ಅರೆಭಾಷೆ ಗೌಡ ಜನಾಂಗ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು: ಕೆ.ಜಿ.ಬೋಪಯ್ಯ ಕರೆ
ಮಡಿಕೇರಿ, ಜು.23 : ಪ್ರತಿಯೊಬ್ಬ ಅರೆಭಾಷೆ ಗೌಡ ಜನಾಂಗ ಬಾಂಧವರು ತಮ್ಮ ಜಾತಿ ಮೇಲೆ ಅಭಿಮಾನ ಹೊಂದಿ, ಇತರೆ ಜನಾಂಗದ ಪ್ರೀತಿ ವಿಶ್ವಾಸಗಳಿಸಿ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕೆಂದು ಮಾಜಿ ಸ್ಪೀಕರ್, ವಿರಾಜಪೇಟೆ ಕ್ಷೇತ್ರದ ಶಾಸಕರಾದ ಕೊಂಬಾರನ ಬೋಪಯ್ಯ ಹೇಳಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತು ಮೈಸೂರು ಕೊಡಗು ಗೌಡ ಸಮಾಜದ ಸಂಯುಕ್ತ ಆಶ್ರಯದಲ್ಲಿ ವಿಜಯನಗರದ ಕೊಡಗು ಗೌಡ ಸಮಾಜದಲ್ಲಿ ಭಾನುವಾರ ನಡೆದ ಅರೆಭಾಷೆ ಸಂಸ್ಕೃತಿ ಪರಿಪಾಲಕರ ಸಮಾಗಮ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಜನಾಂಗ ಬಾಂಧವರು ತನ್ನ ಆಚಾರ, ವಿಚಾರ, ಪದ್ಧತಿ, ಸಂಸ್ಕೃತಿ, ಆಚರಣೆಗಳಲ್ಲಿ ಕೀಳರಿಮೆ ತೋರದೆ ಶಿಸ್ತುಬದ್ಧವಾಗಿ ಮಾಡಿದಾಗ ಮಾತ್ರ ಮುಂದಿನ ಪೀಳಿಗೆಗೂ ಉಳಿದು ಬೆಳೆಯಲು ಸಾಧ್ಯವಾಗುತ್ತದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಮೈಸೂರು ಕೊಡಗು ಗೌಡ ಸಮಾಜ ಹಮ್ಮಿಕೊಂಡಿರುವ ಅರೆಭಾಷೆ ಸಂಸ್ಕೃತಿ ಪರಿಪಾಲಕರ ಸಮಾಗಮ ಕಾರ್ಯಕ್ರಮ ಶ್ಲಾಘನೀಯ ಎಂದರು.
ಈಗಾಗಲೇ ಅರೆಭಾಷೆ ಗೌಡ ಜನಾಂಗದವರು ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿದ್ದು, ಐಎಎಸ್ ಮತ್ತು ಐಪಿಎಸ್ ಹುದ್ದೆಯನ್ನು ಅಲಂಕರಿಸದಿರುವುದು ಬೇಸರದ ಸಂಗತಿಯಾಗಿದೆ. ಇನ್ನು ಮುಂದೆಯಾದರೂ ಇತ್ತ ಗಮನಹರಿಸಬೇಕಿದೆ. ಹೆತ್ತವರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ನೀಡುವ ಅಗತ್ಯವಿದ್ದು, ಶಿಕ್ಷಣದ ಮೂಲಕ ಅಭಿವೃದ್ಧಿ ಹೊಂದಿದ್ದೇ ಆದರೆ ಸಮಾಜದಲ್ಲಿ ಗೌರವ ಸಿಗುವುದರೊಂದಿಗೆ ಎಲ್ಲರೂ ಗುರುತಿಸಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ ಇತರೆ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಿಕೇರಿ ಗೌಡ ಸಮಾಜಗಳ ಒಕ್ಕೂಟ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಮಡಿಕೇರಿ ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಮೈಸೂರು ಕೊಡಗು ಗೌಡಸಮಾಜ ಅಧ್ಯಕ್ಷ ಚೆಟ್ಟಿಮಾಡ ಜನಾರ್ಧನ, ಕೊಡಗು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕುಂಜಿಲನ ಮುತ್ತಮ್ಮ ಮೊದಲಾದವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಉಮ್ಮರಬ್ಬ, ಕಾರ್ಯಕ್ರಮದ ಸಂಚಾಲಕ ಮಂದ್ರೀರ ಮೋಹನ್‌ದಾಸ್, ಸೇರಿದಂತೆ ಅಕಾಡೆಮಿಯ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮೊದಲು ಮುಖ್ಯ ಅತಿಥಿಗಳನ್ನು ಸಂಪ್ರದಾಯದಂತೆ ವೇದಿಕೆಗೆ ಬರಮಾಡಿಕೊಳ್ಳಲಾಯಿತು.