ಅತಿವೃಷ್ಟಿ ಎದುರಿಸಲು ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆ : ಜಿಲ್ಲಾಧಿಕಾರಿ

Update: 2017-07-20 15:52 GMT

ಮಡಿಕೇರಿ, ಜು.20: ಅತಿವೃಷ್ಟಿ ಎದುರಿಸಲು ಜಿಲ್ಲಾಡಳಿತ ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಅಗತ್ಯವಿರುವೆಡೆ ಗಂಜಿ ಕೇಂದ್ರ ತೆರೆಯಲಾಗುವುದು. ಪ್ರವಾಹ ಪೀಡಿತ ಪ್ರದೇಶದಲ್ಲಿನ ಜನರನ್ನು ಸ್ಥಳಾಂತರ ಮಾಡಲು ಸಹ ಜಿಲ್ಲಾಡಳಿತ ಸನ್ನದ್ದವಾಗಿದೆ ಎಂದು ಅವರು ಹೇಳಿದರು. ಕಳೆದ ಎರಡು ಮೂರು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಕುಟ್ಟ-ಪೆರಂಬಾಡಿ ರಸ್ತೆ ಮಾರ್ಗ ಸಂಪರ್ಕ ಕಡಿದುಕೊಂಡಿದ್ದು, ಈ ಸಂಬಂಧ ಬದಲಿ ವ್ಯವಸ್ಥೆ ಮಾಡಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಭಾಗಮಂಡಲದಲ್ಲಿ ಪ್ರವಾಹ ಎದುರಿಸಲು 10 ಮಂದಿ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ರಿವರ್ ರ್ಯಾಪ್ಟ್ ಮತ್ತು ಒಂದು ಬೋಟ್ ವ್ಯವಸ್ಥೆ ಮಾಡಲಾಗಿದೆ. ಹೆಚ್ಚುವರಿಯಾಗಿ ಬೋಟ್ ತರಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ದಕ್ಷಿಣ ಕೊಡಗಿನ ಹಲವು ಭಾಗಗಳಲ್ಲಿ ಜಲಾವೃತ ಉಂಟಾಗಿದ್ದು, ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಅರಣ್ಯ, ಲೋಕೋಪಯೋಗಿ, ವಿದ್ಯುತ್, ಸ್ಥಳೀಯ ಪಂಚಾಯತ್ ಗಳು ಸದಾ ಪ್ರವಾಹ ಮುನ್ನೆಚ್ಚರಿಕೆ ಎದುರಿಸಲು ಸನ್ನದ್ಧರಾಗಿರುವಂತೆ ಜಿಲ್ಲಾಧಿಕಾರಿಯವರು ಸೂಚನೆ ನೀಡಿದರು. ಎಲ್ಲಾ ಹಂತದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಪ್ರವಾಹ ಸಂದರ್ಭದಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಗಳು ಉಂಟಾಗದಂತೆ ಗಮನಹರಿಸುವಂತೆ ಅವರು ಸೂಚನೆ ನೀಡಿದರು.

ಭಾಗಮಂಡಲಕ್ಕೆ ಬೋಪಯ್ಯ ಭೇಟಿ 

ಶಾಸಕರಾದ ಕೆ.ಜಿ.ಬೋಪಯ್ಯ ಮತ್ತು ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್ ಅವರು ಗುರುವಾರ ಭಾಗಮಂಡಲಕ್ಕೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಪರಿಶೀಲಿಸಿದರು.
ಮಳೆಯಿಂದ ಹಾನಿಯಾಗುತ್ತಿರುವ ಭಗಂಡೇಶ್ವರ ದೇವಸ್ಥಾನ ಛಾವಣಿ ಪರಿಶೀಲನೆ ಮಾಡಿದರು. ಪ್ರಮುಖರಾದ ಕುದುಕುಳಿ ಭರತ್, ಕಡ್ಲೇರ ಕೀರ್ತನ್ ಜಿ.ಪಂ. ಸದಸ್ಯರಾದ ಕುಮಾರ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News