ಯುವಜನರಿಗೆ ಅಂಬೇಡ್ಕರ್ ಆದರ್ಶಗಳು ದಾರಿ ದೀಪ: ಚೈತ್ರಶ್ರೀ ಮಾಲತೇಶ್

Update: 2017-07-21 14:09 GMT

ಚಿಕ್ಕಮಗಳೂರು, ಜು.21: ಅಂಬೇಡ್ಕರ್ ರವರ ಆದರ್ಶಗಳು ಇಂದಿನ ಯುವಜನತೆಗೆ ದಾರಿ ದೀಪ ಎಂದು ಜಿಪಂ ಅಧ್ಯಕ್ಷೆ ಚೈತ್ರಶ್ರೀ ತಿಳಿಸಿದರು.

ಅವರು ಜಿಲ್ಲಾಡಳಿತ, ಜಿಪಂ,ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಶ್ರಯದಲ್ಲಿ ಸಂವಿಧಾನ ಶಿಲ್ಪ ವಿಶ್ವ ರತ್ನ ಡಾ. ಬಿ.ಆರ್. ಅಂಬೇಡ್ಕರ್ ರವರ 126 ನೇ ವರ್ಷಾಚರಣೆ ಅಂಗವಾಗಿ ನಗರದ ಕಲಾಮಂದಿರದಲ್ಲಿ ನೆನ್ನೆ ಹಮ್ಮಿಕೊಳ್ಳಲಾಗಿದ್ದ ತಮಗಿದೋ ನಮ್ಮ ಗೌರವ ನಮನ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಂಬೇಡ್ಕರ್ ರವರು ಸಮಾಜದಲ್ಲಿ ನೊಂದವರ ಧ್ವನಿಯಾಗಿ ಹೋರಾಡಿದ ಮಹಾನ್ ಚೇತನ, ಅವರು ಈ ದೇಶದ ಆಸ್ತಿ ಎಂದು ಹೇಳಿದರು.

ಅಂಬೇಡ್ಕರ್ ರವರು ಯಾವುದೇ ಒಂದು ಜಾತಿಗೆ ಸೀಮಿತರಾದವರಲ್ಲ. ಎಲ್ಲಾ ವರ್ಗದ ಹಿತ ಬಯಸಿದ ಮಹಾನ್ ವ್ಯಕ್ತಿ. ಅದ್ದರಿಂದ ಎಲ್ಲ ಸಮುದಾಯದ ಜನಾಂಗದವರು ಇಂದು ಅಂಬೇಡ್ಕರ್  ರವರನ್ನು ಸ್ಮರಿಸುತ್ತಾರೆ. ಇಂದಿನ ಯುವಜನತೆ ತಂತ್ರಜ್ಞಾನದ ಕಡೆ ಹೆಚ್ಚು ಒಲವು ಬೆಳೆಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಅವರಿಗೆ ಹಿರಿಯರ ಆದರ್ಶಗಳನ್ನು ತಿಳಿಸಬೇಕು. ಇತಿಹಾಸದ ಕುರಿತು ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಪಿಯುಶಿಕ್ಷಣ ಇಲಾಖೆಯ ನಿವೃತ್ತ ಉಪನ್ಯಾಸಕ ಹೆಚ್.ಎಂ ರುದ್ರಸ್ವಾಮಿ ಉಪನ್ಯಾಸ ನೀಡಿ ಮಾತನಾಡಿ, ಅಂಬೇಡ್ಕರ್ ರವರು ದೇಶದ ಸಂಪತ್ತು ಕೆಲವರಲ್ಲಿ ಮಾತ್ರ ಕೇಂದ್ರೀಕೃತವಾಗಿದೆ. ಅದು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಬೇಕು. ಸಂವಿಧಾನದಲ್ಲಿ ಎಲ್ಲರೂ ಸಮಾನವಾಗಿ ಬಾಳಬೇಕೆಂದು ತಿಳಿಸಿದ್ದರೂ ಇಂದಿಗೂ ತಳ ಸಮುದಾಯಗಳಿಗೆ ನಾಗರೀಕ ಹಕ್ಕುಗಳು ಇನ್ನೂ ಸಿಕ್ಕಿಲ್ಲ ಎಂದರು.

ಅರಣ್ಯ ವಸತಿ ಮತ್ತು ವಿಹಾರ ಧಾುಗಳ ನಿಗಮದ ಅಧ್ಯಕ್ಷ ಎ.ಎನ್.ಮಹೇಶ್ ಕಾಯರ್ಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಂತರ ಸಾಂಸ್ಕೃತಿಕ ಕಾಂರ್ಕ್ರಮಗಳನ್ನು ಸ್ಥಳೀಯ ಕಲಾವಿದರು ನಡೆಸಿಕೊಟ್ಟರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News