ಚಿಕ್ಕಬಳ್ಳಾಪುರ: ರಕ್ತದಾನ ಶಿಬಿರ

Update: 2017-07-21 15:50 GMT

ಚಿಕ್ಕಬಳ್ಳಾಪುರ, ಜು.21: ಕೆವಿ ಮತ್ತು ಪಂಚಗಿರಿ ದತ್ತಿ ಶಿಕ್ಷಣ ಸಂಸ್ಥೆಯು 21ನೇ ದತ್ತಿ ದಿನಾಚರಣೆ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಬೃಹತ್ ರಕ್ತದಾನ ಶಿಬಿರವು ರಾಜ್ಯಮಟ್ಟದ ದಾಖಲೆ ನಿರ್ಮಿಸಿದ್ದು, ಶಿಬಿರದಲ್ಲಿ ಸುಮಾರು 1,035 ಯೂನಿಟ್ ರಕ್ತವನ್ನು ಸಂಗ್ರಹಿಸಿದೆ.

ನಗರದ ಹೊರವಲಯದ ಸಿವಿವಿ ಕ್ಯಾಂಪಸ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ 1,035 ಯೂನಿಟ್ ರಕ್ತ ಶೇಖರಣೆ ಮಾಡಲಾಗಿದ್ದು, ಬಾರತೀಯ ರೆಡ್‌ಕ್ರಾಸ್ ಮತ್ತು ಕೆವಿಶಿಕ್ಷಣ ಸಂಸ್ಥೆ ಆಶ್ರದಲ್ಲಿ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ 2 ದತ್ತಿಗಳ ನಾನಾ ವಿದ್ಯಾಸಂಸ್ಥೆಗಳ ಸಿಬ್ಬಂದಿ ಸೇರಿದಂತೆ ತಾಲೂಕಿನಾದ್ಯಂತ ನಾನಾ ಕಡೆಯಿಂದ ಆಗಮಿಸಿದ್ದ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಪಾಲ್ಗೊಂಡು ರಕ್ತದಾನ ಮಾಡಿದರು.

ಬೆಳಗ್ಗೆ 8.30ಕ್ಕೆ ಪ್ರಾರಂಭಗೊಂಡ ರಕ್ತದಾನ ಶಿಬಿರ ರಾತ್ರಿ 7 ಗಂಟೆ ವರೆಗೂ ನಿರಂತರವಾಗಿ ನಡೆಯಿತು. 1 ಸಾವಿರಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹ ಮಾಡಲಾಯಿತು. ಕಳೆದ ವರ್ಷದ 19ನೇ ದತ್ತಿ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಶಿಬಿರದಲ್ಲಿ 756 ಯೂನಿಟ್ ಸಂಗ್ರಹ ಮಾಡಿ ದಾಖಲೆ ನಿರ್ಮಿಸಿತ್ತು. ಆದರೆ ಪ್ರಸ್ತುತ ಆ ದಾಖಲೆಯನ್ನು ಮುರಿದು ರಾಜ್ಯದಲ್ಲಿ ಅತಿ ಹೆಚ್ಚು ರಕ್ತ ಸಂಗ್ರಹ ಮಾಡಿದ ಖ್ಯಾತಿ ಪಡೆದಿದೆ.

