×
Ad

ಪುರೋಹಿತಶಾಹಿ ವಿರುದ್ದ ದ್ವನಿ ಎತ್ತಿದ್ದ ಕೆ.ಎಂ.ಶಂಕರಪ್ಪ: ಪ್ರೊ.ಚಂಪಾ

Update: 2017-07-22 20:50 IST

ತುಮಕೂರು, ಜು.22 :ಪುರೋಹಿತಶಾಹಿ ವ್ಯವಸ್ಥೆ ವಿರುದ್ಧ ದ್ವನಿ ಎತ್ತಿದ್ದ ಶಂಕರಪ, ಅದನ್ನು ಒಂದು ಸಂಘಟನೆಯಾಗಿ ರೂಪಿಸಿ ನವ್ಮ್ಮಂತಹ ನೂರಾರು ತೊರೆಗಳು ಅದರಲ್ಲಿ ಸೇರುವಂತೆ ಮಾಡಿದ್ದರು ಎಂದು ಸಾಹಿತಿ ಚಂದ್ರಶೇಖರ್ ಪಾಟೀಲ್ ತಿಳಿಸಿದ್ದಾರೆ.

ತುಮಕೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ ವಿಭಾಗವು ಆಯೋಜಿಸಿದ್ದ ಕೆ.ಪಿ.ನಟರಾಜ ಮತ್ತು ನಿತ್ಯಾನಂದ ಬಿ.ಶೆಟ್ಟಿ ಸಂಪಾದಕತ್ವದಲ್ಲಿ ರೂಪುಗೊಂಡ ಕೆ.ಎಂ.ಶಂಕರಪ್ಪ ಸ್ಮೃತಿ ಸಂಪುಟ ‘ಧರ್ಮಮೇಘ’ ಕೃತಿ ಲೋಕಾರ್ಪಣೆ ಮಾಡಿ ಮಾತನಾಡುತಿದ್ದ ಅವರು, ಪುರೋಹಿತ ಶಾಹಿ ವಿರುದ್ದದ ಹೋರಾಟದಲ್ಲಿ ಶಂಕರಪ್ಪ, ಪಿ.ಲಂಕೇಶ್, ಪ್ರೊ.ನಂಜುಂಡಸ್ವಾಮಿ, ಪೂರ್ಣಚಂದ್ರ ತೇಜಸ್ವಿ ಅವರು ಹೋರಾಟದ ಶಕ್ತಿಯಾಗಿ ಕೆಲಸ ಮಾಡಿದರು ಎಂದರು.
ಕೆ.ಎಂ.ಶಂಕರಪ್ಪ ಅವರು ಸಮಾಜವಾದಿ ಚಿಂತನೆಯ ಸುಪ್ತ ಶಕ್ತಿಯಾಗಿ ಕೆಲಸ ಮಾಡುತ್ತ ಸಂಘಟನೆಯ ಬೀಜ ಬಿತ್ತಿದ ಚೇತನ.  ಬಹಳ ನಿರೀಕ್ಷೆ ಇಟ್ಟುಕೊಂಡು ಕನ್ನಡ ಬರಹಗಾರರ ಮತ್ತು ಕಲಾವಿದರ ಒಕ್ಕೂಟವನ್ನು 1975ರಲ್ಲಿ ರಚಿಸಿದರು. ಆದರೆ, ಅದು ಬೇಗ ಇತಿಹಾಸ ಸೇರಿಕೊಂಡು ಬಿಟ್ಟಿತು. ದೊಡ್ಡ ಭಾಷಣಕಾರರೂ ಆಗಿರದೆ, ಅವರ ಭಾಷೆಯೇ ಸಿನಿಮಾ ಆಗಿತ್ತು. ಬುದ್ಧನಂತೆಯೇ ಚಿಂತನಶೀಲರಾಗಿದ್ದರು. ಅವರ ನಿರ್ದೇಶನದ ವಾಟರ್ ಇನ್ ದ ಟ್ಯಾಪ್ ಸಿನಿಮಾ ಅತ್ಯಂತ ಪ್ರಭಾವಶಾಲಿ ಸಿನಿಮಾ ಆಗಿತ್ತು’ಎಂದು ಪ್ರೊ.ಚಂಪಾ ತಿಳಿಸಿದರು.

