‘ಸ್ವತಂತ್ರ ಧರ್ಮ ಸ್ಥಾನಮಾನವನ್ನು ನೀಡಿ’: ಲಿಂಗಾಯತ ಮಹಾ ಸಮಾವೇಶದ ಆಗ್ರಹ
ಬೀದರ್,ಜು.20: ಲಿಂಗಾಯತರಿಗೆ ಸ್ವತಂತ್ರ ಅಲ್ಪಸಂಖ್ಯಾತ ಧರ್ಮದ ಸ್ಥಾನಮಾನ ಕ್ಕಾಗಿ ಆಂದೋಲನವು ಕರ್ನಾಟಕದಲ್ಲಿ ಮತ್ತೊಮ್ಮೆ ಚುರುಕು ಪಡೆದುಕೊಂಡಿದೆ. ಬುಧವಾರ ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣಗಳಿಂದ ಆಗಮಿಸಿದ್ದ 50,000ಕ್ಕೂ ಅಧಿಕ ಲಿಂಗಾಯತರು ಇಲ್ಲಿಯ ನೆಹರು ಮೈದಾನದಲ್ಲಿ ಬೃಹತ್ ರ್ಯಾಲಿ ನಡೆಸಿ ತಮಗೆ ಪ್ರತ್ಯೇಕ ‘ಧಾರ್ಮಿಕ ಅಲ್ಪಸಂಖ್ಯಾತರು’ ಸ್ಥಾನಮಾನವನ್ನು ನೀಡುವಂತೆ ಆಗ್ರಹಿಸಿದರು.
ವಿವಿಧ ಲಿಂಗಾಯತ ಧಾರ್ಮಿಕ ಮುಖಂಡರು ಮತ್ತು ಚುನಾಯಿತ ಜನಪ್ರತಿನಿಧಿ ಗಳನ್ನೊಳಗೊಂಡ ಲಿಂಗಾಯತ ಧರ್ಮ ಸಮನ್ವಯ ಸಮಿತಿಯು ಈ ರ್ಯಾಲಿಯನ್ನು ಸಂಘಟಿಸಿತ್ತು.
ಲಿಂಗಾಯತರಿಗೆ ಪ್ರತ್ಯೇಕ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡುವಂತೆ ಆಗ್ರಹಿಸಿ ತಾವು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಹವಾಲನ್ನು ಸಲ್ಲಿಸಿರುವುದಾಗಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ವಿವಿಧ ಲಿಂಗಾಯತ ಪೀಠಾಧ್ಯಕ್ಷರು ತಿಳಿಸಿದರು.
ಈ ವಿಷಯವನ್ನು ಕೇಂದ್ರ ಸರಕಾರದೊಂದಿಗೆ ಕೈಗೆತ್ತಿಕೊಳ್ಳುವಂತೆ ಮತ್ತು ನಮ್ಮ ಬೇಡಿಕೆಗೆ ಒತ್ತು ನೀಡುವಂತೆ ಮುಖ್ಯಮಂತ್ರಿಗಳನ್ನು ನಾವು ಆಗ್ರಹಿಸಿದ್ದೇವೆ ಎಂದು ಬಸವ ಧರ್ಮ ಪೀಠಾಧಿಕಾರಿ ಮಾತೆ ಮಹಾದೇವಿ ತಿಳಿಸಿದರು.
ತಮ್ಮ ಬೇಡಿಕೆಯ ಬಗ್ಗೆ ಕೇಂದ್ರದೊಂದಿಗೆ ಚರ್ಚಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ದಿಲ್ಲಿಯ ಬಸವ ಮಂಟಪದ ಶ್ರೀಚನ್ನಬಸವಾನಂದ ಸ್ವಾಮೀಜಿಗಳು ತಿಳಿಸಿದರು.
ಲಿಂಗಾಯತರನ್ನು ಹಿಂದು ಧರ್ಮದಿಂದ ಬೇರ್ಪಡಿಸಬೇಕು ಮತ್ತು ಅವರಿಗೆ ಪ್ರತ್ಯೇಕ ಧಾರ್ಮಿಕ ಗುರುತನ್ನು ನೀಡಬೇಕು ಎಂಬ ಆಗ್ರಹ ಈ ಹಿಂದೆ ಹಲವಾರು ಬಾರಿ ಕೇಳಿಬಂದಿತ್ತು. 2011ರ ಜನಗಣತಿ ಸಂದರ್ಭ ಧರ್ಮ ಕಾಲಮ್‌ನಲ್ಲಿ ‘ಇತರರು’ ಎನ್ನುವುದನ್ನು ಆಯ್ಕೆ ಮಾಡುವಂತೆಯೂ ಲಿಂಗಾಯತ ಧುರೀಣರು ಸಮುದಾಯದ ಸದಸ್ಯರಿಗೆ ಕರೆ ನೀಡಿದ್ದರು.
ಕರ್ನಾಟಕದಲ್ಲಿ ಲಿಂಗಾಯತರ ಜನಸಂಖ್ಯೆ ಸುಮಾರು 60 ಲಕ್ಷದಷ್ಟಿದ್ದು, 2009ರಲ್ಲಿ ವೀರಶೈವ ಬಣಜಿಗ, ವೀರಶೈವ ಆರಾಧ್ಯ ಇತ್ಯಾದಿ ಉಪಪಂಗಡಗಳು ಸೇರಿದಂತೆ ಲಿಂಗಾಯತರನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲಾಗಿತ್ತು.
ಪ್ರತ್ಯೇಕ ಧರ್ಮ ಸ್ಥಾನಮಾನದ ಬೇಡಿಕೆ ದಶಕಗಳಿಂದಲೂ ಅಸ್ತಿತ್ವದಲ್ಲಿದ್ದರೂ ಸಮುದಾಯದ ರಾಜಕೀಯ ನಾಯಕರು ಈ ಬಗ್ಗೆ ವೌನ ವಹಿಸಿದ್ದೇ ಹೆಚ್ಚು.
ಉಸ್ತರಿ ಮಠದ ಶ್ರೀಕೊರ್ಣೇಶ್ವರ ಮಹಾಸ್ವಾಮಿಗಳು, ಬೆಲ್ದಾಳ ಶರಣರು, ಬಸವಕಲ್ಯಾಣದ ಶ್ರೀಬಸವ ಪ್ರಭು ಸ್ವಾಮೀಜಿ, ಭತಂಬರಾ ಶ್ರೀಗಳೂ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್ ಶಾಸಕರಾದ ರಾಜಶೇಖರ ಪಾಟೀಲ್, ರಹೀಂ ಖಾನ್, ಪ್ರಭು ಚವಾಣ್, ಅಶೋಕ ಖೇಣಿ, ಮಲ್ಲಿಕಾರ್ಜುನ ಖೂಬಾ ಮತ್ತು ವಿಜಯ ಸಿಂಗ್ ಸೇರಿದಂತೆ ಹಲವಾರು ರಾಜಕೀಯ ನಾಯಕರೂ ಉಪಸ್ಥಿತರಿದ್ದರು.