×
Ad

​ಜಾತಿನಿಂದನೆ, ಹಲ್ಲೆ : ಮೂವರಿಗೆ ಸಜೆ

Update: 2017-07-22 18:42 IST

ಮಡಿಕೇರಿ, ಜು.22: ವ್ಯಕ್ತಿಯೊಬ್ಬರ ಜಾತಿನಿಂದನೆ ಮಾಡಿ ಹಲ್ಲೆ ನಡೆಸಿರುವ ಮೂವರು ಆರೋಪಿಗಳಿಗೆ ದಂಡ ಸಹಿತ ಸಜೆ ವಿಧಿಸಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.

ಕೋತೂರು ಗ್ರಾಮದ ಲಕ್ಕುಂದ ಗ್ರಾಮದ ಚಿಮ್ಮಣಮಾಡ ಪೂವಯ್ಯ ಅಲಿಯಾಸ್ ಸುಧಿ, ಬೊಳ್ಳಿಮಾಡ ಸುಬ್ಬಯ್ಯ ಅಲಿಯಾಸ್ ಅರಸು ಮತ್ತು ಬೊಳ್ಳಿಮಾಡ ಉತ್ತಪ್ಪ ಅಲಿಯಾಸ್ ವಾಸು ಎಂಬವರೆ ಶಿಕ್ಷೆಗೊಳಗಾದ ಆರೋಪಿಗಳು.

ಲಕ್ಕುಂದ ಗ್ರಾಮದ ಎಂ.ಆರ್. ವೇಲಾಯುಧ ಎಂಬವರ ಅಂಗಡಿಯ ಬಳಿ 2012ರ ಮೇ 21 ರಂದು ಮಧ್ಯಾಹ್ನ, ಮನೆಯತ್ತ ತೆರಳುತ್ತಿದ್ದ ಹೆಚ್.ಆರ್. ರವಿ ಎಂಬವರ ಮೇಲೆ ಹಳೇ ದ್ವೇಷದಿಂದ ಮೂವರು ಆರೋಪಿಗಳು ಜಾತಿ ನಿಂದನೆ ಮಾಡಿ, ದೊಣ್ಣೆಯಿಂದ ಹಲ್ಲೆ ನಡೆಸಿದ್ದಲ್ಲದೆ, ತಲೆಯಿಂದ ರವಿಯವರ ಮುಖಕ್ಕೆ ಡಿಕ್ಕಿಹೊಡೆದು ಗಾಯಗೊಳಿಸಿದ್ದರು ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕುಟ್ಟ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದರು.

ಪ್ರಕರಣದ ಬಗ್ಗೆ ತನಿಖೆ ನಡೆಸಿದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತನ್ನ ತೀರ್ಪಿನಲ್ಲಿ, ಆರೋಪಿಗಳು ಅಪರಾಧ ಎಸಗಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಮೂವರು ಆರೋಪಿಗಳಿಗೆ ದೌರ್ಜನ್ಯ ತಡೆ ಕಾಯ್ದೆಯನ್ವಯ 4 ವರ್ಷಗಳ ಕಾರಾಗೃಹ ವಾಸ ಮತ್ತು ತಲಾ 10 ಸಾವಿರ ರೂ. ದಂಡ, ತಲೆಯಿಂದ ಡಿಕ್ಕಿ ಹೊಡೆದು ಗಾಯಗೊಳಿಸಿದ ಅಪರಾಧಕ್ಕಾಗಿ 1 ವರ್ಷ ಕಾರಾಗೃಹ ವಾಸ ಮತ್ತು ತಲಾ 3 ಸಾವಿರ ದಂಡ, ದೊಣ್ಣೆಯಿಂದ ಥಳಿಸಿ ಗಾಯಗೊಳಿಸಿರುವುದಕ್ಕಾಗಿ 3 ವರ್ಷ ಕಾರಾಗೃಹ ವಾಸ ಮತ್ತು ತಲಾ 5 ಸಾವಿರ ರೂ. ದಂಡ ವಿಧಿಸಿದೆ. ಆರೋಪಿಗಳು ವಿಧಿಸಿರುವ ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸುವಂತೆ, ಒಟ್ಟು ವಸೂಲಾದ ದಂಡದಲ್ಲಿ 50 ಸಾವಿರ ರೂ.ಗಳನ್ನು ಪಿರ್ಯಾದುದಾರರಿಗೆ ಪರಿಹಾರವಾಗಿ ನೀಡುವಂತೆ ಆದೇಶಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News