ವಿದ್ಯುತ್ ತಂತಿ ಸ್ಪರ್ಶ ಕಾಡಾನೆ ಸಾವು

Update: 2017-07-20 12:03 GMT

ಸಿದ್ದಾಪುರ , ಜು. 20: ವಿದ್ಯುತ್ ತಂತಿ ಸ್ಪರ್ಶಿಸಿ ಕಾಡಾನೆಯೊಂದು ಮೃತಪಟ್ಟಿರುವ ಘಟನೆ ಸಮೀಪದ ಅಬ್ಯತ್ ಮಂಗಲ ಗ್ರಾಮದ ವಿಶ್ವನಾಥ ಎಂಬುವವರ ಅಡಿಕೆ ತೋಟದಲ್ಲಿ ನಡೆದಿದೆ.

 ಒಣಗಿದ ಮರ ವಿದ್ಯುತ್ ಕಂಬಿಗಳ ಮೇಲೆ ಬಿದ್ದಿರುವುದೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಮೃತ ಹೆಣ್ಣಾನೆ 12 ವರ್ಷ ಪ್ರಾಯದ್ದು ಎಂದು ಅಂದಾಜಿಸಲಾಗಿದ್ದು, ಕಳೆದ 5 ದಿನಗಳಿಂದ ಈ ಭಾಗದಲ್ಲಿ ವಿದ್ಯುತ್ ಕಡಿತಗೊಂಡಿರುವ ಹಿನ್ನಲೆ ಸೆಸ್ಕ್ ಇಲಾಖೆ ಸಿಬ್ಬಂದಿಗಳು ಗುರುವಾರ ಬೆಳಗ್ಗೆ ವಿದ್ಯುತ್ ತಂತಿ ದುರಸ್ಥಿ ಪಡಿಸಲು ತೆರಳಿದಾಗ ಆನೆ ಸತ್ತಿರುವುದು ಗಮನಕ್ಕೆ ಬಂದಿದ್ದು, ಅರಣ್ಯ ಇಲಖೆಗೆ ಮಾಹಿತಿ ತಿಳಿಸಿದ್ದಾರೆ. ಆನೆ ಸತ್ತು 3 ದಿನ ಆಗಿರಬಹುದೆಂದು ಅಂದಾಜಿಸಲಾಗಿದೆ.
     

ಡಿಎಫ್‌ಒ ಸೂರ್ಯಸೇನ್ ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಬಳಿಕ ಮಾದ್ಯಮದೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ವಿದ್ಯುತ್ ಸ್ಪರ್ಷಕ್ಕೆ ಆನೆಗಳು ಬಲಿಯಾಗುತ್ತಿರುವುದು ಅಧಿಕವಾಗುತ್ತಿದೆ. ಇದಕ್ಕೆ ಕೆಲವು ಖಾಸಗಿ ತೋಟದ ಮಾಲಿಕರು ಕೂಡಾ ಕಾರಣರಾಗಿದ್ದಾರೆ. ವಿದ್ಯುತ್ ತಂತಿಗಳು ಹಾದು ಹೋಗುವ ದಾರಿಯಲ್ಲಿರುವ ಮರಗಳನ್ನು ತೆರವುಗೊಳಿಸದೆ ಇರುವುದೇ ಅಪಘಾತ ಸಂಭವಿಸಲು ಕಾರಣ ಎಂದರು. ಸಿಬ್ಬಂದಿಗಳ ಕೊರತೆಯ ನಡುವೆಯೂ ಆನೆಗಳನ್ನು ಕಾಡಿಗೆ ಅಟ್ಟಲು ಸತತ ಪ್ರಯತ್ನ ಮಡುತ್ತಾ ಇದ್ದೇವೆ. ಆದರೆ ತೋಟ ಮಾಲೀಕರು ನಮಗೆ ಸಂಪೂರ್ಣ ಸಹಕಾರ ನೀಡುತ್ತಿಲ್ಲ ಎಂದು ವಿಷಾಧಿಸಿದರು. ವಿದ್ಯುತ್ ಸ್ಪರ್ಷಕ್ಕೆ ಆನೆ ಸತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಸ್ಕ್ ಇಲಾಖೆ ವಿರುದ್ದ ದೂರು ನೀಡಲಾಗಿದೆ. ತನಿಖೆ ಬಳಿಕ ಕ್ರಮ ಜರುಗಿಸಲಾಗುವುದು ಎಂದರು. 

ತಿಂಗಳೊಳಗೆ ವಿದ್ಯುತ್ ಸ್ಪರ್ಶಕ್ಕೆ ಏಳನೇ ಕಾಡಾನೆ ಸಾವನ್ನಪಿದ್ದು, ಸೆಸ್ಕ್ ಹಾಗೂ ಅರಣ್ಯ ಇಲಾಖೆಯ ವಿರುದ್ಧ ಸಾರ್ವಜನಿಕರು ಆಕ್ರೋಷ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News