ಸಭೆಯಿಂದ ಹೊರ ನಡೆದ ನಗರಸಭಾಧ್ಯಕ್ಷರು: ಮೂಡದ ಒಮ್ಮತ
ಮಡಿಕೇರಿ, ಜು.22: ನಾಡಹಬ್ಬ ದಸರಾವನ್ನು ಅರ್ಥಪೂರ್ಣವಾಗಿ ಆಚರಿಸಬೇಕೆನ್ನುವ ಉದ್ದೇಶದಿಂದ ಬೈಲಾ ತಿದ್ದುಪಡಿಯ ಚರ್ಚೆಗಾಗಿ ಕರೆಯಲಾಗಿದ್ದ ಸಭೆಯಲ್ಲಿ ಒಮ್ಮತ್ತದ ಅಭಿಪ್ರಾಯ ವ್ಯಕ್ತವಾಗದೆ ಕೋಲಾಹಲ ಸೃಷ್ಟಿಯಾಗಿದೆ. ಮಾದರಿ ನಾಡಹಬ್ಬವಾಗಿ ಆಚರಿಸಲ್ಪಡಬೇಕಾಗಿದ್ದ ಮಡಿಕೇರಿ ದಸರಾದಲ್ಲಿ ಆರಂಭದಲ್ಲೇ ಅಪಸ್ವರ, ಕಲಹ ಏರ್ಪಟ್ಟಿದೆ. ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ದಸರಾ ಸಮಿತಿಯ ಕಾರ್ಯಾಧ್ಯಕ್ಷರ ಆಯ್ಕೆಗೆ ನಗರಸಭಾ ಸದಸ್ಯರಿಗೂ ಮತದಾನ ಮಾಡಲು ಅವಕಾಶ ನೀಡಬೇಕೆಂದು ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಬಿಗಿಪಟ್ಟು ಹಿಡಿದ ಪರಿಣಾಮ ಸಭೆ ಹಳಿತಪ್ಪಿತು.
ದಶಮಂಟಪಗಳ ಸಮಿತಿ, ಕರಗ ಸಮಿತಿ ಪ್ರಮುಖರು ಹಾಗೂ ನಗರಸಭಾ ಸದಸ್ಯರಿಗೆ ಮಾತ್ರ ಸಭೆಗೆ ಬರಲು ಅವಕಾಶ ಕಲ್ಪಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಕೆಲವು ಪದಾಧಿಕಾರಿಗಳು, ಕಾರ್ಯಾಧ್ಯಕ್ಷರು ಮತ್ತು ಇತರ ಹಿರಿಯರು ಸಭೆಯಿಂದ ಹೊರಹೋಗಬೇಕೇ ಎಂದು ಪ್ರಶ್ನಿಸಿದರು.
ಹಿರಿಯರಾದ ಎಂ.ಬಿ.ದೇವಯ್ಯಮಾತನಾಡಿ, ಸಭೆಗೆ ಯಾರು ಬರಬೇಕು,ಯಾರು ಬರಬಾರದು ಎಂಬುವುದನ್ನು ನೀವೇ ನಿರ್ಧರಿಸಿರುವುದು ಸರಿಯಲ್ಲ. ಎಲ್ಲವನ್ನು ನೀವೇ ನಿರ್ಧರಿಸುವುದಾದರೆ ನಾವು ಸಭೆಯಿಂದ ಹೊರಹೋಗುತ್ತೇವೆ ಎಂದು ಹೇಳಿದರು. ಇದಕ್ಕೆ ಇತರ ದೇವಾಲಯ ಸಮಿತಿ ಪದಾಧಿಕಾರಿಗಳು ಧ್ವನಿಗೂಡಿಸಿದರು.
ಈ ಸಂದರ್ಭ ಮಾತನಾಡಿದ ನಗರಸಭಾ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ದಸರಾ ಸಮಿತಿ ಬೈಲಾ ತಿದ್ದುಪಡಿಯಾಗುವ ಅಗತ್ಯವಿದೆ. ಈಗಾಗಲೇ ಪ್ರಮುಖ 4 ಸ್ಥಾನಗಳನ್ನು ದಸರಾ ಸಮಿತಿಯಲ್ಲಿ ನಗರಸಭಾ ಪದಾಧಿಕಾರಿಗಳಿಗೆ ನೀಡಲಾಗಿದೆ. ಆದ್ದರಿಂದ ಸಾರ್ವಜನಿಕರು ಯಾರಾದರೂ ಕಾಯಾರ್ಧ್ಯಕ್ಷರಾಗಲಿ ಎಂದು ಸಲಹೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪದಾಧಿಕಾರಿಗಳು, ದಶಮಂಟಪಗಳ ಸಮಿತಿ ಮೂಲಕ ಸೇವೆ ಸಲ್ಲಿಸಿ ಬಂದವರು ಕಾರ್ಯಾಧ್ಯಕ್ಷರಾದರೆ ಉತ್ತಮ ಎಂದರು. ಕಾಯಾರ್ಧ್ಯಕ್ಷ ಸ್ಥಾನದ ಚುನಾವಣೆಯ ಸಂದರ್ಭಮತದಾನದ ಹಕ್ಕು ಯಾರಿಗೆಲ್ಲ ಇದೆ ಎಂದು ಪ್ರಶ್ನಿಸಿದರು. ಕಾವೇರಮ್ಮ ಸೋಮಣ್ಣ ಮಾತನಾಡಿ, ದಶಮಂಟಪ ಸಮಿತಿಯ 10 ಪದಾಧಿಕಾರಿಗಳು, ಕರಗ ಸಮಿತಿಯ 4 ಪದಾಧಿಕಾರಿಗಳು ಹಾಗೂ ನಗರಸಭಾ ಸದಸ್ಯರಿಗೆ ಚುನಾವಣಾ ಮತದಾನದ ಹಕ್ಕು ನೀಡಬೇಕಾಗುತ್ತದೆ ಎಂದರು.
