ಗ್ರಾಮೀಣರ ವಲಸೆಯಿಂದ ನಗರ, ಪಟ್ಟಣ ಸಮಸ್ಯೆ ಉಲ್ಬಣ: ಸಚಿವ ಈಶ್ವರ್ ಖಂಡ್ರೆ ಆತಂಕ

Update: 2017-07-20 16:07 GMT

ಮದ್ದೂರು, ಜು.20: ಗ್ರಾಮೀಣ ಪ್ರದೇಶದ ಜನರ ವಲಸೆಯಿಂದ ಪಟ್ಟಣ, ನಗರ ಪ್ರದೇಶಗಳ ಸಮಸ್ಯೆ ಹೆಚ್ಚುತ್ತಿವೆ ಎಂದು ಪೌರಾಡಳಿತ ಸಚಿವ ಈಶ್ವರ್ ಖಂಡ್ರೆ ಆತಂಕ ವ್ಯಕ್ತಪಡಿಸಿದ್ದಾರೆ.
ಗುರುವಾರ ಪುರಸಭೆಯಲ್ಲಿ ಪ್ರಗತಿ ಪರಿಶೀಲನಾ ಸಭೆಯ ನಡೆಸಿದ ಅವರು, ನಗರ, ಪಟ್ಟಣಗಳ ಸಮಸ್ಯೆಗಳ ನಿವಾರಣೆಗೆ ಸರಕಾರ ಕ್ರಮವಹಿಸಿದೆ ಎಂದರು.

ರಾಜ್ಯದಲ್ಲಿ ಪೌರಕಾರ್ಮಿಕರ ಹುದ್ದೆಗಳನ್ನು ಖಾಯಂಗೊಳಿಸುವುದರೊಡನೆ ಆಯ್ದ ಕಾರ್ಮಿಕರನ್ನು ವಿದೇಶಕ್ಕೆ ಕಳುಹಿಸಿ ಅಲ್ಲಿನ ಶುಚಿತ್ವ, ನೈರ್ಮಲ್ಯ ನಿರ್ವಹಣೆ ಕುರಿತು ತರಬೇತಿ ನೀಡಲು ಯೋಜಿಸಲಾಗಿದೆ ಎಂದು ಅವರು ತಿಳಿಸಿದರು. ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿಯಲ್ಲಿ ಮನೆ ನಿರ್ಮಿಸಿಕೊಳ್ಳಲು 2.5ಲಕ್ಷ ಸಹಾಯಧನ ನೀಡಲಾಗುತ್ತಿದೆ. ಕೆಲಸಕ್ಕೆ ಅಗತ್ಯವಾದ ಪರಿಕರ ಹಾಗು ಅವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಕ್ರಮಕೈಗೊಳ್ಳಲಾಗಿದೆ ಎಂದರು. ಪುರಸಭೆ ಅಧಿಕಾರಿ, ಸಿಬ್ಬಂದಿ ಕೇಂದ್ರ ಸ್ಥಾನದಲ್ಲಿ ವಾಸವಿಲ್ಲದ ಬಗ್ಗೆ ದೂರುಗಳು ಕೇಳಿಬರುತ್ತಿದ್ದು, ಕೇಂದ್ರ ಸ್ಥಾನದಲ್ಲಿ ವಾಸವಿರದ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಸಚಿವರ ಎಚ್ಚರಿಕೆ ನೀಡಿದರು.

ಪಟ್ಟಣದಲ್ಲಿ ಕಟ್ಟಡ ನಿರ್ಮಾಣ ಪರವಾನಗಿ ಪಡೆಯಲು ಬಿಎಂಐಸಿ ಮಂಡಳಿಯಿಂದಲೇ ಅನುಮತಿ ಪಡೆಯಬೇಕಿರುವುದು ತ್ರಾಸ ದಾಯಕವಾಗಿದೆ. ಈ ಪದ್ಧತಿಯನ್ನು ರದ್ದುಗೊಳಿಸಿ ಪರವಾನಗಿ ನೀಡುವ ಅಧಿಕಾರವನ್ನು ಸ್ಥಳೀಯವಾಗಿ ನೀಡಬೇಕು ಎಂದು ಪುರಸಭೆ ಸದಸ್ಯರಾದ ಎಂ.ಪಿ.ಮಂಜುನಾಥ್, ರಘು, ಮಹೇಶ್ ಸಚಿವರಲ್ಲಿ ಮನವಿ ಮಾಡಿದರು.

ಪುರಸಭಾಧ್ಯಕ್ಷೆ ಭಾಗ್ಯಾಸತೀಶ್, ಸದಸ್ಯರಾದ ಎಂ.ಐ.ಪ್ರವೀಣ್, ಅಸ್ಲಾಂಪಾಷ, ಮನ್ಸೂರ್‌ಖಾನ್, ವಿಜಯ ಮಲ್ಲಿಕಾರ್ಜುನ, ಮುಖ್ಯಾಧಿಕಾರಿ ಕರಿಬಸವಯ್ಯ, ಬಿಎಂಐಸಿ ಯೋಜನಾಧಿಕಾರಿ ಬಾಲಚಂದ್ರ, ಕಾರ್ಯಪಾಲಕ ಎಂಜಿನಿಯರ್ ಸುರೇಶ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕುಬೇರ, ಇತರರು ಉಪಸ್ಥಿತರಿದ್ದರು. ನಂತರೆ, ಪಟ್ಟಣದ ವಿವಿಧ ಕಡೆ ಸಚಿವರು ಭೇಟಿ ನೀಡಿ ಪರಿಶೀಲಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News