×
Ad

ತುಮಕೂರು ಹೆಚ್.ಎಂ.ಟಿ. ಕೇವಲ ನೆನಪು ಮಾತ್ರ: ಮುದ್ದಹನುಮೇಗೌಡ

Update: 2017-07-22 20:54 IST

ತುಮಕೂರು,ಜು.22: ಸುಮಾರು 2154 ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದ ಹೆಚ್.ಎಂ.ಟಿ. ಕಾರ್ಖಾನೆ ಮುಚ್ಚಿದ ನಂತರ ಇಲ್ಲಿಯ ಯಂತ್ರೋಪಕರಣಗಳು, ಪೀಠೋಪಕರಣಗಳನ್ನು ಹರಾಜು ಮೂಲಕ ವಿಲೇ ಮಾಡಲಾಗಿದ್ದು, ಇಂದು ಇದೊಂದು ಕೇವಲ ನೆನಪು ಮಾತ್ರ ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ತಿಳಿಸಿದ್ದಾರೆ.

ಶನಿವಾರ ಮಧ್ಯಾಹ್ನ ಹೆಚ್.ಎಂ.ಟಿ. ಕಾರ್ಖಾನೆ ಇದ್ದ ಸ್ಥಳಕ್ಕೆ ಭೇಟಿ ನೀಡಿ ಚಲ್ಲಾಪಿಲ್ಲಿಯಾಗಿ ಬಿದ್ದಿರುವ ಪೀಠೋಪಕರಣಗಳನ್ನು ನೋಡಿ ಬಾವುಕರಾದ ಸಂಸದರು, ತುಮಕೂರು ನಗರದಲ್ಲಿ ಕಾರ್ಯಾಚರಿಸುತ್ತಿದ್ದ ವಿಶ್ವಪ್ರಸಿದ್ಧ ವಾಚ್‌ಗಳ ಉತ್ಪಾದಕ ಸಂಸ್ಥೆ ಹೆಚ್.ಎಂ.ಟಿ.ಕಾರ್ಖಾನೆಯು ಆರಂಭದಲ್ಲಿ ಲಾಭಗಳಿಸುತ್ತಿದ್ದು, ನಂತರದ ದಿನಗಳಲ್ಲಿ ವಿಶ್ವ ಮಾರುಕಟ್ಟೆಯ ಸ್ಪರ್ಧೆಯಿಂದಾಗಿ ನಷ್ಟವುಂಟಾದ ಕಾರಣ ಕಾರ್ಖಾನೆಯು ಕ್ರಮೇಣವಾಗಿ ತನ್ನ ಅಸ್ಥಿತ್ವವನು್ನ ಕಳೆದುಕೊಂಡು ಮುಚ್ಚಲ್ಪಟ್ಟಿತು ಎಂಬುದು ನಿಜಕ್ಕೂ ವಿಷಾದದ ಸಂಗತಿ ಎಂದರು.

ಸದರಿ ಜಾಗವನ್ನು ಇನ್ನು ಮುಂದೆ ಇದನ್ನು ಹೆಚ್.ಎಂ.ಟಿ.ಎಂದು ಸಂಬೋಧಿಸಲಾಗುವುದಿಲ್ಲ. ಇದೇ ಆಗಸ್ಟ್ ಅಂತ್ಯಕ್ಕೆ ಭಾರತ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಇಲ್ಲಿ ಆರಂಭಿಸಲು ಜಾಗ ಹಸ್ತಾಂತರವಾಗಲಿದೆ ಎಂದ ಸಂಸದರು, ಒಂದು ಕಡೆ ಹೆಚ್.ಎಂ.ಟಿ. ಕಾರ್ಖಾನೆ ಮುಚ್ಚಿದ ಬಗ್ಗೆ ವಿಷಾಧವಾಗುತ್ತಿದ್ದರೆ ಮತ್ತೊಂದೆಡೆ ವಿಶ್ವದಲ್ಲಿ ಭಾರತ ಬಾಹ್ಯಾಕಾಶ ರಂಗದಲ್ಲಿ ಒಂದರ  ಮೇಲೊಂದು ಮೈಲಿಗಲ್ಲನ್ನು ದಾಟುತ್ತಾ, ಪ್ರಧಾನ ದೇಶವಾಗುತ್ತಿರುವ ಈ ಸಂದರ್ಭದಲ್ಲಿ ಇಸ್ರೋ ಸಂಸ್ಥೆ ತುಮಕೂರಿನಲ್ಲಿ ತನ್ನ ಕೇಂದ್ರವನ್ನು ತೆರೆಯುವ ಮೂಲಕ ತುಮಕೂರು ವಿಶ್ವ ಭೂಪಟದಲ್ಲಿ ರಾರಾಜಿಸಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಸದರಿ ಜಾಗಕ್ಕೆ ಸಂಬಂಧಿಸಿದಂತೆ ಇಸ್ರೋ ಸಂಸ್ಥೆ ಭಾರತ ಸರಕಾರಕ್ಕೆ ಈಗಾಗಲೇ ಒಂದು ನೂರು ಕೋಟಿ ರೂ.ಗಳನ್ನು ಪಾವತಿ ಮಾಡಿದ್ದು, ಉಳಿದ 1500 ಕೋಟಿ ರೂ.ಗಳನ್ನು ಹಂತಹಂತವಾಗಿ ಭಾರತ ಸರಕಾರಕ್ಕೆ ಪಾವತಿಸಲಿದೆ. ಶೀಘ್ರದಲ್ಲಿ ಮತ್ತೊಂದು ಅಷ್ಟೇ ವಿಶ್ವದರ್ಜೆಯ ಉದ್ಯಮವೊಂದು ತಲೆ ಎತ್ತುತ್ತಿರುವುದು ತುಸು ನೆಮ್ಮದಿಯನ್ನು ನೀಡಿದೆ ಎಂದು ಎಸ್.ಪಿ.ಮುದ್ದಹನುಮೇಗೌಡ ನುಡಿದರು. 

ಸಂಸದರ ಜೊತೆಯಲ್ಲಿ ಹೆಚ್.ಎಂ.ಟಿ. ಕಾರ್ಖಾನೆಯ ಪ್ರಾಜೆಕ್ಟ್ ಅಧಿಕಾರಿ ರಘುರಾಮ್ ಮತ್ತು ಮುಖ್ಯ ಲೆಕ್ಕಾಧಿಕಾರಿ ಶಿವರಾಜ್, ಕಾರ್ಮಿಕ ಸಂಘದ ಅಧ್ಯಕ್ಷರಾದ ಶಂಕರಲಿಂಗಪ್ಪ ಮತ್ತು ಕಾರ್ಯದರ್ಶಿ ಸತ್ಯನಾರಾಯಣ ಅವರುಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News