×
Ad

ಶವ ಸಂಸ್ಕಾರಕ್ಕೆ ಸ್ಥಳಾವಕಾಶ ಕೊಡಿಸಲು ಒತ್ತಾಯಿಸಿ ಪ್ರತಿಭಟನೆ

Update: 2017-07-22 16:47 IST

ಚಿಕ್ಕಮಗಳೂರು, ಜು.22: ಮತ್ತಾವರ ಗ್ರಾಮದಲ್ಲಿ ಸ್ಮಶಾನಕ್ಕೆ ಮೀಸಲಿರುವ ಜಾಗವನ್ನು ಪ್ರಭಾವಿಗಳು ತಮ್ಮದೆಂದು ತಕರಾರು ತೆಗೆಯುತ್ತಿರುವ ಹಿನ್ನೆಲೆಯಲ್ಲಿ ಶವ ಸಂಸ್ಕಾರಕ್ಕೆ ತೊಂದರೆಯಾಗಿದೆ. ತಕ್ಷಣ ಶವ ಸಂಸ್ಕಾರಕ್ಕೆ ಜಾಗವನ್ನು ದೊರಕಿಸಿಕೊಡುವಂತೆ ಒತ್ತಾಯಿಸಿ ಮತ್ತಾವರ ದಲಿತ ಕಾಲೋನಿ ಜನರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ದಿಢೀರ್ ಪ್ರತಿಭಟನೆ ನಡೆಸಿದರು.

ಮತ್ತಾವರ ಗ್ರಾಮದ ಹರಿಜನ ಕಾಲೋನಿಯಲ್ಲಿ ಶನಿವಾರ ಸೋಮಶೇಖರ್ ಎಂಬವರು ನಿಧನ ಹೊಂದಿದ್ದರು. ಊರವರು ತಲೆತಲಾಂತರದಿಂದ ಶವ ಸಂಸ್ಕಾರ ಮಾಡುತ್ತಿದ್ದ ಅಂತರ್ ಹೊಲ ಎಂಬ ಸ್ಥಳದಲ್ಲಿ ಶವಸಂಸ್ಕಾರ ಮಾಡಿಕೊಂಡು ಬರಲಾಗುತ್ತಿದ್ದರು. ಆದರೆ ಈಗ ಈ ಜಾಗವನ್ನು ಶಿವೇಗೌಡ ಎಂಬವರು ತಮ್ಮ ಜಮೀನು ಎಂದು ತಕರಾರು ತೆಗೆಯುತ್ತಿದ್ದಾರೆ. ಅವರು ಊರವರು ಶವ ಸಂಸ್ಕಾರ ನಡೆಸುತ್ತಿದ್ದ ಈ ಭೂಮಿಯಲ್ಲಿ ಇದೀಗ ಶವ ಸಂಸ್ಕಾರವನ್ನು ಮಾಡಲು ಬಿಡದೆ ತೊಂದರೆ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸ್ಮಶಾನ ಭೂಮಿ ವಿಚಾರದಲ್ಲಿ 2016ರ ಅಕ್ಟೋಬರ್ 26ರಂದು ಜಿಲ್ಲಾಧಿಕಾರಿ ಗಮನಕ್ಕೆ ತರುವ ಉದ್ದೇಶದಿಂದ ಊರಿನ ಜನರೆಲ್ಲ ಸೇರಿ ದೂರು ಅರ್ಜಿಯನ್ನು ಸಲ್ಲಿಸಿದ್ದಾರೆ. ಆದರೆ ಈತನಕ ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ. ಪ್ರತಿ ಬಾರಿ ಈ ದಲಿತ ಕಾಲೋನಿಯಲ್ಲಿ ಯಾರಾದರೂ ಮರಣ ಹೊಂದಿದ ಸಮಯದಲ್ಲಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ತಕ್ಷಣ ದಲಿತ ಕಾಲೋನಿ ಜನರ ಅನುಕೂಲಕ್ಕಾಗಿ ಸ್ಮಶಾನ ಭೂಮಿಯನ್ನು ದೊರಕಿಸಿಕೊಡುವಂತೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.

ಈ ಸಮಯದಲ್ಲಿ ಗ್ರಾಮದ ಮುಖಂಡರಾದ ಎಂ.ಕೆ.ಮಹೇಶ್, ಎಂ.ಎಸ್.ರವಿಕುಮಾರ್, ರಘು, ಯೋಗೀಶ್, ಪೂಣೇಶ್,ಎಂ.ಸಿ.ಮಹೇಶ್, ಮಧು ಹಾಗೂ ವೆಂಕಟೇಶ್ ಹಾಗೂ ಗ್ರಾಮಸ್ಥರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News