ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರ ಪ್ರತಿಭಟನೆ

Update: 2017-07-21 14:25 GMT

ಮಂಡ್ಯ, ಜು.21: 37ನೆ ರೈತ ಹುತಾತ್ಮರ ದಿನದ ಅಂಗವಾಗಿ ಕರ್ನಾಟಕ ರಾಜ್ಯ ರೈತಸಂಘದ ಕಾರ್ಯಕರ್ತರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಸಂಘದ ಅಧ್ಯಕ್ಷ ಬೋರಾಪುರ ಶಂಕರೇಗೌಡರ ನೇತೃತ್ವದಲ್ಲಿ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಿಂದ ಮೆರವಣಿಗೆ ತೆರಳಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರೆ,  ಉಪಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ತಾಲೂಕು ಅಧ್ಯಕ್ಷ ಹೆಮ್ಮಿಗೆ ಚಂದ್ರಶೇಖರ್ ನೇತೃತ್ವದಲ್ಲಿ ಕಾವೇರಿ ನೀರಾವರಿ ನಿಗಮದ ಕಚೇರಿಗೆ ಮುತ್ತಿಗೆ ಹಾಕಿದರು.

ನಾಲ್ಕು ವರ್ಷದಿಂದ ಜಿಲ್ಲೆ ಬರಗಾಲಕ್ಕೆ ಸಿಲುಕಿದ್ದು, ರೈತಾಪಿ ಜನ ಕುಡಿಯಲೂ ನೀರಿಲ್ಲದೆ ಪರದಾಡುವಂತಾಗಿದೆ. ಆದರೂ, ರಾಜ್ಯ ಸರಕಾರ ನಾಲೆಗೆ ನೀರುಹರಿಸದೆ ತಮಿಳುನಾಡಿಗೆ ಹರಿಸುತ್ತಿದೆ ಎಂದು ಅವರು ಕಿಡಿಕಾರಿದರು. ಉದ್ಯಮಿಗಳ 11 ಲಕ್ಷ ಕೋಟಿ ರೂ. ವಸೂಲಾಗದ ಸಾಲವೆಂದು ಪರಿಗಣಿಸಿ ಮನ್ನಾ ಮಾಡಿರುವ ಕೇಂದ್ರ ಸರಕಾರ, ರೈತರ ಸಾಲಮನ್ನಾ ಮಾಡಲು ಸಬೂಬು ಹೇಳುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಮುಖ ಒತ್ತಾಯಗಳು: ಕೇಂದ್ರ ಸರಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳ ರೈತರ ಕೃಷಿ ಸಾಲಮನ್ನಾ ಮಾಡಿ, ಹೊಸದಾಗಿ ಸಾಲ ವಿತರಿಸಬೇಕು. ರಾಜ್ಯ ಸರಕಾರ ಸಹಕಾರ ಸಂಘಗಳ 50 ಸಾವಿರ ರೂ. ಸಾಲಮನ್ನಾಗೆ ಹಾಕಿರುವ ಷರತ್ತು ತೆಗೆದುಹಾಕಿ ಎಲ್ಲ ಸಾಲಮನ್ನಾ ಮಾಡಬೇಕು.

ಕೆಆರ್‌ಎಸ್ ಜಲಾಶಯದಿಂದ ನಾಲೆಗಳಿಗೆ ನೀರುಹರಿಸಿ ಕೆರೆಕಟ್ಟೆ ತುಂಬಿಸಬೇಕು. ತಮಿಳುನಾಡಿಗೆ ನೀರು ನಿಲ್ಲಿಸಬೇಕು. ಹಾಲು ಮತ್ತು ರೇಷ್ಮೆ ಗೂಡಿನ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು. ಒಣಗಿದ ತೆಂಗಿನ ಮರಕ್ಕೆ ಪರಿಹಾರ ನೀಡಿ, ಕದಬಹಳ್ಳಿಯಲ್ಲಿ ಶಾಶ್ವತವಾಗಿ ಕೊಬ್ಬರಿ ಕೇಂದ್ರ ತೆರೆಯಬೇಕು. 2016-17ನೆ ಸಾಲಿನ ಕಬ್ಬಿನ ಬಾಕಿ ಹಣವನ್ನು ಎಫ್‌ಆರ್‌ಪಿ ದರ 2,300ರ ಜತೆಗೆ 200 ರೂ. ಸೇರಿಸಿ ಪಾವತಿಸಬೇಕು. ಪ್ರಸಕ್ತ ಸಾಲಿಗೆ 3,500 ರೂ. ನಿಗದಿಪಡಿಸಬೇಕು. ಪಿಜಿಎಫ್ ಮತ್ತು ಪಿಎಸಿಎಲ್ ಕಂಪನಿಗಳಿಂದ ಹೂಡಿಕೆದಾರರ ಹಣ ವಾಪಸ್ ಕೊಡಿಸಬೇಕು.

ಸಂಘದ ಜಿಲ್ಲಾಧ್ಯಕ್ಷ ಬೋರಾಪುರ ಶಂಕರೇಗೌಡ, ಕಾರ್ಯಾಧ್ಯಕ್ಷ ಸ್ವಾಮಿಗೌಡ, ಪ್ರ.ಕಾರ್ಯದರ್ಶಿ ಮಂಜೇಶ್‌ಗೌಡ, ಎಸ್.ವಿಶ್ವನಾಥ್, ಕೆ.ನಾಗೇಂದ್ರಸ್ವಾಮಿ, ರಾಮಲಿಂಗೇಗೌಡ, ಕೆ.ಜಿ.ಉಮೇಶ, ಸೊ.ಸಿ.ಪ್ರಕಾಶ್, ಜೆ.ದಿನೇಶ್, ಡಿ.ಎಸ್.ಚಂದ್ರಶೇಖರ್, ಇಂಡುವಾಳು ಬಸವರಾಜು, ಸುಧೀರ್‌ಕುಮಾರ್, ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News