×
Ad

ತುಮಕುರು: ಅಭಿನಂದನಾ ಸಮಾರಂಭ

Update: 2017-07-22 20:03 IST

ತುಮಕೂರು, ಜು.22:ತುಮಕೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವ ವಾಡುತ್ತಿದ್ದು, ಶಿಕ್ಷಕರು ಸಹಕಾರ ನೀಡಿದರೆ, ಕ್ಲರಿಕಲ್ ಮಟ್ಟದಲ್ಲಿ ಆಗುತ್ತಿರುವ ತೊಂದರೆಯನ್ನು ನಿವಾರಿಸಲು ಸಾಧ್ಯ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ರಮೇಶ್‌ಬಾಬು ತಿಳಿಸಿದ್ದಾರೆ.

ನಗರದ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಜಿಲ್ಲಾ ಪ್ರೌಢಶಾಲೆ ಮುಖ್ಯ ಶಿಕ್ಷಕರು, ಸಹ ಶಿಕ್ಷಕರ ಸಂಘ, ಪಿಯುಸಿ, ಪದವಿ ಹಾಗೂ ತುಮಕೂರು ವಿವಿ ಉಪನ್ಯಾಸಕರುಗಳ ಸಂಘದವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡುತಿದ್ದ ಅವರು, ತುಮಕೂರು ತಾಲೂಕು ಬಿಇಓ ಕಚೇರಿಯ ಗುಮಾಸ್ತರೊಬ್ಬರ ವಿರುದ್ದ ಬಹಳಷ್ಟು ಶಿಕ್ಪ್ಷೃಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಬಿಇಓ ಅವರೊಂದಿಗೆ ಮಾತನಾಡಿ, ಸದರಿ ಗುಮಾಸ್ತರಿಗೆ ನೀಡಿದ್ದ ಹೆಚ್ಚುವರಿ ಹೊಣೆಗಾರಿಕೆಯನ್ನು ಕಡಿತ ಮಾಡಿಸಿದೆ. ಆ ನಂತರ ಅನೇಕರು ಅದೇ ಗುಮಾಸ್ತರ ಪರ ನನಗೆ ದೂರವಾಣಿ ಕರೆ ಮಾಡಿ ಒತ್ತಡ ತಂದರು. ಮೌಖಿಕವಾಗಿ ದೂರು ನೀಡುವ ಬದಲು ಲಿಖಿತವಾಗಿ ದೂರು ನೀಡಿದರೆ ಹೆಚ್ಚು ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ ಎಂದರು.

ಕಳೆದ ಕೆಲದಿನಗಳ ಹಿಂದೆ ತಡೆ ಹಿಡಿದಿದ್ದ ವೇತನ ಬಾಕಿಯನ್ನು ಯುಗಾದಿ ಗಿಪ್ಟಾಗಿ 129 ಕೋಟಿ ರೂಗಳನ್ನು ಸರಕಾರದೊಂದಿಗೆ ಮಾತುಕತೆ ನಡೆಸಿ ಬಿಡುಗಡೆ ಮಾಡಿಸಲಾಯಿತು. ಖಾಸಗಿ ಶಾಲೆಗಳ ಶಿಕ್ಪಕರಿಗೆ ನೀಡುವ ಕಾಲ್ಪನಿಕ ಬಡ್ತಿ ಕುರಿತಂತೆ ಸಮಸ್ಯೆ ಬೃಹದಾಕಾರವಾಗಿದ್ದು, ಈ ನಿಟ್ಟಿನಲ್ಲಿ ಹೊರಟ್ಟಿ ಸಮಿತಿ ನೀಡಿರುವ ವರದಿಗೂ, ಸರಕಾರ ನೀಡುತ್ತಿರುವ ಅಂಕಿ ಅಂಶಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸಮಿತಿಗೆ ಮರು ಪರಿಷ್ಕರಣೆಗೆ ಅವಕಾಶ ಕಲ್ಪಿಸಿದ್ದು, ವರದಿ ಬಂದ ನಂತರ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ರಮೇಶ್‌ಬಾಬು ಭರವಸೆ ನೀಡಿದರು.

ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಮೂರ್ತಿ ಅವರ ನೇತೃತ್ವದಲ್ಲಿ 6ನೇ ವೇತನ ಆಯೋಗವನ್ನು ಸರಕಾರ ರಚಿಸಿದ್ದು, ರಾಜ್ಯದಲ್ಲಿರುವ 5.22 ಲಕ್ಷ ನೌಕರರಿಗೆ ವೇತನ ಪರಿಷ್ಕರಣೆಯಾಗಲಿದೆ. ಪ್ರಮುಖವಾಗಿ ಈಗಾಗಲೇ ಅಧಿಕಾರಿ ವೃಂದಗಳ ನಡುವೆ ಇರುವ ವೇತನ ಲೋಪದೋಷ ಸರಿಪಡಿಸಿ, ನಂತರ ಆರನೇ ವೇತನ ಆಯೋಗದ ಶಿಫಾರಸ್ಸು ಜಾರಿಗೆ ತಂದರೆ ಹೆಚ್ಚಿನ ಅನುಕೂಲ ಶಿಕ್ಷಕ ವೃಂದಕ್ಕೆ ಆಗಲಿದೆ. ಅಲ್ಲದೆ ಸರಕಾರವೇ ನೀಡಿರುವ ಅಂಕಿ ಅಂಶದಂತೆ ಖಾಲಿ ಇರುವ ಸುಮಾರು 2.73ಲಕ್ಷ ಹುದ್ದೆಗಳನ್ನು ತುಂಬಲು ಕ್ರಮ ಕೈಗೊಂಡರೆ ಹೆಚ್ಚು ಸೂಕ್ತ.ವಿಧಾನ ಪರಿಷತ್ತಿನ ಒಳಗೆ ಮತ್ತು ಹೊರಗೆ ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ನಿರಂತರ ಪ್ರಯತ್ನ ನಡೆಸುತ್ತಿರುವುದಾಗಿ ರಮೇಶ್‌ಬಾಬು ತಿಳಿಸಿದರು.

ತುಮಕೂರು ವಿವಿ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ.ರಾಮಕೃಷ್ಣ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಉಮೇಶ್ ಶಿಕ್ಷಕರ ಸಮಸ್ಯೆ ಕುರಿತು ಮಾತನಾಡಿದರು. ವೇದಿಕೆಯಲ್ಲಿ ವಿಜ್ಞಾನ ಕೇಂದ್ರ ಸಿ.ವಿಶ್ವನಾಥ್,ನಿವೃತ್ತ ಪ್ರಾಂಶುಪಾಲರಾದ ಬಿ.ಮರುಳಯ್ಯ,ಬೈರ ಹನುಮಯ್ಯ ಮತ್ತು ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News