ಮಾನಭಂಗಕ್ಕೆ ಯತ್ನಿಸಿದ ನಾಲ್ವರಿಗೆ ದಂಡ ಸಹಿತ ಸಜೆ
ಮಡಿಕೇರಿ, ಜು.22: ಪರಿಶಿಷ್ಟ ಜಾತಿಗೆ ಸೇರಿದ ಯುವತಿಯ ಮಾನಭಂಗಕ್ಕೆ ಯತ್ನಿಸಿದ ನಾಲ್ವರು ಆರೋಪಿಗಳಿಗೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ದಂಡ ಸಹಿತ ಸಜೆ ವಿಧಿಸಿ ತೀರ್ಪು ನೀಡಿದೆ.
ಕುಶಾಲನಗರ ಬಳಿಯ ಹಳೆಗೋಟೆ ಗ್ರಾಮದ ಹೆಚ್.ಎಸ್. ಗಣೇಶ್, ಹೆಚ್.ಎಸ್. ಕೇಶವ, ಹೆಚ್.ಎಸ್. ದೇವರಾಜು ಮತ್ತು ಜಗದೀಶ ಎಂಬವರೆ ಶಿಕ್ಷೆಗೆ ಒಳಗಾದ ಆರೋಪಿಗಳು.
ಕುಶಾಲನಗರದ ಹಳೆಗೋಟೆ ಗ್ರಾಮದಲ್ಲಿ ಕಳೆದ 2012ನೇ ಸಾಲಿನ ಜೂನ್ 1 ರಂದು ಸಂಜೆ ಪರಿಶಿಷ್ಟ ಜಾತಿಗೆ ಸೇರಿದ ಯುವತಿಯ ಮಾನಭಂಗಕ್ಕೆ ಗಣೇಶ್, ಕೇಶವ ಮತ್ತು ದೇವರಾಜು ಎಂಬವರು ಪ್ರಯತ್ನಿಸಿದ್ದು, ದುಷ್ಕೃತ್ಯವೆಸಗಲು ಗ್ರಾಮದ ಜಗದೀಶ ಎಂಬಾತ ಪ್ರೇರಣೆ ನೀಡಿದ್ದ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕುಶಾಲನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ಜಗದೀಶನಿಗೆ ದೌರ್ಜನ್ಯ ತಡೆ ಕಾಯ್ದೆಯ ಅನ್ವಯ 4 ವರ್ಷ ಕಾರಾಗೃಹ ವಾಸ ಮತ್ತು 20 ಸಾವಿರ ರೂ. ದಂಡ, ದುಷ್ಕೃತ್ಯವೆಸಗಲು ಪ್ರೇರಣೆ ನೀಡಿದ ಆರೋಪಕ್ಕಾಗಿ 1 ವರ್ಷ ಕಾರಾಗೃಹವಾಸ ಮತ್ತು 5 ಸಾವಿರ ರೂ. ದಂಡ, ಗಣೇಶ್ ಕೇಶವ ಮತ್ತು ದೇವರಾಜು ಅವರುಗಳಿಗೆ ತಲಾ 2 ವರ್ಷಗಳ ಕಾರಾಗೃಹ ವಾಸ ಮತ್ತು ತಲಾ 25 ಸಾವಿರ ರೂ. ದಂಡ ವಿಧಿಸಲಾಗಿದೆ. ಒಟ್ಟು ವಸೂಲಾಗುವ 1 ಲಕ್ಷ ದಂಡದಲ್ಲಿ 95 ಸಾವಿರ ರೂ.ವನ್ನು ನೊಂದ ಪಿರ್ಯಾದುದಾರಳಿಗೆ ಪರಿಹಾರವಾಗಿ ನೀಡುವಂತೆ ಆದೇಶಿಸಲಾಗಿದೆ.