ಸೂಕ್ತ ತನಿಖೆಗೆ ಆಗ್ರಹಿಸಿ ಎಸ್‌ಎಫ್‌ಐ ಪ್ರತಿಭಟನೆ
ಹಾಸನ, ಜು.22: ಹಾಸ್ಟೇಲ್ ವಿದ್ಯಾರ್ಥಿಗಳಿಗೆ ಸಿಗಬೇಕಾದ ಮೂಲಭೂತ ಸೌಲಭ್ಯ ನೀಡದೆ ಅವ್ಯವಹಾರ ಎಸಗಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿಕಸ್ತರನ್ನು ಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಡಿಸಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು.
ಸರಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಮುಖ್ಯ ಕಟ್ಟಡದಲ್ಲಿ ಸಮಾಜದ ಅತ್ಯಂತ ಹಿಂದುಳಿದ ವರ್ಗಗಳಾದ ಎಸ್‌ಸಿ ಮತ್ತು ಎಸ್‌ಟಿ ಜನಾಂಗಕ್ಕೆ ಸೇರಿದ ಸುಮಾರು 600 ಜನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪದವಿ, ನರ್ಸಿಂಗ್, ಪ್ಯಾರಾ ಮೆಡಿಕಲ್, ಪಿಯುಸಿ, ಬಿಇಡಿ, ಸ್ನಾತಕೋತ್ತರ ಪದವಿ ಸೇರಿದಂತೆ ವಿವಿಧ ಕೋರ್ಸ್‌ಗಳಲ್ಲಿ ಶಿಕ್ಷಣ ಪಡೆಯುತ್ತಿರುವವರು ಹಾಸ್ಟೇಲ್‌ನಲ್ಲಿ ಇದ್ದಾರೆ. ಆದರೇ ಸ್ಥಳ ಇಲ್ಲ ಎಂದು ಒಂದೆ ಕಡೆ ಹೆಚ್ಚಿನ ವಿದ್ಯಾರ್ಥಿಗಳು ವಾಸ ಮಾಡಬೇಕಾಗಿದೆ. ಕೆಲ ದಿನಗಳ ಹಿಂದೆ ಇದೆ ಹಾಸ್ಟೇಲ್‌ನಲ್ಲಿ ಕಳಪೆ ಗುಣಮಟ್ಟದ ಆಹಾರ ವಿತರಣೆಯನ್ನು ಮಾಡಲಾಗುತ್ತಿದೆ ಎಂದು ಖಂಡಿಸಿ ಕೊಳೆತ ಆಹಾರ ತರಕಾರಿಯನ್ನು ಬಳಸಿ ತಯಾರಿಸುವುದನ್ನು ವಿರೋಧಿಸಿ ಹಾಗೂ ಮೇಲ್ವಿಚಾರಕರ ದೌರ್ಜನ್ಯ ಮತ್ತು ದಬ್ಬಾಳಿಕೆ, ಜಾತಿ ನಿಂಧನೆ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುವುದರ ಮೂಲಕ ಗಮನಸೆಳೆಯಲಾಗಿತ್ತು.
ಆದರೂ ಸಹ ಕಳೆದ ಒಂದು ವಾರದಲ್ಲಿ ಹಾಸ್ಟೇಲ್‌ನಲ್ಲಿ ಅನೇಕ ಬದಲಾವಣೆಗಳು ನಡೆಯುತ್ತಿದೆ. ವಾರ್ಡನ್ ವರ್ತನೆಯಲ್ಲಿ ಯಾವುದೇ ರೀತಿಯ ಬದಲಾವಣೆಗಳು ಕಂಡು ಬಂದಿರುವುದಿಲ್ಲ. ಬದಲಾಗಿ ಮತ್ತೆ ಅವ್ಯವಹಾರಗಳಲ್ಲಿ ಭಾಗೀಯಾಗಿ ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯ ನೀಡದೆ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಇತರರಿಂದ ಬೆದರಿಕೆ ಹಾಕಲಾಗುತ್ತಿದೆ. ಮತ್ತೊಂದು ಕಡೆ ಹಾಸ್ಟೇಲ್‌ನಲ್ಲಿ ಅನೇಕ ವರ್ಷಗಳಿಂದ ವಿದ್ಯಾರ್ಥಿಗಳಿಗೆ ನೀಡಬೇಕಾದ ಮೂಲಭೂತ ಸೌಲಭ್ಯಗಳಾದ ಹಾಸಿಗೆ, ದಿಂಬು, ಹೊದಿಕೆ, ಸೊಳ್ಳೆಪರದೆ, ಪೇಸ್, ಬ್ರೆಶ್, ಸೋಪು, ಪುಸ್ತಕ, ಆಟದ ಸಾಮಾಗ್ರಿ ಇತರೆ ಯಾವುದನ್ನು ನೀಡದೆ ವಂಚಿಸಲಾಗಿದೆ ಎಂದು ಆರೋಪಿಸಿದರು. ಸರಕಾರದಿಂದ ಕಳೆದ ಮೂರು ವರ್ಷಗಳಲ್ಲಿ ವಿದ್ಯಾರ್ಥಿ ನಿಲಯಕ್ಕೆ ಬಿಡುಗಡೆಯಾದ ಅನುಧಾನದ ಬಗ್ಗೆ ವಿದ್ಯಾರ್ಥಿಗಳಿಗೆ ವಿತರಣೆಯಾದ ಸವಲತ್ತುಗಳ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಅವ್ಯವಹಾರದಲ್ಲಿ ಭಾಗಿಯಾದ ತಪ್ಪಿಕಸ್ತರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ವಿದ್ಯಾರ್ಥಿನಿಯರಿಗೆ ಸೂಕ್ತ ನ್ಯಾಯ ಹಾಗೂ ರಕ್ಷಣೆ ನೀಡಬೇಕು ಎಂದರು. ಈಗಾಗಲೇ ರಾಜಕೀಯ ಪಕ್ಷದ ಕೆಲವರು ನಮ್ಮ ಮೇಲೆ ಬೆದರಿಕೆಯ ಮಾತುಗಳನ್ನು ಹೇಳುವ ಮೂಲಕ ಪ್ರತಿಭಟನೆ ಮಾಡದಂತೆ ಎಚ್ಚರಿಸಿದ್ದಾರೆ ಎಂದು ಕಿಡಿಕಾರಿದರು.
