ಸೂಕ್ತ ಸಂದರ್ಭದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಕುಮಾರಸ್ವಾಮಿ
ಹುಬ್ಬಳ್ಳಿ, ಜು. 23: ಮುಂಬರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಸಿದ್ದವಿದ್ದು, ಸೂಕ್ತ ಸಂದರ್ಭದಲ್ಲಿ ಪಕ್ಷದ ವರಿಷ್ಟ ಎಚ್.ಡಿ. ದೇವೇಗೌಡ ಬಿಡುಗಡೆ ಮಾಡಲಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ರವಿವಾರ ನಗರದಲ್ಲಿ ಮಾತನಾಡಿದ ಅವರು, ರಾಜ್ಯದ 224 ಕ್ಷೇತ್ರಗಳಲ್ಲೂ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಕೊರತೆ ಇಲ್ಲ. ಕೆಲ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳಿದ್ದು, ಪಟ್ಟಿ ಬಿಡುಗಡೆ ಮಾಡಿದರೆ ರಾಷ್ಟ್ರೀಯ ಪಕ್ಷಗಳು ನಮ್ಮ ಅಭ್ಯರ್ಥಿಗಳನ್ನು ಹೈಜಾಕ್ ಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ಸದ್ಯಕ್ಕೆ ಪಟ್ಟಿ ಬಿಡುಗಡೆ ಮಾಡುವುದಿಲ್ಲ ಎಂದರು.
ಪಕ್ಷದ ಅಭ್ಯರ್ಥಿಗಳು ಎಲ್ಲೇ ಇದ್ದರೂ ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡಬೇಕು. ಒಳ್ಳೆಯ ಕೆಲಸಗಳಿಂದಲೇ ಜನರು ಕೈ ಹಿಡಿಯುತ್ತಾರೆ. ಜಾತಿ-ಹಣ ಬಲ ಚುನಾವಣೆಯಲ್ಲಿ ಕೆಲಸ ಮಾಡುವುದಿಲ್ಲ ಎಂದು ಕುಮಾರಸ್ವಾಮಿ, ಪಕ್ಷದ ಟಿಕೆಟ್ ಆಕಾಂಕ್ಷಿಗಳು ಹಾಗೂ ಕಾರ್ಯಕರ್ತರಿಗೆ ಸಲಹೆ ಮಾಡಿದರು.
ಸಿಎಂ ಜಾತಿ ರಾಜಕೀಯ: ಸಿಎಂ ಸಿದ್ದರಾಮಯ್ಯ ಕೆಲವು ಜಾತಿಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಜಾತಿ ರಾಜಕಾರಣದಲ್ಲಿ ತೊಡಗಿದ್ದಾರೆ. ವೀರಶೈವರ ಪ್ರತ್ಯೇಕ ಧರ್ಮದ ಬೇಡಿಕೆ ಸಲ್ಲ. ಜನರಲ್ಲಿ ಗೊಂದಲ ಮೂಡಿಸುವ ಉದ್ದೇಶದಿಂದ ಇಂತಹ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮಹದಾಯಿ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಯೋಜನೆ ಅನುಷ್ಟಾನಕ್ಕೆ ಎರಡು ವರ್ಷಗಳಿಂದ ಹೋರಾಟ ನಡೆಸುತ್ತಿರುವುದು ಅತ್ಯಂತ ನೋವಿನ ಸಂಗತಿ. ಉತ್ತರ ಕರ್ನಾಟಕ ಭಾಗದ ಜನರು ಕುಡಿಯುವ ನೀರಿಗಾಗಿ ಜನರು ಹೋರಾಟ ನಡೆಸುತ್ತಿದ್ದರೂ ಗೋವಾ ಸರಕಾರ ಉದ್ದಟತನ ಸರಿಯಲ್ಲ ಎಂದು ಆಕ್ಷೇಪಿಸಿದರು.