ಸರ್ಕಾರಿ ಉದ್ಯೋಗಕ್ಕೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯುವ ನಿಯಮ ಜಾರಿಗೊಳಿಸಬೇಕು: ಬಿ.ಬಿ.ನಿಂಗಯ್ಯ
ಮೂಡಿಗೆರೆ, ಜು.23: ಸರ್ಕಾರದ ಉದ್ಯೋಗಕ್ಕೆ ಸೇರಲು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯಬೇಕು ಎನ್ನುವ ನಿಯಮವನ್ನು ಸರ್ಕಾರ ಜಾರಿಗೊಳಿಸಿದರೆ ಮಾತ್ರ ಸರ್ಕಾರಿ ಶಾಲೆಗಳು ಮುಚ್ಚುವ ಭೀತಿಯಿಂದ ಪಾರಾಗಬಹುದು ಎಂದು ಶಾಸಕ ಬಿ.ಬಿ.ನಿಂಗಯ್ಯ ಹೇಳಿದರು.
ಅವರು ತಾಲೂಕಿನ ಚಿನ್ನಿಗಾ-ಜನ್ನಾಪುರ ಸರ್ಕಾರಿ ಪ್ರೌಡಶಾಲೆಯಲ್ಲಿ 8ನೇತರಗತಿ ಮಕ್ಕಳಿಗೆ ಉಚಿತ ಸೈಕಲ್ ವಿತರಿಸಿ ಮಾತನಾಡಿದರು. ಬಡವರಿಗೆ ಸರ್ಕಾರಿ ಶಾಲೆ, ಶ್ರೀಮಂತರಿಗೆ ಖಾಸಗಿ ಶಾಲೆಗಳು ಎಂಬ ಕೀಳರಿಮೆ ಇದೆ. ಗುಣಾತ್ಮಕ ಶಿಕ್ಷಣಗಳು ಸರ್ಕಾರಿ ಶಾಲೆಯಲ್ಲೂ ದೊರೆಯುತ್ತವೆ. ಆದ್ದರಿಂದ ಬಡವ-ಶ್ರೀಮಂತ ಎಂಬ ಭೇಧ ಭಾವ ಇಲ್ಲದೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕೆಂದು ಕರೆ ನೀಡಿದರು.
ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 4 ವರ್ಷಗಳಿಂದ 8ನೇ ತರಗತಿ ಪ್ರಾರಂಭವಾಗಿದ್ದರಿಂದ ಪ್ರೌಡಶಾಲೆಗಳಿಗೆ ವಿದ್ಯಾರ್ಥಿಗಳಿಲ್ಲದಂತಾಗಿದೆ. ಹಾಗಾಗಿ 8ನೇ ತರಗತಿಯನ್ನು ಪ್ರೌಡಶಾಲೆಗೆ ಸ್ಥಳಾಂತರಿಸಬೇಕು. ಇಲ್ಲದಿದ್ದರೆ ಪ್ರೌಡಶಾಲೆಗಳ 8ನೇ ತರಗತಿ ವಿಭಾಗವನ್ನು ಮುಚ್ಚುವ ಭೀತಿ ಎದುರಾಗಲಿದೆ ಎಂದು ತಿಳಿಸಿದರು.
ಈ ಸಾಲಿನ ಶೈಕ್ಷಣಿಕ ವರ್ಷದಿಂದ ಚಿನ್ನಿಗ-ಜನ್ನಾಪುರ ಪಿಯು ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗವನ್ನು ತಮ್ಮ ಪ್ರಯತ್ನದಿಂದ ಪ್ರಾರಂಬಿಸಲಾಗಿದೆ. ಆದರೆ ಆ ವಿಭಾಗಕ್ಕೆ ವಿದ್ಯಾರ್ಥಿಗಳು ಸೇರದೆ ನನೆಗುದಿಗೆ ಬಿದ್ದಿದೆ. ಆದ್ದರಿಂದ ವಾಣಿಜ್ಯ ಶಾಸ್ತ್ರ ವಿಭಾಗಕ್ಕೆ ವಿದ್ಯಾರ್ಥಿಗಳನ್ನು ಸೇರಿಸುವಂತೆ ಪೋಷಕರು ಮುತುವರ್ಜಿ ವಹಿಸಬೇಕು ಎಂದು ಮನವಿ ಮಾಡಿದರು.
ವಿಲ್ಲುಪುರಂ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬೇಲೂರಿನಿಂದ ಹ್ಯಾಂಡ್‍ಪೋಸ್ಟ್ ವರೆಗೆ ರಸ್ತೆ ದುರಸ್ಥಿಗೆ 12 ಕೋಟಿ ರೂ.ಗಳ ಅನುದಾನ ಮಂಜೂರಾಗಿದೆ. ಜನ್ನಾಪುರ ಬಸ್ ನಿಲ್ದಾಣದಿಂದ ಪ್ರೌಡಶಾಲೆ ರಸ್ತೆ ದುರಸ್ಥಿಗೆ 2.50 ಕೋಟಿ ರೂ.ಗಳು ಬಿಡುಗಡೆಯಾಗಿದೆ. ಮಳೆಗಾಲದ ನಂತರ ಎರಡು ಕಾಮಗಾರಿಗಳಿಗೆ ಚಾಲನೆ ದೊರೆಯಲಿದೆ ಎಂದರು.
ಈ ಸಮಯದಲ್ಲಿ ಎಸ್‍ಡಿಎಂಸಿ ಅದ್ಯಕ್ಷ ಅಣ್ಣಪ್ಪನ ಅಧ್ಯಕ್ಷತೆ ವಹಿಸಿದ್ದರು.
ಗ್ರಾಪಂ ಅಧ್ಯಕ್ಷೆ ಸೌಮ್ಯ ಸತೀಶ್, ಉಪಾಧ್ಯಕ್ಷೆ ಸಂಗಮ್ಮ, ಸದಸ್ಯರಾದ ಕರೀಂ, ಶಂಕರಾಚಾರ್ಯ, ಸುನೀಲ್ ಕುಮಾರ್, ವೇಧಾ, ಪಾರ್ವತಮ್ಮ, ಶಶಿಕಲಾ, ಮುಖಂಡರಾದ ಎಚ್.ಆರ್.ಪುಟ್ಟಸ್ವಾಮಿ, ಸಿ.ವಿ.ಸುದೀಪ್, ಪ್ರವೀಣ್ ಕುಮಾರ್, ಸಮನ್ವಯಧಿಕಾರಿ ಶಿವನಂಜೇಗೌಡ, ಮುಖ್ಯಶಿಕ್ಷಕ ಪ್ರಭುಕುಮಾರ್, ರಾಮು, ಲೋಕೇಶ್, ಸುಜಾತ, ಶ್ವೇತಾ, ಸುನೀತಾ, ಪ್ರಮೀಳಾ ಮತ್ತಿತರರಿದ್ದರು.