×
Ad

ಸಮಾಜದ ಋಣ ತೀರಿಸುವ ಕೆಲಸ ಆಗಬೇಕಿದೆ: ಕೆ.ಆರ್.ನಂದಿನಿ

Update: 2017-07-21 20:15 IST

ತುಮಕೂರು, ಜು.21: ಸರಕಾರ, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಶಿಕ್ಷಣ ಕಲಿತ ನಮ್ಮಂತವರ ಮೇಲೆ ಸಮಾಜದ ಋಣ ಸಾಕಷ್ಟು ಇರುತ್ತದೆ. ಅವಕಾಶ ದೊರೆತಾಗ ಸಮಾಜಕ್ಕೆ ಸೇವೆ ಮಾಡುವ ಮೂಲಕ ಅದನ್ನು ತೀರಿಸುವ ಕೆಲಸ ಮಾಡಬೇಕು ಎಂದು 2016ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಪಡೆದಿರುವ ಕೋಲಾರದ ಕೆ.ಆರ್.ನಂದಿನಿ ಪ್ರತಿಪಾದಿಸಿದ್ದಾರೆ.

ತಮ್ಮ ಮಾತಾ, ಪಿತರೊಂದಿಗೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಸಂಜೆಯ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ವಿದ್ಯಾಭ್ಯಾಸ, ಊಟೋಪಚಾರಕ್ಕೆ ಸಮಾಜದಿಂದ ಸಾಕಷ್ಟನ್ನು ಪಡೆದಿರುತ್ತೇವೆ. ಸರಕಾರದ ಮತ್ತು ಇನ್ನಿತರ ಹುದ್ದೆಗಳು ದೊರೆತಾಗ ಸಮಾಜದಿಂದ ಪಡೆದಿರುವುದನ್ನು ಹಿಂದಿರುಗಿಸುವ ಮೂಲಕ ಅದು ಮುಂದಿನ ಪೀಳಿಗೆಗೆ ಬಳಕೆಯಾಗುವಂತೆ ಮಾಡುವುದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಸಿದ್ದಗಂಗಾ ಮಠದಲ್ಲಿ ಮಕ್ಕಳಿಗೆ ಅನ್ನ, ಅಕ್ಷರದ ಜೊತೆಗೆ, ವಿನಯವನ್ನು ಕಲಿಸುವ ಮೂಲಕ ಮೌಲ್ಯಯುತ ಶಿಕ್ಷಣ ನೀಡಲಾಗುತ್ತಿದೆ. ಯಶಸ್ಸು ಮತ್ತು ವೈಫಲ್ಯ ಬಹಳ ದಿನ ಒಬ್ಬರ ಬಳಿಯೇ ಇರುವುದಿಲ್ಲ. ಕಠಿಣ ಪರಿಶ್ರಮ ಮತ್ತು ನಿರಂತರ ಪ್ರಯತ್ನವಿದ್ದರೆ ಐಎಎಸ್ ಪರೀಕ್ಷೆಯನ್ನು ಯಾರು ಬೇಕಾದರೂ ಪಾಸು ಮಾಡಬಹುದು. ನಿಮ್ಮ ಹಾಗೆಯೇ ಸರಕಾರಿ ಶಾಲೆಯಲ್ಲಿಯೇ ಕಲಿತಿರುವ ನಾನೇ ಅದಕ್ಕೆ ಸಾಕ್ಷಿ ಎಂದರು.

ಸಾಮೂಹಿಕ ಪ್ರಾರ್ಥನೆಯಲ್ಲಿ ಆಶೀರ್ವಚನ ನೀಡಿದ ಸಿದ್ದಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗ ಸ್ವಾಮೀಜಿ, ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮವಿದ್ದರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸು ಮಾಡಿ ಉನ್ನತ ಹುದ್ದೆ ಪಡೆಯಬಹುದು ಎಂಬುದಕ್ಕೆ ಕೋಲಾರದ ಕೆ.ಆರ್.ನಂದಿನಿ ನಮ್ಮ ಮುಂದಿರುವ ಸಾಕ್ಷಿ. ಇವರನ್ನು ವಿದ್ಯಾರ್ಥಿಗಳು ಮಾದರಿಯಾಗಿ ತೆಗೆದುಕೊಂಡು ಜೀವನದ ಗುರಿ ಸಾಧಿಸಬೇಕು ಎಂದರು.

ಪ್ರಾರ್ಥನೆಯಲ್ಲಿ ವಿಧಾನಪರಿಷತ್ ಸದಸ್ಯ ಚೌಡರೆಡ್ಡಿ ತೂಪಲ್ಲಿ, ಕೆ.ಆರ್.ನಂದಿನಿ ಅವರ ಮಾತಾ ಪಿತರಾದ ನಿರ್ಮಲ ಮತ್ತು ರಮೇಶ್, ಗುರುಶ್ರೀ ವಿದ್ಯಾಸಂಸ್ಥೆಯ ಬಸವರಾಜು ಮತ್ತಿತರರು ಪಾಲ್ಗೊಂಡಿದ್ದರು. ಸಾಮೂಹಿಕ ಪ್ರಾರ್ಥನೆಯ ನಂತರ ಹಳೆ ಮಠಕ್ಕೆ ತೆರಳಿ ಶತಾಯುಷಿ ಡಾ.ಶ್ರೀಶಿವಕುಮಾರಸ್ವಾಮೀಜಿಗಳ ಆಶೀರ್ವಾದ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News