷೆ ಎನ್ನುವುದನ್ನು ಸಾರಿ ಹೇಳಲಿದೆ. ಈ ನಡೆಯಲ್ಲಿ ಸರ್ಕಾರ ಕೈಗೊಂಡಿರುವ ನಿರ್ಧಾರ ಸರಿಯಾಗಿದೆ ಎಂದು ಹೇಳಿದರು.
ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳ ಮತ್ತು ಸಂಘ ಸಂಸ್ಥೆಗಳ ಮೇಲೆ ಕೇವಲ ನವೆಂಬರ್‌ನಲ್ಲಿ ಮಾತ್ರವಲ್ಲದೆ ವರ್ಷದ ಎಲ್ಲಾ ತಿಂಗಳು ಕನ್ನಡ ಧ್ವಜ ಹಾರಾಡುವಂತೆ ಮಾಡಬೇಕೆಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಯಿತು.
ಕರವೇ ತಾಲೂಕು ಅಧ್ಯಕ್ಷ ಆರ್. ಮಂಜು, ಗೌರವಾಧ್ಯಕ್ಷ ಎಸ್. ಮಧು, ಜಿಲ್ಲಾ ಪ್ರಧಾನ ಸಂಚಾಲಕ ಎಸ್. ವೆಂಕಟೇಶ್, ಶೈಲೇಶ್ ಕುಮಾರ್, ವಿಜಯ್ ಕುಮಾರ್, ರಾಜು, ರವಿ ಮೊದಲಾದವರಿದ್ದರು.