×
Ad

ಶೂದ್ರ-ದಲಿತರು ವೈದಿಕರ ಕೈಯಲ್ಲಿ ಖಡ್ಗವಾಗಿ ಬಳಕೆ: ಚೆನ್ನಮಲ್ಲ ಸ್ವಾಮೀಜಿ

Update: 2017-07-23 18:08 IST

 ಬೆಂಗಳೂರು, ಜು.23: ವೈಚಾರಿಕತೆ ಪರಂಪರೆಯ ಉತ್ತರಾಧಿಕಾರಿಗಳಾಗಬೇಕಾಗಿದ್ದ ಶೂದ್ರ ಮತ್ತು ದಲಿತರು, ವೈದಿಕರ ಕೈಯಲ್ಲಿ ಖಡ್ಗಗಳಾಗಿ ಬಳಕೆಯಾಗುತ್ತಿದ್ದಾರೆಂದು ನಿಡುಮಾಮಿಡಿ ಮಠದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದ ಜಿಕೆವಿಕೆ ಆವರಣದಲ್ಲಿ ಏರ್ಪಡಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮ್ಮೇಳನದ ‘ಅಂಬೇಡ್ಕರ್ ಅವರ ಸಾಮಾಜಿಕ-ಕರ್ನಾಟಕದ ಸಾಮಾಜಿಕ ಚಳವಳಿ’ಗೋಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾವಿರಾರು ವರ್ಷಗಳಿಂದ ಮನುವಾದದ ಶೋಷಣೆಗೆ ತುತ್ತಾಗಿರುವ ಶೂದ್ರ-ದಲಿತರು ಇಂದಿಗೂ ಬಿಡುಗಡೆಯಾಗಿಲ್ಲ. ವೈದಿಕರು ಬಿತ್ತ್ತುವ ಕೋಮು ದ್ವೆೇಷಕ್ಕೆ ಕಾಲಾಳುಗಳಾಗಿ ಕೆಲಸ ಮಾಡುವ ಮೂಲಕ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆಂದು ಹೇಳಿದರು.

 ದೇಶ ಹಾಗೂ ರಾಜ್ಯದಲ್ಲಿ ಬುದ್ಧ, ಶರಣರು, ತತ್ವಪದಕಾರರು, ದಾಸರು ಸೇರಿದಂತೆ ಅಂಬೇಡ್ಕರ್ ವಾದಿಯಾಗಿ ಅನೇಕರು ಜನತೆಯಲ್ಲಿ ವೈಚಾರಿಕೆಯನ್ನು ಮೂಡಿಸುವ ಮೂಲಕ ಮಾನವೀಯ ವೌಲ್ಯಗಳನ್ನು ತಲೆಮಾರುಗಳಿಂದ ತಲೆಮಾರುಗಳಿಗೆ ಸಾಗಿಸುತ್ತಾ ಬರುತ್ತಿದ್ದಾರೆ. ಇಷ್ಟಾಗಿಯೂ ವೈದಿಕಶಾಹಿಗಳು ತಮ್ಮ ಚಿಂತನೆಗಳು ಜನತೆಯ ಮನಸಿನಲ್ಲಿ ಗೋಚರ ಇಲ್ಲವೇ ಅಗೋಚರವಾಗಿ ತುಂಬಲು ಸಫಲರಾಗುತ್ತಿದ್ದಾರೆ. ಮನುವಾದಿಗಳ ಈ ಷಡ್ಯಂತ್ರಗಳಿಗೆ ಪರ್ಯಾಯವಾಗಿ ಸಶಕ್ತವಾಗಿ ಜನಪರ ಹೋರಾಟಗಳನ್ನು ನಿರೂಪಿಸಬೇಕಾಗಿದೆ ಎಂದರು.

ಎಲ್ಲ ಜಾತಿ, ಧರ್ಮಗಳ ಜನ ಸಾಮಾನ್ಯರು ಸರಿಯಾಗಿ ಬದುಕುತ್ತಿದ್ದಾರೆ. ಆದರೆ, ಅತಿರೇಕವಾದ ನಾಸ್ತಿಕ ಹಾಗೂ ಆಸ್ತಿಕವಾದ ಜನತೆಯನ್ನು ತಪ್ಪು ಹಾದಿಗೆ ತಳ್ಳುತ್ತದೆ. ಹೀಗಾಗಿ ಇವೆರಡೂ ಚಿಂತನೆಗಳು ಸಮ್ಮಿಲನಗೊಂಡಂತಹ ಮಾನವೀಯ ನೆಲೆಗಟ್ಟನ್ನು ಹೊಂದಿರುವ ವೈಚಾರಿಕತೆ ನಮಗೆ ಅಗತ್ಯವಿದೆ ಎಂದು ಅವರು ಹೇಳಿದರು.

ಸಾಹಿತಿ ಶೂದ್ರ ಶ್ರೀನಿವಾಸ್ ಮಾತನಾಡಿ, ದೇಶದಲ್ಲಿ ಬ್ರಾಹ್ಮಣ್ಯವಾದ ಹೆಪ್ಪುಗಟ್ಟಿದೆ. ಅದರ ಕುರಿತು ಮಾತನಾಡುತ್ತಾ ಕಾಲ ಕಳೆಯುವುದಕ್ಕಿಂತ ಜನಪರ ಕೆಲಸಗಳನ್ನು ಮಾಡುತ್ತಾ ವೈಚಾರಿಕತೆಯ ವಾತಾವರಣವನ್ನು ನಿರ್ಮಿಸುವತ್ತ ಗಮನಹರಿಸಬೇಕು. ಆಗ ಬ್ರಾಹ್ಮಣ್ಯವಾದ ತಾನಾಗಿಯೇ ನಿಷ್ಪ್ರಯೋಜನವಾಗುತ್ತದೆ ಎಂದು ತಿಳಿಸಿದರು.

