ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ನಿಲ್ಲದು: ಕೆ.ಎಸ್.ಪುಟ್ಟಣ್ಣಯ್ಯ
ಮಂಡ್ಯ, ಜು.20: ಅಕ್ರಮವಾಗಿ ನಡೆಯುತ್ತಿರುವ ಗಣಿಗಾರಿಕೆ ವಿರುದ್ಧ ತನ್ನ ಹೋರಾಟವಾಗಿದ್ದು, ಯಾವುದೇ ವ್ಯಕ್ತಿ ಅಥವಾ ಜನಪ್ರತಿನಿಧಿ ವಿರುದ್ಧದ ವೈಯಕ್ತಿಕ ಹೋರಾಟವಲ್ಲ ಎಂದು ಶಾಸಕ ಹಾಗು ರೈತಸಂಘದ ವರಿಷ್ಠ ಕೆ.ಎಸ್.ಪುಟ್ಟಣ್ಣಯ್ಯ ಸಂಸದ ಸಿ.ಎಸ್.ಪುಟ್ಟರಾಜು ಅವರಿಗೆ ಎದುರೇಟು ನೀಡಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಂಡವಪುರ ತಾಲೂಕಿನಲ್ಲಿ ಸುಮಾರು 900 ಎಕರೆ ಪ್ರದೇಶದಲ್ಲಿ ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಯುತ್ತಿದೆ. ಅದರಲ್ಲಿ ಹಲವು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮುಖಂಡರೂ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು. ಕಾನೂನು ಪ್ರಕಾರ ಪುಟ್ಟರಾಜು ಸೇರಿದಂತೆ ಯಾರುಬೇಕಾದರೂ ಗಣಿಗಾರಿಕೆ ನಡೆಸಿದರೆ ಅಭ್ಯಂತರವಿಲ್ಲ. ಆದರೆ, ಪ್ರಾಕೃತಿ ಸಂಪತನ್ನು ಅಕ್ರಮವಾಗಿ ದೋಚುವವರ ವಿರುದ್ಧ ತನ್ನ ಸಂಘಟನೆ ನಿರಂತರ ಹೋರಾಟ ನಡೆಸುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ರಾಜ್ಯದ ಅಕ್ರಮ ಗಣಿಗಾರಿಕೆಯನ್ನು ಸಿಓಡಿ ತನಿಖೆಗೆ ಒಳಪಡಿಸಲು ಮುಖ್ಯಮಂತ್ರಿಗಳು ನಿರ್ದೇಶನ ನೀಡಿದ್ದು, ಎಸ್‌ಐಟಿ ತನಿಖೆಗೆ ನಾನು ಆಗ್ರಹಿಸಿದ್ದೇನೆ.ಪುಟ್ಟಣ್ಣಯ್ಯ ಮತ್ತು ಪುಟ್ಟರಾಜು ಕುಟುಂಬದ ಲಾಲನೆ ಪಾಲನೆಗೆ ಪ್ರಾಕೃತಿಕ ಸಂಪತ್ತು ಬಳಕೆಯಾಗಬಾರದುಎಂದು ಅವರು ಹೇಳಿದರು.
ಸುಳ್ಳು ಹೇಳುವುದರಲ್ಲಿ ನಿಸ್ಸೀಮರಾದ ಸಂಸದ ಪುಟ್ಟರಾಜು ಅವರನ್ನು ಅಖಿಲ ಕರ್ನಾಟಕದ ಸುಳ್ಳುಗಾರರ ಸಂಘಕ್ಕೆ ಅಧ್ಯಕ್ಷನ್ನಾಗಿ ಮಾಡಬಹುದು ಎಂದು ಟೀಕಿಸಿದ ಪುಟ್ಟಣ್ಣಯ್ಯ, ಅಕ್ರಮ ಕಲ್ಲುಗಣಿಗಾರಿಕೆಯ ಸಂಬಂಧ ದಂಡ ಪಾವತಿಸಿ, ಅಂಜಿಕೆಯಿಲ್ಲದೆ ಮಾತನಾಡುವುದನ್ನು ಪುಟ್ಟರಾಜು ಬಿಡಬೇಕು ಎಂದು ಸಲಹೆ ಮಾಡಿದರು.
ತಾನು ಗಣಿಗಾರಿಕೆ ಸೇರಿದಂತೆ ಯಾವುದೇ ಅಕ್ರಮ, ಅವ್ಯವಹಾರ ನಡೆಸಿರುವುದರನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಅಂತೆಯೇ ಪುಟ್ಟರಾಜು ಅವರ ಅಕ್ರಮ ಬಯಲಾದರೆ ರಾಜಕೀಯ ತ್ಯಜಿಸುವರೆ ಎಂದು ಅವರು ಪುಟ್ಟರಾಜು ಅವರ ಸವಾಲನ್ನು ಸ್ವೀಕರಿಸಿದರು.
ಪುಟ್ಟರಾಜು ಅವರು ಲೋಕಸಭೆಯಲ್ಲಿ ಎಷ್ಟು ಬಾರಿ ಮಾತನಾಡಿದ್ದಾರೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ. ಅವರ ರಾಜಕೀಯ ಬೆಳವಣಿಗೆಗೆ ನಾನು ಅಡ್ಡಿ ಪಡಿಸುತ್ತಿದ್ದೇನೆ ಎಂಬುದು ಸುಳ್ಳು. ಮತದಾರರು ನೀಡುವ ತೀರ್ಪಿಗೆ ತಲೆಬಾಗಬೇಕು ಎಂದು ಅವರು ಹೇಳಿದರು.
ಜು.21 ರಂದು ಧರಣಿ: ಮಹಾದಾಯಿ ಹೋರಾಟ ಎರಡು ವರ್ಷ ತುಂಬಿದರೂ ಸರಕಾರ ಸ್ಪಂದಿಸಿಲ್ಲವೆಂದು ಕಿಡಿಕಾರಿದ ಪುಟ್ಟಣ್ಣಯ್ಯ, ಮಹಾದಾಯಿ ಹೋರಾಟ ಬೆಂಬಲಿಸಿ ಜು.21 ಬೆಳಗ್ಗೆ 11ಕ್ಕೆ ನಗರದಲ್ಲಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದರು.
ಭತ್ತದ ನಾಟಿಗೆ ಈಗಾಗಲೇ ತಡವಾಗಿದ್ದು, ಕೂಡಲೇ ಜಲಾಶಯಗಳಿಂದ ನಾಲೆಗಳಿಗೆ ನೀರುಹರಿಸಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳು ಹೊಸದಾಗಿ ಕೃಷಿಕರಿಗೆ ಸಾಲ ವಿತರಿಸಬೇಕು ಎಂದು ಅವರು ಒತ್ತಾಯಿಸಿದರು.
ಜಿಪಂ ಮಾಜಿ ಸದಸ್ಯ ಕೆಂಪೂಗೌಡ, ಬಿ.ಬೊಮ್ಮೇಗೌಡ, ಶ್ಯಾಂಸುಂದರ್, ಕೆಂಪೇಗೌಡ ಹಾಗವಿಜಯ್‌ಕುಮಾರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.