ಸಕಾಲದಲ್ಲಿ ದೊರಕದ ಚಿಕಿತ್ಸೆ: ವಿದ್ಯಾರ್ಥಿ ಸಾವು
Update: 2017-07-21 18:46 IST
ಗುಂಡ್ಲುಪೇಟೆ, ಜು.21: ಸಕಾಲದಲ್ಲಿ ಚಿಕಿತ್ಸೆ ದೊರಕದೆ ಪಟ್ಟಣದ ಖಾಸಗಿ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯೊಬ್ಬ ಸಾವಿಗೀಡಾಗಿರುವ ಘಟನೆ ನಡೆದಿದೆ.
ಪಟ್ಟಣದ ಕೃಷ್ಣಮೂರ್ತಿ ಎಂಬುವರ ಮಗ ಹರ್ಷಿತ್(16) ಗುರುವಾರ ಮಧ್ಯರಾತ್ರಿ ತೀವ್ರಜ್ವರದಿಂದ ಅನಾರೋಗ್ಯಕ್ಕೊಳಗಾಗಿದ್ದಾನೆ. ಮನೆಯವರು ತುರ್ತುಚಿಕಿತ್ಸಾ ವಾಹನಕ್ಕೆ ಕರೆಮಾಡಿದರೂ ಬಾರದ ಕಾರಣದಿಂದ ಮಧ್ಯರಾತ್ರಿ ಬೇರೆ ವಾಹನ ಹುಡುಕಿ ಸಾರ್ವಜನಿಕ ಆಸ್ಪತ್ರೆಗೆ ತೆರಳುವಾಗ ತೀವ್ರ ಎದೆ ನೋವಿನಿಂದ ಎಚ್ಚರತಪ್ಪಿದ್ದಾನೆ. ಆತನನ್ನು ಪರೀಕ್ಷಿಸಿದ ವೈದ್ಯರು ವಿದ್ಯಾರ್ಥಿಯು ಮನೆಯಿಂದ ಆಸ್ಪತ್ರೆಗೆ ಬರುವ ಮಾರ್ಗದಲ್ಲಿಯೇ ಸಾವಿಗೀಡಾಗಿದ್ದಾನೆ ಎಂದು ಹೇಳಿದರು. ಸಕಾಲದಲ್ಲಿ ತುರ್ತುಚಿಕಿತ್ಸಾ ವಾಹನ ಬಂದಿದ್ದರೆ ವಿದ್ಯಾರ್ಥಿಯ ಜೀವ ಉಳಿಯುತ್ತಿತ್ತು ಎಂದು ವಿದ್ಯಾರ್ಥಿ ಸಂಬಂಧಿಕರು ಹಾಗೂ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಯ ವ್ಯವಸ್ಥೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿಯ ಸಾವಿನ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಘೋಷಿಸಲಾಯಿತು.