ರಕ್ತದಾನ ಶಿಬಿರಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿರ್‌ರೆಡ್ಡಿ, ತುರ್ತು ಸಂದರ್ಭಗಳಲ್ಲಿ ರಕ್ತ ಸಿಗದೆ ತೊಂದರೆ ಅನುಭವಿಸುವವರಿಗೆ ಜೀವದಾನ ನೀಡುವ ರಕ್ತ ದಾನ ಮಾಡುವುದು ಅತ್ಯಂತ ಮಹತ್ತರ ಕಾರ್ಯವಾಗಿದೆ ಎಂದು ಹೇಳಿದರು. ಅಲ್ಲದೆ ಪ್ರತಿ ವರ್ಷ ದತ್ತಿ ದಿನಾಚರಣೆ ವೇಳೆ ರಕ್ತದಾನ ಶಿಬಿರ ಏರ್ಪಡಿಸುವ ಮೂಲಕ ಸಮಾಜ ಸೇವೆಯಲ್ಲಿ ತನ್ನದೇ ಆದ ಕಾರ್ಯ ಮಾಡುತ್ತಿರುವ ಕೆವಿಶಿಕ್ಷಣ ಸಂಸ್ಥೆ ಉತ್ತಮ ಕಾರ್ಯ ಹಮ್ಮಿಕೊಂಡಿದ್ದು, ಈ ಕಾರ್ಯಗಳು ಹೀಗೇ ಮುಂದುವರಿಯಬೇಕೆಂದು ಕೋರಿದರು.

ಜಿಪಂ ಸಿಇಒ ಜೆ. ಮಂಜುನಾಥ್ ಮಾತನಾಡಿ, ರಕ್ತದಾನ ಮಾಡುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂಬ ಮನೋಭಾವ ಗ್ರಾಮೀಣ ಜನರು ಬೆಳೆಸಿಕೊಂಡಿದ್ದು, ಮೂಢನಂಬಿಕೆ ಬದಿಗೊತ್ತಿ, ರಕ್ತದಾನ ಮಾಡುವ ಮೂಲಕ ಪ್ರಾಣದಾತರಾಗಬೇಕೆಂದ ಅವರು, 3 ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ದೇಹದಲ್ಲಿನ ಕೊಬ್ಬಿನಾಂಶ, ಬ್ಯಾಕ್ಟೀರಿಯಾ ಹಾಗೂ ಫಂಗಸ್ ನಂತಹ ಅನಾರೋಗ್ಯ ಪೀಡಿತ ಅಂಶಗಳನ್ನು ಹೊರಹಾಕಲಿದೆ ಎಂದರು.

ಕೆವಿ ಮತ್ತು ಪಂಚಗಿರಿ ದತ್ತಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ವಿ. ನವೀನ್ ಕಿರಣ್ ಮಾತನಾಡಿ, ರಕ್ತದಾನದ ನಂತರ ಉದ್ಬವಿಸುವ ನೂತನ ರಕ್ತ ಕಣಗಳಿಂದ ನವ ಚೈತನ್ಯ ಉಂಟಾಗುವುದರಿಂದ ಅಂಜಿಕೆಯಿಲ್ಲದೆ ಆರೋಗ್ಯವಂತರು ರಕ್ತದಾನ ಮಾಡಲು ಮುಂದಾಗಬೇಕೆಂದು ಮನವಿ ಮಾಡಿದರು.
ದಾನದಲ್ಲಿ ಅತ್ಯುತ್ತಮ ದಾನವಾಗಿರುವ ರಕ್ತದಾನದಿಂದ ಪ್ರಾಣಾಪಾಯದಲ್ಲಿರುವವರಿಗೆ ಪ್ರಾಣ ಉಳಿಸುವ ಮಹತ್ಕಾರ್ಯಕ್ಕೆ ಬಳಕೆಯಾಗುವುದು. ಆದ್ದರಿಂದ ಸಂಸ್ಥೆಯಿಂದ ಕಳೆದ ಹಲವಾರು ವರ್ಷಗಳಿಂದ ದತ್ತಿ ದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಶಿಬಿರದಲ್ಲಿ ರಕ್ತದಾನ ಮಾಡಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.

ಶಿಬಿರದಲ್ಲಿ ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದ ದಾನಿಗಳನ್ನು ಇದೇ ವೇಳೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ದತ್ತಿ ಆಡಳಿತಾಧಿಕಾರಿ ಡಾ. ಸಾಯಿಪ್ರಭು, ಸದಸ್ಯರಾದ ನಿರ್ಮಲಾ ಪ್ರಭು, ಮುನಿಯಪ್ಪ, ಕೊಂಡಪ್ಪ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News