ಯುವ ಸಮುದಾಯ ಅಲ್ಪ ತೃಪ್ತಿಗೆ ಒಳಗಾಗಬಾರದು: ಎಸ್.ಪಿ.ಎಂ
ತುಮಕೂರು, ಜು.23: ಸಾಧನೆಗೆ ಅಗಾಧ ಅವಕಾಶಗಳು ಲಭ್ಯವಿರುವಾಗ ಯುವ ಸಮುದಾಯ ಅಲ್ಪತೃಪ್ತರಾಗಬಾರದು ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ಅಭಿಪ್ರಾಯಪಟ್ಟಿದ್ದಾರೆ.
ನಗರದ ಹನುಮಂತಪುರದಲ್ಲಿರುವ ಶ್ರೀಕೋಲ್ಲಾಪುರದಮ್ಮ ಸಮುದಾಯ ಭವನದಲ್ಲಿ ಒಕ್ಕಲಿಗರ ಕ್ಷೇಮಾಭಿವೃದ್ದಿ ಸಂಘ(ರಿ)ಹನುಮಂತಪುರ ಆಯೋಜಿಸಿದ್ದ ಪ್ರತಿಭಾಪುರಸ್ಕಾರ ಮತ್ತು ಕೆಂಪೇಗೌಡ ಜಯಂತಿ ಹಾಗೂ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಇಂದು ಸಾಧನೆ ಮಾಡುವವರಿಗೆ ಸ್ಕೈ ಇನ್ ದಿ ಲಿಮಿಟ್ ಎಂಬಂತೆ ಅಕಾಶದೆತ್ತರಕ್ಕೆ ಬೆಳೆಯಲು ಅವಕಾಶಗಳ ಮಹಾಪೂರವೇ ಇದೆ. ಹಾಗಾಗಿ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಎತ್ತರಕ್ಕೆ ಬೆಳೆಯಲು ಪ್ರಯತ್ನಿಸಿ. ಇಷ್ಟೇ ಸಾಕು ಎಂಬು ಅಲ್ಪತೃಪ್ತರಾಗಬಾರದು ಎಂದು ಕಿವಿ ಮಾತು ಹೇಳಿದರು.
ಇಂದಿನ ವಿದ್ಯಾವಂತ ಸಮುದಾಯದ ಮೇಲೆ ಸಮಾಜದ ಮತ್ತು ತಂದೆ,ತಾಯಿಗಳ ಋಣವಿದೆ. ಈ ಸಮಾಜ ನಿಮ್ಮ ಪೋಷಕರು ಹೆಮ್ಮೆ ಪಡುವಂತಹ ವ್ಯಕ್ತಿಗಳು ನೀವಾಗಬೇಕು.ಇವ ನಮ್ಮ ಮಗ ಎಂದು ನಿಮ್ಮ ಹೆತ್ತವರು ಹೆಮ್ಮೆಯಿಂದ ಹೇಳುವಂತಹ ಸಾಧನೆಯನ್ನು ನೀವು ಮಾಡಿದಾಗ, ತಂದೆ, ತಾಯಿಗಳ ಮುಖದಲ್ಲಿ ತರುವ ನಗು ಮತ್ತು ನೆಮ್ಮದಿ ಸಾವಿರ ಕೋಟಿ ಹಣ ಕೊಟ್ಟರು ಸಾಲದು. ಈ ಸಮಾಜ ನಿಮ್ಮಿಂದ ಸಾಕಷ್ಟು ನಿರೀಕ್ಷೆ ಮಾಡುತ್ತದೆ. ಅದನ್ನು ಹುಸಿ ಮಾಡದಂತೆ ನೀವೆಲ್ಲರೂ ನಡೆದುಕೊಳ್ಳಿ. ಈ ದೇಶಕ್ಕೆ ಉತ್ತಮ ಆಡಳಿತಗಾರರು, ವಿಜ್ಞಾನಿಗಳು, ರಾಜಕಾರಣಿಗಳ ಅಗತ್ಯವಿದೆ. ಯುವಜನತೆ ಇತ್ತ ಕಡೆ ಗಮನಹರಿಸಬೇಕು ಎಂದು ಎಸ್.ಪಿ.ಮುದ್ದಹನುಮೇಗೌಡ ಸಲಹೆ ನೀಡಿದರು.
