ಉತ್ತಮ ಸಮಾಜವನ್ನು ನಿರ್ಮಿಸುವ ಕಾರ್ಯ ಶಿಕ್ಷಕರಿಂದ ಮಾತ್ರ ಸಾಧ್ಯ:ಡಾ.ಎಂ.ಸಿ. ಮೋಹನಕುಮಾರಿ
ಗುಂಡ್ಲುಪೇಟೆ, ಜು.22: ಉತ್ತಮ ಸಮಾಜವನ್ನು ನಿರ್ಮಿಸುವ ಮಹತ್ತರ ಕಾರ್ಯ ಶಿಕ್ಷಕರಿಂದ ಮಾತ್ರ ಸಾಧ್ಯವಿದ್ದು, ಈ ದಿಕ್ಕಿನಲ್ಲಿ ಶ್ರಮಿಸಿಸಬೇಕು ಎಂದು ಶಾಸಕಿ ಡಾ.ಎಂ.ಸಿ. ಮೋಹನಕುಮಾರಿ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕ್ಷೇತ್ರ ಶಿಕ್ಪಣಾಧಿಕಾರಿಗಳ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೇ ನೀರಾವರಿ ಹಾಗೂ ಕೈಗಾರಿಕೆಗಳಿಲ್ಲದ ತಾಲೂಕಿನಲ್ಲಿ ಶೈಕ್ಷಣಿಕ ಸೌಲಭ್ಯಗಳನ್ನು ನೀಡುವುದರಿಂದ ಮಾತ್ರ ಅಭಿವೃದ್ದಿ ಹೊಂದಬಹುದು ಎಂಬ ದೂರದೃಷ್ಟಿಯಿಂದ ದಿ.ಎಚ್.ಎಸ್.ಮಹದೇವಪ್ರಸಾದ್ ತಾಲೂಕಿನ ಎಲ್ಲ ಗ್ರಾಮಗಳಿಗೂ 246 ಪ್ರಾಥಮಿಕ ಶಾಲೆಗಳು, 20 ಸರ್ಕಾರಿ ಪ್ರೌಢಶಾಲೆಗಳು, ಹೋಬಳಿಗೊಂದು ಪದವಿ ಹಾಗೂ ವಸತಿ ಶಾಲೆಗಳನ್ನು ಪ್ರಾರಂಭಿಸಿದ್ದರಿಂದ 28 ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ಗ್ರಾಮೀಣ ಯುವಕರು ವಿದ್ಯೆ ಹಾಗೂ ಉದ್ಯೋಗ ತರಭೇತಿ ಪಡೆಯಲು ಸಾಧ್ಯವಾಗುವಂತೆ ಸರ್ಕಾರಿ ಯಂತ್ರೋಪಕರಣ ಕಾರ್ಯಾಗಾರ ಹಾಗೂ ಮೂರು ಐಟಿಐ ಕಾಲೇಜುಗಳನ್ನು ಪ್ರಾರಂಭಿಸಿದ್ದರು. ಅಲ್ಲದೆ ಪಾಲಿಟೆಕ್ನಿಕ್ ಕಾಲೇಜು ಹಾಗೂ ಕಾನೂನು ಕಾಲೇಜು ಸ್ಥಾಪನೆಗೆ ಮುಂದಾಗಿದ್ದರು ಎಂದರು.
ಇಷ್ಟೆಲ್ಲಾ ಶಾಲಾ ಕಾಲೇಜುಗಳನ್ನು ಸ್ಥಾಪಿಸಿದ್ದರೂ ಸಹಾ ತಾಲೂಕು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ನೀಡುವಲ್ಲಿ ಎಡವುತ್ತಿದ್ದು, ಪ್ರತಿಯೊಬ್ಬ ಶಿಕ್ಷಕರೂ ಪ್ರಾಮಾಣಿಕ ಪ್ರಯತ್ನ ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉತ್ತಮ ಶಿಕ್ಷಣ ನೀಡುವ ಜೊತೆಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹೇಶ್ ಮಾತನಾಡಿ, ಪ್ರತಿ ಬಾರಿಯೂ ತಿಂಗಳ ಕೊನೆಯಾದರೂ ಸಂಬಳ ಬಟಾವಡೆಯಾಗುತ್ತಿಲ್ಲ. ಹಾಗೂ ಆರೋಗ್ಯ ಸಂಬಂಧಿತ ಬಿಲ್‌ಗಳು ಪಾವತಿಯಾಗುತ್ತಿಲ್ಲ. ಇದರಿಂದ ಶಿಕ್ಷಕ ಸಂಕುಲ ತೊಂದರೆಗೊಳಗಾಗಿದೆ ಎಂದು ಮಾಡಿದ ಮನವಿಗೆ ಉತ್ತರಿಸಿದ ಶಾಸಕಿ, ಮುಂದಿನ ದಿನಗಳಲ್ಲಿ ಶಿಕ್ಷಕರಿಗೆ ಕಾಲಕಾಲಕ್ಕೆ ವೇತನ ಹಾಗೂ ಆರೋಗ್ಯವಿಮೆ ಸೌಲಭ್ಯಗಳ ಪಾವತಿಮಾಡಲು ಸಾಧ್ಯವಾಗುವಂತೆ ಕ್ರಮವಹಿಸುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಚಾಮುಲ್ ನಿರ್ದೇಶಕರಾದ ಎಚ್.ಎಸ್.ನಂಜುಂಡಪ್ರಸಾದ್, ಶಾಸಕರ ಪುತ್ರ ಗಣೇಶ್ ಪ್ರಸಾದ್, ಕಣ್ಣೇಗಾಲ ಸ್ವಾಮಿ, ಪುರಸಭೆ ಅಧ್ಯಕ್ಷೆ ಭಾಗ್ಯಮ್ಮ, ಮಾಜಿ ಅಧ್ಯಕ್ಷ ಪಿ.ಚಂದ್ರಪ್ಪ, ಸದಸ್ಯರಾದ ಪಿ.ಗಿರೀಶ್, ಸುರೇಶ್, ಬಿಇಒ ಸಿ.ಎನ್.ರಾಜು, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿದೇಶಕ ಸತೀಶ್, ಭೂಸೇನಾನಿಗಮದ ಇಂಜಿನಿಯರ್ ರವಿಶಂಕರ್, ಶಿಕ್ಷಕರ ಸಂಘಗಳ ಪದಾದಿಕಾರಿಗಳು ಹಾಗೂ ಶಿಕ್ಷಕರು ಹಾಜರಿದ್ದರು.