ಪುಸ್ತಕ ಕುರಿತು ಮಾತನಾಡಿದ ನವದೆಹಲಿ ಕೇಂದ್ರ ಸಾಹಿತ್ಯ ಆಕಾಡೆಮಿ ನಿವೃತ್ತ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ, ಶಂಕರಪ್ಪ ಅವರು ಕೆಲವರಿಗೆ ಗುರುವಾಗಿ, ಕೆಲವರಿಗೆ ಯೋಗಿಯಾಗಿ, ಕೆಲವರಿಗೆ ಸಮಾಜವಾದಿಯಾಗಿ, ಚೈತನ್ಯದ ಚಿಲುಮೆಯಾಗಿ ಗೋಚರಿಸಿದ್ದಾರೆ. ಈ ಪುಸ್ತಕದಲ್ಲಿ ಅವರ ವ್ಯಕ್ತಿತ್ವ ಅನಾವರಣ ಅರ್ಥಪೂರ್ಣವಾಗಿ ಆಗಿದೆ. ಪುಣೆ ಫಿಲ್ಮ್ ಇನ್‌ಸ್ಟಿಟ್ಯೂಟ್‌ನ ಅಪ್ಪಟ ಪ್ರತಿಭೆಯಾಗಿದ್ದರೂ ಯಶಸ್ವಿ ಚಿತ್ರ ಮಾಡಲಾಗಲಿಲ್ಲ ಎಂಬ ಮಾತು ಸಿನಿಮಾ ಜಗತ್ತಿನಲ್ಲಿ ಕೇಳಿ ಬರುತ್ತದೆ. ಅವರು ಸಿನಿಮಾ ಜಗತ್ತಿನ ವಾಣಿಜ್ಯ ಒಳಸುಳಿಗೊಳಗಾಗದೇ ಇರುವುದೂ, ಆ ಜಗತ್ತಿನ ದೊಡ್ಡ ಸಮೂಹದ ಜೊತೆಗೂಡಿ ಕೆಲಸ ಮಾಡಲು ಸಾಧ್ಯವಾಗದೇ ಇದ್ದುದ್ದೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಡಾ.ರಾಜ್‌ಕುಮಾರ್ ಅವರಿಗೆ ಕನ್ನಡ ಭಾಷೆಯ ಮೇಲೆ ಇದ್ದ ಹಿಡಿತ, ಅಭಿಮಾನ ಕಂಡು ರಾಜ್‌ಕುಮಾರ್ ಅಂದ್ರೆ ಕನ್ನಡದ ಮೇಷ್ಟ್ರು ಕನ್ಲ ಎಂದು ಹೃದಯ ತುಂಬಿ ಅಭಿಮಾನದ ಮಾತುಗಳನ್ನಾಡಿದ್ದರು’ ಎಂದು ಕೃಷ್ಣಮೂರ್ತಿ ನೆನಪಿಸಿಕೊಂಡರು.

ಕುಲಪತಿ ಪ್ರೊ.ಎ.ಎಚ್.ರಾಜಾಸಾಬ್ ಅಧ್ಯಕ್ಷತೆ ವಹಿಸಿದ್ದರು. ಕೆ.ಪಿ.ನಟರಾಜ್ ಪ್ರಾಸ್ತಾವಿಕ ಮಾತನಾಡಿದರು. ಪ್ರಸಾರಾಂಗ ನಿರ್ದೇಶಕ ನಿತ್ಯಾನಂದ ಬಿ.ಶೆಟ್ಟಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News