ಶಾಸಕ ಡಾ.ರಫೀಕ್ ಅಹಮದ್ ಮಾತನಾಡಿ, ಯಾವುದೇ ಒಂದು ಸಮುದಾಯ ಅಭಿವೃದ್ದಿ ಕಾಣಬೇಕಾದರೆ ಶಿಕ್ಷಣ ಬಹುಮುಖ್ಯ ಪಾತ್ರ ವಹಿಸುತ್ತದೆ. ಇದನ್ನೇ ಡಾ.ಬಿ.ಆರ್.ಅಂಬೇಡ್ಕರ್ ರಿಂದ ಇದುವರೆಗಿನ ದಾರ್ಶನಿಕರು ಪ್ರತಿಪಾದಿಸುತ್ತಾ ಬಂದಿದ್ದಾರೆ. ಇದರ ಮಹತ್ವವನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಇಂದು ಮನೆಯಲ್ಲಿಯೇ ಕುಳಿತು ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸುವಷ್ಟು ತಂತ್ರಜ್ಞಾನ ಬೆಳೆದಿದೆ. ಅಲ್ಲದೆ ಸರಕಾರಗಳು ಕೂಡ ಶೈಕ್ಷಣಿಕ ವಾತಾವರಣಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುತ್ತಿದೆ. ಇವುಗಳ ಸದ್ಬಳಕೆ ಮಾಡಿಕೊಂಡು ಉನ್ನತ ಹುದ್ದೆಗಳನ್ನು ಅಲಂಕರಿಸಿ ನಾಡಿಗೆ ಕೀರ್ತಿ ತರಬೇಕೆಂದು ಶುಭ ಹಾರೈಸಿದರು.
ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡ ಪ್ರಭು ಕೆಂಪೇಗೌಡರ ಹೆಸರಿಡುವ ಮೂಲಕ ಅವರ ಹೆಸರು ಅಜರಾಮರವಾಗುವಂತೆ ಮಾಡಿದೆ. ಅಲ್ಲದೆ ಮೆಟ್ರೋಗೆ ಕೆಂಪೇಗೌಡರ ಹೆಸರಿಡುವ ಬೇಡಿಕೆ ಬಂದಿದ್ದು, ಅದು ಸರಕಾರದ ಪರಿಶೀಲನೆಯಲ್ಲಿದೆ. ತುಮಕೂರು ನಗರದಲ್ಲಿ ಟೌನ್‌ಹಾಲ್ ವೃತ್ತಕ್ಕೆ ಈಗಾಗಲೇ ಬಾಲ ಗಂಗಾಧರನಾಥಸ್ವಾಮೀಜಿ ಅವರ ಹೆಸರಿಡಲಾಗಿದೆ. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿಯಿಂದ ಹಾಸ್ಟಲ್‌ಗಳ ನಿರ್ಮಾಣಕ್ಕೆ ಸಾಕಷ್ಟು ಅನುದಾನ ನೀಡಲಾಗಿದೆ ಎಂದು ಡಾ.ರಫೀಕ್ ಅಹಮದ್ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕಲಿಗರ ಕ್ಷೇಮಾಭಿವೃದ್ದಿ ಸಂಘ-ಹನುಮಂತಪುರ ಇದರ ಅಧ್ಯಕ್ಷ ವಿ.ವೀರನಾಗಯ್ಯ ವಹಿಸಿದ್ದರು. ಉಪಾಧ್ಯಕ್ಷರಾದ ಹೆಚ್.ಟಿ.ತಿಮ್ಮಪ್ಪನವರು ಪ್ರಸ್ತಾವಿಕ ನುಡಿಗಳನ್ನಾಡಿದರು.ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಆರ್.ಶಿವರಾಮಯ್ಯ, ನರಸಿಂಹಮೂರ್ತಿ, ಪಾಲಿಕೆ ಮಾಜಿ ಮೇಯರ್ ಲಲಿತ ರವೀಶ್, ಮಾಜಿ ಸದಸ್ಯೆ ಕಮಲ ಕೃಷ್ಣಮೂರ್ತಿ, ಕುಂಚಟಿಗ ಒಕ್ಕಲಿಗರ ಸಂಘದ ಅಧ್ಯಕ್ಷ ದೊಡ್ಡಲಿಂಗಪ್ಪ, ಭೈರವ ಎಲೆಕ್ಟ್ರಾನಿಕ್ಸ್‌ನ ಗಿರೀಶ್, ಉಪ ತಹಶೀಲ್ದಾರ್ ನರಸಿಂಹರಾಜು, ನೇತಾಜಿ ಶ್ರೀಧರ್,ಶಿವರಾಮ್ ಮತ್ತಿತರರು ಹಾಗೂ ಒಕ್ಕಲಿಗರ ಕ್ಷೇಮಾಭಿವೃದ್ದಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.