×
Ad

ಚಿತ್ರಕಲಾ ಪ್ರದರ್ಶನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ

Update: 2017-07-20 18:30 IST

ದಾವಣಗೆರೆ, ಜು.20: ಏಕಾಗ್ರತೆ ಒಳಗೊಂಡ ಚಿತ್ರಕಲೆಯಿಂದ ಮನಸ್ಸು ಅರಳಿಸುವುದರ ಜೊತೆಗೆ ಸಂತೋಷವನ್ನು ನೀಡುವಂತಹ ಶಕ್ತಿ ಕಲೆಗೆ ಇದೆ ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಹೇಳಿದರು.

ನಗರದ ಡಯಟ್ ಸಂಸ್ಥೆಯಲ್ಲಿ ಗುರುವಾರ ಜಿಲ್ಲಾ ಚಿಕ್ರಕಲಾ ಶಿಕ್ಷಕರ ಸಂಘ ವತಿಯಿಂದ ಚಿತ್ರಕಲಾ ಪ್ರದರ್ಶನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಚಿತ್ರಕಲೆಗಳಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಕ್ಷೀಣಿಸುತ್ತಿದ್ದು, ಈ ವೇಳೆ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.

ಚಿತ್ರಕಲೆಯಲ್ಲಿ ಕಲೆಗಾರನ ಮನಸ್ಸನ್ನು ಎಷ್ಟು ದೂರಬೇಕಾದರೂ ಹರಿಸಬಲ್ಲದು. ಆದರೆ, ಏಕಾಗ್ರತೆಯಿಂದ ಮೂಡಿಬರುವ ಚಿತ್ರವು ಮನಸ್ಸನ್ನು ಅರಳಿಸುವುದಲ್ಲದೇ ಸಂತೋಷವನ್ನು ನೀಡುವ ಜೊತೆಗೆ ವ್ಯಕ್ತಿ ಆರೋಗ್ಯಕರ ಜೀವನ ನಡೆಸಲು ಕಲೆಯು ಸಹಕಾರಿಯಾಗಲಿದೆ ಎಂದು ತಿಳಿಸಿದರು. ಚಿತ್ರಕಲೆಗಾರರು ಬಿಡಿಸಿದಂತಹ ಕಲೆ ಇತರರಿಗೂ ಪ್ರೇರಣೆಯಾಗಬೇಕು. ನಮ್ಮಲ್ಲಿಯೇ ಸುಖವಿದ್ದು, ಎಲ್ಲವನ್ನು ಮರೆತು ಬೇರೆಡೆ ಹೋಗುತ್ತಿದ್ದೇವೆ ಎಂದ ಅವರು, ಮುಂಬರುವ ದಿನಗಳಲ್ಲಿ ದಾವಣಗೆರೆಯಲ್ಲಿ 3ನೇ ವಿಶ್ವ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಇಂತಹ ಸಂದರ್ಭದಲ್ಲಿ ಚಿತ್ರಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ತೊಡಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ಉಪವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿ, ಚಿತ್ರಕಲೆ ಎನ್ನುವುದು ರಾಜ ಮಹಾರಾಜರ ಕಾಲದಿಂದಲೂ ಬಂದಿದ್ದು, ಇದರಿಂದಲೇ ಕಲಾವಿದರು ಸುಖ, ಸಂತೋಷವನ್ನು ಕಾಣುತ್ತಿದ್ದು, ಪ್ರಸ್ತುತ ದಿನಗಳಲ್ಲಿ ಚಿತ್ರಕಲೆ ಎನ್ನುವುದು ಗಗನಕುಸುಮವಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಚಿತ್ರಕಲೆ ಬಿಡಿಸುವುದು ಎಂದರೆ ಅದು ಒಂದು ರೀತಿಯ ತಪಸ್ಸಿನಂತೆ. ಕಲೆಗೆ ಪ್ರತಿಯೊಬ್ಬರ ಒಳಗಣ್ಣನ್ನು ತೆರೆಸುವಂತಹ ಶಕ್ತಿ ಇದೆ ಎಂದ ಅವರು, ಗ್ರಾಫಿಕ್ಸ್ ಯುಗದಿಂದ ಚಿತ್ರಕಲೆಯು ನಶಿಸುವುದಕ್ಕೆ ಕಾರಣವಾಗುತ್ತಿದೆ. ನಮ್ಮ ಸಾಂಸ್ಕೃತಿಕ ಸೊಬಗನ್ನು ಆಧುನಿಕತೆ ಕಸಿದುಕೊಳ್ಳುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಜಿ. ಅವುಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ, ಡಯಟ್ ಪ್ರಭಾರಿ ಪ್ರಾಚಾರ್ಯರು ಎಸ್. ಗೀತಾ, ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಆರ್. ಬಸವರಾಜಪ್ಪ, ಪಿ. ನಾಗರಾಜ ಭಾನುವಳ್ಳಿ, ಎಂ.ಸಿ. ದಿವಾಕರ್ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News