 ಜನತೆ ತನ್ನ ಸೀಮಿತ ಚೌಕಟ್ಟನ್ನು ಮೀರಿ ವಿಸ್ತರಿಸಿಕೊಳ್ಳುತ್ತಾ ಸಾಗಬೇಕಾಗುತ್ತದೆ. ಪರಸ್ಪರ ಸ್ನೇಹ-ವಿಶ್ವಾಸಗಳನ್ನು ಜೀವಂತವಾಗಿಟ್ಟುಕೊಳ್ಳುವುದಕ್ಕೆ ಹೆಚ್ಚಿನ ಗಮನ ಕೊಡಬೇಕು. ಪ್ರತಿ ದಿನ ಒಬ್ಬ ಹೊಸ ವ್ಯಕ್ತಿಯನ್ನು ಪರಿಚಯಿಸಿಕೊಳ್ಳುವ ಮೂಲಕ ಜಾತಿ, ಧರ್ಮ ಹಾಗೂ ಭಾಷೆ, ಪ್ರದೇಶಗಳ ಚೌಕಟ್ಟುಗಳನ್ನು ಮೀರಬೇಕು ಎಂದು ಅವರು ಆಶಿಸಿದರು.

 ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮಾ ಗಾಂಧಿ ತಮ್ಮ ಜೀವನದುದ್ದಕ್ಕೂ ಕ್ರೀಯಾಶೀಲರಾಗಿದ್ದರು. ತಮ್ಮ ಚಿಂತನೆಗಳನ್ನು ಸ್ವವಿಮರ್ಶಿಸಿಕೊಳ್ಳುತ್ತಿದ್ದರೆ. ಇದಕ್ಕಾಗಿ ಅವರು ಸದಾ ಪುಸ್ತಕಗಳ ಮೊರೆ ಹೋಗುತ್ತಿದ್ದಾರೆ. ಜಗತ್ತಿನಲ್ಲಿರುವ ಶ್ರೇಷ್ಟ ಕೃತಿಗಳನ್ನು ಓದುವ ಮೂಲಕ ಜಗತ್ತಿನಾದ್ಯಂತ ವಿಸ್ತರಿಸಿಕೊಂಡರು. ಅದೇ ಮಾದರಿಯಲ್ಲಿ ನಾವೂ ಉತ್ತಮ ಕೃತಿಗಳನ್ನು ಓದುವ ಮೂಲಕ ಎಲ್ಲ ಮಿತಿಗಳನ್ನು ಮೀರಬೇಕಾಗಿದೆ ಎಂದು ಅವರು ಆಶಿಸಿದರು. ಗೋಷ್ಟಿಯಲ್ಲಿ ಚಿಂತಕ ಪ್ರೊ.ಬಿ.ಗಂಗಾಧರ ಮೂರ್ತಿ, ಹೋರಾಟಗಾರ ಅನಂತ್ ನಾಯಕ್, ರೈತ ಮಹಿಳೆ ಅನುಸೂಯಮ್ಮ, ಶಿಕ್ಷಕ ರಾಮಚಂದ್ರ ಮತ್ತಿತರರಿದ್ದರು.

‘ಜ್ಯೋತಿಷಿಗಳು ಜನಪ್ರತಿಗಳಿಗೆ ಬೆತ್ತಲೆಯಾಗಿ ನಡೆದುಕೊಂಡು ಹೋಗಿ ಅಂದ್ರೆ ಆ ಕ್ಷಣವೇ ಮಾಡಲು ತಯಾರಿರುತ್ತಾರೆ. ಅಷ್ಟರೆ ಮಟ್ಟೆಗೆ ನಮ್ಮ ಜನಪ್ರತಿನಿಧಿಗಳು ವೌಢ್ಯದ ಮೂಟೆಗಳಾಗಿದ್ದಾರೆ. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿದು ಜನತೆಗೆ ಮಾನವೀಯ ವೌಲ್ಯ ಹಾಗೂ ವೈಚಾರಿಕ ಪ್ರಜ್ಞೆಯನ್ನು ಮೂಡಿಸಲು ವೇದಿಕೆಯಾಗಬೇಕಾಗಿದ್ದ ವಿಧಾನ ಸೌಧ ಹಾಗೂ ವಿಕಾಸಸೌಧಗಳನ್ನು ವೌಢ್ಯದ ಕೂಪಗಳಾಗಿ ಪರಿವರ್ತಿಸಿದ್ದಾರೆ. ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದ ತಕ್ಷಣ ವಿಧಾನಸೌಧ ಹಾಗೂ ವಿಕಾಸಸೌಧಗಳಲ್ಲಿ ಮಾಟ ಮಂತ್ರ ಹಾಗೂ ಹೋಮ ಅವನಗಳನ್ನು ಮಾಡಿ, ವಾಸ್ತು ಹೆಸರಿನಲ್ಲಿ ವಿಧಾನಸೌಧವನ್ನು ವಿರೂಪಗೊಳಿಸುತ್ತಿದ್ದಾರೆ. ಹೀಗಾಗಿ ಮೊದಲು ನಮ್ಮ ಜನಪ್ರತಿನಿಧಿಗಳಲ್ಲಿರುವ ವೌಢ್ಯವನ್ನು ತೊಲಗಿಸಬೇಕಾಗಿದೆ.

-ವೀರಭದ್ರ ಚೆನ್ನಮಲ್ಲ ಸ್ವಾಮಿ ನಿಡುಮಾಮಿಡಿ ಮಠ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News