'ಪತ್ರಕರ್ತರ ಸಮಸ್ಯೆ ಪರಿಹಾರಕ್ಕೆ ಮುಖ್ಯಮಂತ್ರಿ ಜೊತೆ ಚರ್ಚೆ' : ಕೆ.ಎಸ್.ಈಶ್ವರಪ್ಪ

Update: 2017-07-23 13:31 GMT

ಶಿವಮೊಗ್ಗ, ಜು. 23: 'ಪತ್ರಿಕೋದ್ಯಮ ಅತ್ಯಂತ ಪವಿತ್ರವಾದ ಕ್ಷೇತ್ರವಾಗಿದೆ. ಯಾರೋ ಕೆಲವರು ಹಾದಿ ತಪ್ಪಿದ್ದಾರೆಂದು ಆರೋಪಿಸಿ, ಇಡೀ ಮಾಧ್ಯಮ ರಂಗವನ್ನೇ ದೂಷಣೆಗೊಳಪಡಿಸುವುದು ಸರಿಯಲ್ಲ. ಪತ್ರಕರ್ತರು ಕಾರ್ಯ ಅತ್ಯಂತ ಶ್ಲಾಘನೀಯವಾಗಿದ್ದು, ಸಮಾಜದ ಓರೆಕೊರೆ ತಿದ್ದುವಲ್ಲಿ ಪ್ರಮುಖ ಪಾತ್ರವಹಿಸಿಕೊಂಡು ಬರುತ್ತಿದ್ದಾರೆ' ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಭಾನುವಾರ ನಗರದ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಕರ್ತರ ವಾರ್ಷಿಕ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಪತ್ರಕರ್ತರ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಪತ್ರಕರ್ತರ ಸಂಘವು ಸರ್ಕಾರದ ಮುಂದೆ ಹಲವು ಬೇಡಿಕೆ ಈಡೇರಿಕೆಗೆ ಮನವಿ ಮಾಡಿದೆ. ಈ ಬೇಡಿಕೆಗಳ ಈಡೇರಿಸುವುದಕ್ಕೆ ಸಂಬಂಧಿಸಿದಂತೆ ತಾವು ಕೂಡ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸುತ್ತೆನೆ ಎಂದು ಭರವಸೆ ನೀಡಿದರು.

ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್ ಮಾತನಾಡಿ, ಪತ್ರಕರ್ತರ ಮೇಲೆ ಗುರುತರ ಜವಾಬ್ದಾರಿಯಿದ್ದು ಇದನ್ನು ಅರಿತು ಮುನ್ನಡೆಯಬೇಕು. ವ್ಯವಸ್ಥೆಯ ಸುಧಾರಣೆಯಲ್ಲಿ ಪತ್ರಕರ್ತರ ಪಾತ್ರ ಅತ್ಯಂತ ಗಮನಾರ್ಹವಾದುದಾಗಿದೆ. ವಿಶೇಷ ಸಾಧನೆ ಮಾಡಿದ ಪತ್ರಕರ್ತರನ್ನು ಗುರುತಿಸಿ ಸನ್ಮಾನಿಸುತ್ತಿರುವ ಜಿಲ್ಲಾ ಪತ್ರಕರ್ತರ ಸಂಘದ ಕ್ರಮ ಮಾದರಿಯಾದುದಾಗಿದೆ ಎಂದರು.

ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಮಾತನಾಡಿ, ಪತ್ರಕರ್ತರು ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಉತ್ತಮ ದಾರಿಗೆ ಕೊಂಡೊಯ್ಯುವ ಕೆಲಸ ಮಾಡುತ್ತಾರೆ. ಪತ್ರಕರ್ತರ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಬದ್ದವಾಗಿದೆ ಎಂದು ಹೇಳಿದ ಅವರು, ಪ್ರತಿಭಾನ್ವಿತ ವರದಿಗಾರರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.

