ದೇಶದ ಸಮಗ್ರ ಅಭಿವೃದ್ದಿಗೆ ಆರೋಗ್ಯವಂತ ಯುವ ಸಮುದಾಯ ಅಗತ್ಯ: ಆರ್.ಬಿ.ಧರ್ಮಗೌಡರ್
ಶಿವಮೊಗ್ಗ, ಜು. 22: ದುಶ್ಚಟಗಳು ದುಡಿಮೆಯ ಶಕ್ತಿಯನ್ನು ಕ್ಷೀಣಿಸುತ್ತವೆ. ಅಲ್ಲದೆ ಸಮಾಜದ ಪ್ರಗತಿಗೆ ಅಡ್ಡಿಯಾಗುತ್ತವೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಆರ್.ಬಿ.ಧರ್ಮಗೌಡರ್ ಅವರು ಹೇಳಿದರು.
ಅವರು ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಜಿಲ್ಲಾ ಅಬಕಾರಿ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಮಹಾವಿದ್ಯಾಲಯದ ಸಿ.ಎನ್.ಆರ್.ರಾವ್ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಮಾದಕ ವ್ಯಸನ ಹಾಗೂ ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ದೇಶದ ಸಮಗ್ರ ಅಭಿವೃದ್ದಿಗೆ ಆರೋಗ್ಯವಂತ ಯುವ ಸಮುದಾಯ ಅಗತ್ಯ. ಹಾಗಾಗಿ ವ್ಯಸನಮುಕ್ತ ಸಮಾಜದ ಸೃಷ್ಠಿಗೆ ಎಲ್ಲರೂ ಮುಂದಾಗಬೇಕು. ಸಮಾಜದಲ್ಲಿ ನಾವೇ ರೂಪಿಸಿಕೊಂಡಿರುವ ನಿಯಮ-ಕಾನೂನಿಗಳಿಗನುಗುಣವಾಗಿ ಪರಿಮಿತಿಗೊಳಪಟ್ಟು ಎಲ್ಲರೂ ಗೌರವದಿಂದ ಬದುಕಬೇಕು. ಹಣ, ಅಂತಸ್ತು, ಅಧಿಕಾರಕ್ಕೂ ಮಿಗಿಲಾದದ್ದು ಆರೋಗ್ಯ. ಇರುವ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬೇಕು. ದುಶ್ಚಟಗಳಿಗೆ ಬಲಿಯಾಗದೇ ಮಾದಕ ವಸ್ತುಗಳಿಂದ ದೂರವಿರಬೇಕೆಂದು ಕಿವಿಮಾತು ಹೇಳಿದರು.
ದೇಶದಲ್ಲಿ ಇತ್ತೀಚೆಗೆ ಮಾದಕ ವಸ್ತುಗಳ ಬಳಕೆಯಿಂದ ಮಾನವ ಸಂಪತ್ತು ನಶಿಸುತ್ತಿದೆ. ದೇಶದ ಪ್ರಗತಿಗೆ ಬಳಕೆಯಾಗಬೇಕಾದ ಯುವಶಕ್ತಿ ದುಶ್ಚಟಗಳಿಗೆ ಬಲಿಯಾಗಿ ವ್ಯರ್ಥವಾಗುತ್ತಿರುವುದು ಸಾಮಾಜಿಕ ದುರಂತವೇ ಸರಿ ಎಂದ ಅವರು, ಹಿರಿಯರು ಅನುಸರಿಸುವ ದುರ್ಮಾರ್ಗ, ದುರ್ನಡತೆ ಹಾಗೂ ದುರಭ್ಯಾಸಗಳು ಇತರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ ಎಂದವರು ನುಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸೋಮಶೇಖರ ಸಿ.ಬಾದಾಮಿ ಅವರು ಮಾತನಾಡಿ, ಸರ್ಕಾರವು ಅಂತರಾಷ್ಟ್ರೀಯ ಮಾದಕವಸ್ತು ಮತ್ತು ಕಾನೂನುಬಾಹಿರ ಕಳ್ಳಸಾಗಾಣಕೆ ವಿರುದ್ದ ಜನಜಾಗೃತಿ ಮೂಡಿಸುವ ಸದುದ್ದೇಶದಿಂದ ಆಂದೋಲನ ಹಾಗೂ ಜನಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ವಿಶೇಷವಾಗಿ ವಿಶ್ವವನ್ನು ಮಾದಕವಸ್ತು ಮುಕ್ತ ವಿಶ್ವವಾಗಿ ರೂಪಿಸುವುದು ಈ ಕಾರ್ಯಕ್ರಮದ ಧ್ಯೇಯವಾಗಬೇಕು. ಅಕ್ರಮ ಮಾದಕ ವಸ್ತುಜಾಲದ ವಿರುದ್ಧ ಹೋರಾಡುವ ಸಲುವಾಗಿ ಮಕ್ಕಳು, ಯುವಕರು ಹಾಗೂ ಅವರ ಕುಟುಂಬದ ಸಮಗ್ರ ಕಲ್ಯಾಣಕ್ಕಾಗಿ ಪರಿಣಾಮಕಾರಿ ಕಾರ್ಯಯೋಜನೆಯನ್ನು ಹಮ್ಮಿಕೊಳ್ಳುವ ಅಗತ್ಯವಿದೆ ಎಂದರು.ಒಬ್ಬ ವ್ಯಕ್ತಿ ದುಶ್ಚಟಗಳಿಗೆ ದಾಸನಾದರೆ ಅವುಗಳಿಂದ ಹೊರಬರುವುದು ತುಂಬಾ ಕಷ್ಟ. ಸದೃಢ ಆರೋಗ್ಯದಿಂದ ಉತ್ತಮ ಸಮಾಜದ ನಿರ್ಮಾಣ ಸಾಧ್ಯ. ತಮ್ಮ ಹಾಗೂ ತಮ್ಮ ಕುಟುಂಬ ವಿಕಾಸಕ್ಕಾಗಿ ಚಿಂತಿಸುವ ಎಲ್ಲರೂ ದಿನದ ಅಲ್ಪ ಸಮಯವನ್ನು ಸದ್ವಿಚಾರಗಳಿಗೆ, ಯೋಗ, ಧ್ಯಾನಕ್ಕಾಗಿ ಮೀಸಲಿಡುವಂತೆ ಅವರು ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಆರ್.ಹನುಮಂತಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಶೇ.24ರಷ್ಟು ಯುವಜನತೆ ಮಾದಕವಸ್ತುಗಳಿಗೆ, ಶೇ.20.09ರಷ್ಟು ತಂಬಾಕು ಉತ್ಪನ್ನಗಳಿಗೆ, ಶೇ.4.06ರಷ್ಟು ಮದ್ಯಪಾನ ಹಾಗೂ ಶೇ.0.6ರಷ್ಟು ಇತರೆ ವ್ಯಸನಗಳಿಗೆ ಬಲಿಯಾಗುತ್ತಿರುವುದು ಇತ್ತೀಚೆಗೆ ಸಂಶೋಧನೆಗಳಿಂದ ದೃಢಪಟ್ಟಿದೆ ಎಂದರು.
ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲ ಡಾ.ವಾಗ್ದೇವಿ ಹೆಚ್.ಎಂ., ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಶಮಾ ಬೇಗಂ, ಡಾ.ನಟರಾಜ್, ಪ್ರೊ.ಪಾಂಡುರಂಗನ್, ಶ್ರೀಮತಿ ಶುಭಾ ಮರವಂತೆ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮನೋವೈದ್ಯ ಡಾ.ಪ್ರಮೋದ್ ಹೆಚ್.ಎಲ್ ಅವರು ಮಾದಕ ವಸ್ತು ವ್ಯಸನ ಮತ್ತು ನಿವಾರಣೆ ಕುರಿತು ಹಾಗೂ ಅಬಕಾರಿ ನಿರೀಕ್ಷಕ ಸೈಯದ್ ತಫ್ಜಿಲ್‌ವುಲ್ಲಾ ಅವರು ಎನ್.ಡಿ.ಪಿ.ಎಸ್ ಕಾಯಿದೆಯ ಕುರಿತು ವಿಶೇಷ ಉಪನ್ಯಾಸ ನೀಡಿದರು