ಇದು ಕೋಲಾಹಲಕ್ಕೆ ಕಾರಣವಾಯಿತ್ತಲ್ಲದೆ ಅಧ್ಯಕ್ಷರು ಹಾಗೂ ದಶಮಂಟಪಗಳ ಸಮಿತಿ ಪದಾಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಬೈಲಾ ತಿದ್ದುಪಡಿ ಸಮಿತಿ ಅಧ್ಯಕ್ಷರಾದ ಜಿ.ಚಿದ್ವಿಲಾಸ್ ಮಾತನಾಡಿ, ಹಿಂದಿನ ಸಭೆಯಲ್ಲಿ ನಡೆದ ಚರ್ಚೆಗಳ ನಿರ್ಣಯಗಳನ್ನು ಸಭೆಯ ಮುಂದಿಟ್ಟರು. ಅದರಲ್ಲಿ ಕಾಯಾರ್ಧ್ಯಕ್ಷ ಸ್ಥಾನದ ಆಯ್ಕೆಯನ್ನು ದಶಮಂಟಪ ಸಮಿತಿ ಮತ್ತು ಕರಗ ಸಮಿತಿಯೇ ಮಾಡಬೇಕೆಂಬ ನಿರ್ಣಯವೂ ಸೇರ್ಪಡೆಯಾಗಿತ್ತು.
ಈ ಸಂದರ್ಭ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣಮಾತನಾಡಿ, ನಗರಸಭಾ ಸದಸ್ಯರಿಗೂ ಮತದಾನದ ಅವಕಾಶ ನೀಡಬೇಕೆಂದು ಪಟು್ಟಹಿಡಿದರು. ಎಂ.ಬಿ.ದೇವಯ್ಯಮಾತನಾಡಿ, ನಗರಸಭಾ ಸದಸ್ಯರಿಗೆ ಯಾಕೆ ಮತದಾನದ ಹಕ್ಕು ನೀಡಬೇಕು ಎಂಬುವುದನ್ನು ಸ್ಪಷ್ಟಪಡಿಸಿಎಂದರು. ಸಭೆಯಲ್ಲಿ ವ್ಯಕ್ತವಾಗುವ ಬಹುಮತಕ್ಕೆ ಗೌರವ ನೀಡಿ ಎಂದು ಸಲಹೆ ನೀಡಿದರು.
ಆದರೂ ಅಧ್ಯಕ್ಷರು ಪಟ್ಟುಬಿಡದೆ ನಗರಸಭಾ ಸದಸ್ಯರಿಗೂ ಮತದಾನದ ಹಕ್ಕುನೀಡಬೇಕೆಂದರು. ತೀವ್ರ ಆಕ್ರೋಶಗೊಂಡ ಪದಾಧಿಕಾರಿಗಳು,ವೇದಿಕೆ ಬಳಿ ಬಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಏರುಧ್ವನಿಯಲ್ಲಿ ಅಧ್ಯಕ್ಷರ ಮಾತಿಗೆ ವಿರೋಧ ವ್ಯಕ್ತಪಡಿಸಿದರು.
ಇದರಿಂದ ಬೇಸರಗೊಂಡ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಸಭೆಯಿಂದ ಹೊರನಡೆದರು. ಕೆಲವು ಕಾಂಗ್ರೆಸ್‌ನ ಪ್ರತಿನಿಧಿಗಳು ಕೂಡಸಭಾತ್ಯಾಗ ಮಾಡಿದರು.
ಕೊನೆಗೂ ಯಾವುದೇ ಒಮ್ಮತ ಮೂಡದ ಬೈಲಾ ತಿದ್ದುಪಡಿ ಸಭೆ ಅಪೂರ್ಣಗೊಂಡಿತು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚುಮ್ಮಿದೇವಯ್ಯ, ಕಳೆದ ಸಾಲಿನ ದಸರಾ ಸಮಿತಿ ಕಾರ್ಯಾಧ್ಯಕ್ಷರಾದ ಮಹೇಶ್ ಜೈನಿ ಸೇರಿದಂತೆ ದಶಮಂಟಪ ಸಮಿತಿ ಪದಾಧಿಕಾರಿಗಳು, ನಗರಸಭಾ ಸದಸ್ಯರು ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.