ಇದಕ್ಕೂ ಮುನ್ನ ಸಮಾರಂಭ ಉದ್ಘಾಟಿಸಿ ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ ಮಾತನಾಡಿ, ಆರೋಗ್ಯವಂತ ಪ್ರಜಾಪ್ರಭುತ್ವ ಸಮಾಜ ನಿರ್ಮಾಣ ಮಾಡಲು ಪತ್ರಕರ್ತರು ಗಮನಹರಿಸಬೇಕು. ವೃತ್ತಿ ಪಾವಿತ್ರ್ಯತೆ ಕಾಯ್ದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ದೃಶ್ಯ ಮಾಧ್ಯಮದ ಮಂದಿ ಸಾಮಾನ್ಯ ತಿಳಿವಳಿಕೆಯಿಂದ ತಮ್ಮ ವೃತ್ತಿ ನಿಭಾಯಿಸಬೇಕು. ಸಮಾಜಕ್ಕೆ ವಿಶೇಷವಾದುದನ್ನು ಹೇಳುವ ಅವಸರದಲ್ಲಿ ವಾಸ್ತವ ಮರೆಯಬಾರದು. ಸಾಮಾಜಿಕ ಜ್ವಲಂತ ಸಮಸ್ಯೆ ಹೊರತರುವಂತಹ ಕೆಲಸ ಮಾಡಬೇಕು ಎಂದು ಹೇಳಿದ ಅವರು, `ಊರು ಉಪಕಾರ ಅರಿಯದು, ಹೆಣ ಸಿಂಗಾರ ಅರಿಯದು' ಎಂಬ ಗಾದೆ ಮಾತಿದೆ. ಇದನ್ನು ಸುಳ್ಳು ಮಾಡಬೇಕು.

ಸಮಾಜದಲ್ಲಿ ಒಳ್ಳೆಯ ಸಾಧನೆ ಮಾಡಿದವರನ್ನು ಪತ್ರಕರ್ತರ ಸಂಘ ಗುರುತಿಸುವಂತಹ ಸೌಜನ್ಯತೆ ಹಾಗೂಸಹೃದಯತೆ ಮೆರೆಯುತ್ತಿರುವುದು ಸ್ವಾಗತಾರ್ಹ ಎಂದು ಅಭಿಪ್ರಾಯಪಟ್ಟರು.

ಬಸವಕೇಂದ್ರದ ಬಸವಮರುಳಸಿದ್ದ ಸ್ವಾಮೀಜಿ ಮಾತನಾಡಿ, ಪತ್ರಕರ್ತರ ಮೇಲೆ ನಿಯಂತ್ರಣ ಹೇರುವ ಕ್ರಮ ಸರಿಯಲ್ಲ. ಮಾಧ್ಯಮಗಳಿಗೆ ಹೆಚ್ಚಿನ ಸ್ವಾತಂತ್ರ್ಯ ದೊರಕಬೇಕಿದೆ. ಆದರೆ, ಈ ಸ್ವಾತಂತ್ರ್ಯದ ಎಲ್ಲೆ ಮೀರಬಾರದು. ಸಮಾಜದಲ್ಲಿ ವ್ಯಕ್ತಿಗಳನ್ನು ಬೆಸೆಯುವ ಮಾಧ್ಯಮಗಳಿಗೆ ರಾಷ್ಟ್ರದಲ್ಲಿ ಸರ್ಕಾರದ 4 ನೇ ಅಂಗ ಎಂದು ಗೌರವಿಸಲಾಗಿದೆ ಎಂದರು. ಮಾಧ್ಯಮದ ಮಂದಿ ತಮ್ಮ ಇತಿ, ಮಿತಿಗಳನ್ನು ಮೀರದಂತೆ ಆತ್ಮವಿಮರ್ಶೆ ಮಾಡಿಕೊಂಡು ಸೃಜನಶೀಲ ಚಿಂತನೆಯಿಂದ ಹೊಸ ನಾಡು ನಿರ್ಮಿಸಬೇಕು ಎಂದರು.

ಸಮಾರಂಭದಲ್ಲಿ ಜೆಡಿಎಸ್ ಮುಖಂಡ ಎಂ.ಶ್ರೀಕಾಂತ್, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಮುಖ್ಯಮಂತ್ರಿ ಮಾಧ್ಯಮ ಸಮನ್ವಯಕಾರ ಕೆ.ವಿ.ಪ್ರಭಾಕರ್, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್.ರಾಜು, ಉಪಾಧ್ಯಕ್ಷ ಶಿವಾನಂದ ತಗಡೂರು, ಸಂಘದ ಜಿಲ್ಲಾಧ್ಯಕ್ಷ ಎನ್.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ವೈದ್ಯ, ಸಂಘದ ಉಪಾಧ್ಯಕ್ಷ ರವಿ ಬಿದನೂರು, ಕೆ.ವಿ. ಶಿವಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News