ಅಂಬೇಡ್ಕರ್ ಆದರ್ಶಗಳನ್ನು ಅನುಸರಿಸಲು ಡಾ.ತುಕಾರಾಂ ಕರೆ

Update: 2017-07-20 16:03 GMT

ಮಂಡ್ಯ, ಜು.20: ಡಾ.ಬಿ.ಆರ್.ಅಂಬೇಡ್ಕರ್ ಅವರು ತೋರಿದ ಹಾದಿ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರು ಅನುಸರಿಸಬೇಕು ಎಂದು ರಾಜ್ಯ ಸಂಪನ್ಮೂಲ ಕೇಂದ್ರದ ನಿರ್ದೇಶಕ ಡಾ.ತುಕರಾಂ ಕರೆ ನೀಡಿದ್ದಾರೆ.

ಡಾ.ಬಿ.ಆರ್.ಅಂಬೇಡ್ಕರ್‌ರವರ 126ನೆ ವರ್ಷಾಚರಣೆ ಅಂಗವಾಗಿ ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲ್ಲಿ ಗುರುವಾರ ನಡೆದ ಅಂಬೇಡ್ಕರ್ ತಮಗಿದೋ ನಮ್ಮ ಗೌರವ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಪ್ರತಿಯೊಬ್ಬರು ಕಾರ್ಯನಿರ್ವಹಿಸಬೇಕು. ಹಾಗೂ ಸ್ವಾತಂತ್ರ್ಯ, ಸಮಾನತೆ ಪರಿಕಲ್ಪನೆ ಬಳಕೆಗೆ ಬರಲು ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಸಂದೇಶಗಳು ಕಾರಣವಾಗಿವೆ ಎಂದು ಅವರು ಹೇಳಿದರು.
ಅಂಬೇಡ್ಕರ್ ಹೇಳಿರುವಂತೆ ಸಮಾಜದಲ್ಲಿ ಬೇರೂರಿರುವ ಅಸಮಾನತೆ, ಅಸ್ಪಶ್ಯತೆ ವಿರುದ್ಧ ಹೋರಾಡಬೇಕಾದರೆ ಮೊದಲು ನಾವು ಶಿಕ್ಷಿತರಾಗಬೇಕು. ನಂತರ, ಸಂಘಟಿತರಾಗಿ ಸಿಗಬೇಕಾದ ಹಕ್ಕುಗಳಿಗೆ ಹೋರಾಟ ನಡೆಸಬೇಕು ಎಂದು ಅವರು ಸಲಹೆ ಮಾಡಿದರು.
ಅಂಬೇಡ್ಕರ್ ಅವರ ವಿಚಾರಧಾರೆಯನ್ನು ಇಂದು ಪ್ರಪಂಚದಾದ್ಯಂತ ಶೈಕ್ಷಣಿಕ ಉಪನ್ಯಾಸಗಳಲ್ಲಿ ಅನುಸರಣಿಸುತ್ತಿದ್ದು, ಸಮಾನತೆ, ಮಾನವೀಯತೆ ಪ್ರಜ್ಞೆಯನ್ನು ಇಂದಿನ ಸಮಾಜದಲ್ಲಿ ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ಅವರು ತಿಳಿಸಿದರು. ಭಾರತದ ಅಂತಕರಣ ಉಳಿಸಿದ ಮಹಾನ್ ವ್ಯಕ್ತಿ ಅಂಬೇಡ್ಕರ್ ಅವರನ್ನು ಈ ಕಾರ್ಯಕ್ರಮದ ಆಯೋಜನೆ ಮಾಡಿ ನೆನಪಿಸಿಕೊಳ್ಳಲು ಸರಕಾರ ಮಾಡಿರುವ ಈ ಕಾರ್ಯಕ್ರಮ ಸಮಯೋಚಿತ ಎಂದು ಅವರು ಅಭಿಪ್ರಾಪಟ್ಟರು.

ಕಾರ್ಯಕ್ರಮದ ಆರಂಭದಲ್ಲಿ ಹುರಗಲವಾಡಿ ರಾಮಯ್ಯ, ಗೋವಿಂದರಾಜು ಮತ್ತು ತಂಡದವರಿಂದ ಹೋರಾಟದ ಹಾಡುಗಳು, ಗಾಮನಹಳ್ಳಿ ಸ್ವಾಮಿ ಮತ್ತು ತಂಡದಿಂದ ಪ್ರಗತಿಪರ ಹಾಡುಗಳು ಹಾಗು ಸವಿತ ಮತ್ತು ತಂಡದ ಪೂಜಾ ಕುಣಿತ ಗಮನ ಸೆಳೆದವು.
ಜಿಲ್ಲಾಧಿಕಾರಿ ಎಸ್.ಝೀಯಾವುಲ್ಲಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ, ಅಪರ ಜಿಲ್ಲಾಧಿಕಾರಿ ಬಿ.ಆರ್.ಪೂರ್ಣಿಮಾ, ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ಗುರುಪ್ರಸಾದ್ ಕೆರಗೋಡು, ಡಾ.ಬಾಬು ಜಗಜೀವನರಾಂ ಸಂಘದ ಅಧ್ಯಕ್ಷ ಚಂದ್ರಶೇಖರ್, ದಸಂಸ ಮುಖಂಡ ಎಂ.ಬಿ.ಶ್ರೀನಿವಾಸ್, ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News