ನಾಡಧ್ವಜಕ್ಕೆ ಕಾನೂನಾತ್ಮಕ ಮಾನ್ಯತೆ ಸಮಿತಿ ರಚನೆ ಹಿಂಪಡೆಯದಂತೆ ಒತ್ತಾಯಿಸಿ ಪ್ರತಿಭಟನೆ
ಚಿಕ್ಕಮಗಳೂರು, ಜು.21: ನಾಡಧ್ವಜಕ್ಕೆ ಕಾನೂನಾತ್ಮಕ ಮಾನ್ಯತೆ ನೀಡಲು ರಾಜ್ಯ ಸರಕಾರ ಸಮಿತಿ ರಚಿಸಿದ್ದನ್ನು ಯಾವುದೇ ಕಾರಣಕ್ಕೂ ಹಿಂಪಡೆಯಬಾರದು ಎಂದು ಒತ್ತಾಯಿಸಿ ಧ್ರುವತಾರೆ ಕನ್ನಡ ರಕ್ಷಣಾ ವೇಧಿಕೆ ಕಾರ್ಯಕರ್ತರು ಶುಕ್ರವಾರ ನಗರದ ಹನುಮಂತಪ್ಪ ವೃತ್ತದ ಬಳಿ 200 ಮೀಟರ್ ಉದ್ದದ ಕನ್ನಡ ಬಾವುಟ ಹಾರಿಸುವ ಮೂಲಕ ಪ್ರತಿಭಟನೆ ನಡೆಸಿದರು.
ರಾಜ್ಯ ಸರಕಾರ ನಾಡಧ್ವಜವನ್ನು ವಿನ್ಯಾಸಗೊಳಿಸಿ ಕಾನೂನಾತ್ಮಕ ಮಾನ್ಯತೆ ನೀಡಲು ಹೊರಟಿರುವುದು ಸ್ವಾಗತಾರ್ಹ. ಸಂವಿಧಾನದಲ್ಲಿ ಒಂದು ರಾಜ್ಯಕ್ಕೆ ಧ್ವಜ ಬೇಕೆಂಬುದಾಗಲೀ, ಬೇಡ ಎಂಬುದಾಗಲೀ ನಮೂದಾಗಿಲ್ಲ. ಅಲ್ಲಿ ರಾಷ್ಟ್ರಧ್ವಜ ಬಗ್ಗೆ ಮಾತ್ರ ಉಲ್ಲೇಖವಿದೆ. ಹಾಗಾಗಿ ಸಂವಿಧಾನದಲ್ಲಿ ಆ ವಿಷಯ ಮುಕ್ತವಾಗಿದೆ. ರಾಜ್ಯಕ್ಕೆ ತನ್ನದೆಯಾದ ಗುರುತು ಬೇಕು ಎಂದಾದರೆ ರಾಜಭಾಷೆ ಇದ್ದ ಹಾಗೆ ರಾಜ್ಯಧ್ವಜ ಇರುವುದರಲ್ಲಿ ಯಾವ ತಪ್ಪೂ ಇಲ್ಲ ಎಂದು ಪ್ರತಿಭಟನಾಕಾರರು ಹೇಳಿದರು.
ದೇಶದಲ್ಲಿ ರಾಷ್ಟ್ರಧ್ವಜವೇ ಸರ್ವೋನ್ನತ. ಒಂದು ಪ್ರಾಂತೀಯ ಧ್ವಜ ಬಂದರೆ ಅದು ರಾಷ್ಟ್ರ ಧ್ವಜದ ಕೆಳಗಡೆ ಇರಬೇಕು. ನಮ್ಮನ್ನು ನಾವು ಗುರುತಿಸಿಕೊಳ್ಳಲು ನೆಲ, ಜಲ ಭಾಷೆಯನ್ನು ಪ್ರತಿಬಿಂಬಿಸಲು ಸಾಂಸ್ಕೃತಿಕ ಧ್ವಜ ಬೇಕು. ಕನ್ನಡ ಹೋರಾಟಗಾರ ರಾಮಮೂರ್ತಿಯವರಿಂದ ಪ್ರೇರೇಪಿತಗೊಂಡ ಕನ್ನಡ ಬಾವುಟ ರಾಜಕೀಯ ಹೋರಾಟದ ಮಧ್ಯೆಯೇ 1968ರಲ್ಲಿ ಹಳದಿ ಮತ್ತು ಕೆಂಪು ಅನಧಿಕೃತ ನಾಡಧ್ವಜ ರೂಪಗೊಂಡಿದೆ. ಇದನ್ನು ಎಲ್ಲರೂ ಒಪ್ಪಿಕೊಂಡು ಭಾವನಾತ್ಮಕವಾಗಿ ಸ್ವೀಕರಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ದೇಶಕ್ಕೊಂದು ಧ್ವಜ ಇರುವಂತೆ ಕರ್ನಾಟಕಕ್ಕೆ ಏಕೆ ಪ್ರತ್ಯೇಕ ಧ್ವಜ ಇರಬಾರದು. ನಾವೇನು ದೇಶದ ಧ್ವಜಕ್ಕೆ ಪರ್ಯಾಯ ಧ್ವಜ ಬೇಕೆಂದು ಕೇಳುತ್ತಿಲ್ಲ. ನಮಗೆ ನಮ್ಮ ರಾಷ್ಟ್ರ ಧ್ವಜವೇ ಸಾರ್ವಭೌಮ. ನಮ್ಮತನ ಗುರುತಿಸಿಕೊಳ್ಳಲು ನಮ್ಮನಾಡು, ನುಡಿ, ಸಂಸ್ಕೃತಿಯನ್ನು ಬಿಂಬಿಸುವ ಕರ್ನಾಟಕ ಧ್ವಜ ಇರಬೇಕು. ಸರ್ಕಾರಕ್ಕೆ ಗಂಡಬೇರುಂಡ ಲಾಂಛನವಿದೆ. ಕರ್ನಾಟಕ ಮಾತ್ರವಲ್ಲದೇ ದೇಶದ ವಿವಿಧ ರಾಜ್ಯಗಳಿಗೂ ಇಂತಾ ಲಾಂಛನಗಳಿವೆ. ನಮ್ಮ ಸಂಸ್ಕೃತಿಯ ಪ್ರತೀಕವಾಗಿರುವ ನಾಡಧ್ವಜಕ್ಕೆ ಮಾನ್ಯತೆ ನೀಡುವುದು ಅಗತ್ಯ ಎಂದು ಪ್ರತಿಭಟನಾಕಾರರು ಹೇಳಿದರು.
ಈ ವೇಳೆ ಧ್ರುವತಾರೆ ಕನ್ನಡ ರಕ್ಷಣಾ ವೇಧಿಕೆಯ ರಾಜ್ಯಾಧ್ಯಕ್ಷ ಡಿ.ಎಚ್.ಮೋಹನ್ ಕುಮಾರ್, ರಾಜ್ಯ ಕಾರ್ಯಾಧ್ಯಕ್ಷ ನೂರುಲ್ಲಾಖಾನ್ ಮತ್ತಿತರರು ಇದ್ದರು.