ಬೇಡಿಕೆಗಳು: ವಿದ್ಯಾರ್ಥಿಗಳಿಗೆ ಸಂಖ್ಯೆಗನುಗುಣವಾಗಿ ಹಾಸ್ಟೇಲ್‌ನ ಸ್ವಂತ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕು. ಕಳಪೆಗುಣಮಟ್ಟದ ಆಹಾರ ಬಳಕೆ ತಡೆಗಟ್ಟಿ, ಗುಣಮಟ್ಟದ ಆಹಾರ ಕೊಡಬೇಕು. ವಿದ್ಯಾರ್ಥಿಗಳಿಗೆ ಸಿಗಬೇಕಾದ ಹಾಸ್ಟೇಲ್ ಮೂಲಭೂತ ಸೌಲಭ್ಯವನ್ನು ನೀಡದೆ ವಂಚಿಸಿರುವ ಬಗ್ಗೆ ಕೂಡಲೇ ಸೂಕ್ತ ತನಿಖೆ ನಡೆಸಿ ತಪ್ಪಿಕಸ್ತರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು. ಸರಕಾರದಿಂದ ಕಳೆದ ಮೂರು ವರ್ಷಗಳಲ್ಲಿ ವಿದ್ಯಾರ್ಥಿ ನಿಲಯಕ್ಕೆ ಬಿಡುಗಡೆಯಾದ ಅನುಧಾನದ ಬಗ್ಗೆ ಮತ್ತು ವಿತರಣೆಯಾದ ಸವಲತ್ತುಗಳ ಎಲಾವನ್ನು ಸೂಕ್ತ ತನಿಖೆ ನಡೆಸಬೇಕು ಎಂದರು. ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸಿ ಜಾತಿ ನಿಂದನೆ ಮಾಡಿದ ಮೇಲ್ವಿಚಾರಕರಾದ ಸುಮ ಅವರನ್ನು ಕೂಡಲೇ ಸೇವೆಯಿಂದ ಅಮಾನತ್ತುಗೊಳಿಸಬೇಕು. ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೌಲಭ್ಯವನನು ಒದಗಿಸಿ ಸೂಕ್ತ ರಕ್ಷಣೆ ನೀಡಿ ಹಾಸ್ಟೇಲ್‌ಗೆ ಪೂರಕವಾದ ವಾತವರಣ ನಿರ್ಮಾಣ ಮಾಡುವಂತೆ ತಮ್ಮ ಬೇಡಿಕೆಯನ್ನು ಅಪರ ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಮುಂದೆ ಇಟ್ಟು ಮನವಿ ಸಲ್ಲಿಸಿದರು.
ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಮಧ್ಯ ಪ್ರವೇಶ ಮಾಡಿ ಕ್ರಮವಹಿಸಬೇಕು. ಇಲ್ಲವಾದರೇ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಎಸ್.ಎಫ್.ಐ. ಜಿಲ್ಲಾ ಅಧ್ಯಕ್ಷ ಮಹೇಶ್, ಕಾರ್ಯದರ್ಶಿ ಆಶಾ, ರಮೇಶ್, ಎಂ.ಜಿ. ಪೃಥ್ವಿ, ಶಾಲಿನಿ, ಚೇತನ, ಮಮತಾ , ಬೇಬಿ, ವೈಶಾಲಿ, ಚೇತನಕುಂಆರಿ, ಸವಿತ, ಸೌಮ್ಯ, ಪೂಜಾ ಇತರರು ಇದ್ದರು.