ಭಾರತವನ್ನು ವಿಶ್ವಗುರು ಸ್ಥಾನಕ್ಕೆ ತರಲು ಡಾ. ಎ.ಎಸ್. ಕಿರಣ್ ಕರೆ
ಹಾಸನ, ಜು.23: ಭಾರತವನ್ನು ವಿಶ್ವಗುರು ಸ್ಥಾನಕ್ಕೆ ತರುವಲ್ಲಿ ಯುವ ಪೀಳಿಗೆಯ ಶ್ರಮ ಮುಖ್ಯ ಬಹಳ ಮುಖ್ಯ ಎಂದು ಭಾರತೀಯ ಬಾಹ್ಯಕಾಶ ಸಂಸ್ಥೆ ಅಧ್ಯಕ್ಷ ಡಾ.ಎ.ಎಸ್. ಕಿರಣ್ ಕುಮಾರ್ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಜಿಲ್ಲಾ ಕನ್ನಡದ ಕಣ್ಮಣಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಭಾರತವನ್ನು ವಿಶ್ವಗುರು ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಯಶಸ್ವಿಯಾಗಲು ಯುವ ಪೀಳಿಗೆ ಮೂರುವರೆ ದಶಕಗಳ ಕಾಲ ಹೆಚ್ಚಿನ ಸಂಖ್ಯೆಯಲ್ಲಿ ಇದ್ದೆ ಇರುತ್ತದೆ. ಯುವಕರ ಕೌಶಲ್ಯವನ್ನು ಅಭಿವೃದ್ಧಿಗೊಳಿಸಿ, ಶಿಕ್ಷಣದ ಜೊತೆಗೆ ಒಂದು ಟೀಮ್ ಕೆಲಸವನ್ನು ಸಾಮೂಹಿಕವಾಗಿ ನಿರ್ವಹಿಸುವ ಮೂಲಕ ಸಾಧನೆ ಮಾಡಿ ಸಮಾಜ ಮತ್ತು ದೇಶವನ್ನು ಉತ್ತಮಗೊಳಿಸಬಹುದು ಎಂದರು. ಮನುಷ್ಯನು ಜೀವನವನ್ನು ಒಂದು ಚಾಲೆಂಜ್ ಆಗಿ ಕೊಂಡೂಯ್ದರೆ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ಮನುಷ್ಯ ಇಂದು ತನ್ನ ಅಂಗೈನಲ್ಲಿ ವಿಶ್ವದಲ್ಲಿ ನಡೆಯುವ ಸಂಗತಿಯನ್ನು ತಿಳಿದುಕೊಳ್ಳುವಷ್ಟು ತಂತ್ರಜ್ಞಾನ ಮುಂದುವರೆದಿದೆ. 1975 ರಲ್ಲಿ ಇಸ್ರೋ ಉಡಾವಣೆ ಮಾಡಿದ ಉಪಗ್ರಹದಿಂದ ವಿಶ್ವದಲ್ಲಿ ಮೊಟ್ಟದ ಮೊದಲ ಬಾರಿಗೆ ಮಾಹಿತಿ ತಂತ್ರಜ್ಞಾನ ಬಳಸಿಕೊಳ್ಳುವಂತಾಯಿತು. ತಂತ್ರಜ್ಞಾನದಲ್ಲಿ ಭಾರತ ಬಲಿಷ್ಠವಾಗಿ ಬೆಳೆಯುತ್ತಿದ್ದು, ಇಸ್ರೋ ಸಂಸ್ಥೆ ವಿಶ್ವದ ವಿವಿಧ 29 ರಾಷ್ಟ್ರಗಳ 209 ಉಪಗ್ರಹಗಳನ್ನು ನಿರ್ಮಿಸಿಕೊಟ್ಟ ಅವುಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. 2013ರಲ್ಲಿ ಮಂಗಳ ಗ್ರಹಕ್ಕೆ ಉಡಾವಣೆ ಮಾಡಿದ ಉಪಗ್ರಹ ಈಗಾಗಲೇ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಅಲ್ಲಿನ ಅನೇಕ ಮಾಹಿತಿಗಳನ್ನು ರವಾನೆ ಮಾಡುತ್ತಿದೆ. ಇದಾದ ಬಳಿಕ ಕಳೆದ ಫೆ.15 ರಂದು ಒಂದೇ ರಾಕೇಟ್‌ನಲ್ಲಿ 104 ಉಪಗ್ರಹಗಳನ್ನು ಉಡಾವಣೆ ಮಾಡಿ ವಿಶ್ವದ ಗಮನ ಸಳೆದಿದ್ದು, ಬಲಿಷ್ಠ ರಾಷ್ಟ್ರಗಳು ಭಾರತವನ್ನು ನೋಡುವ ದೃಷ್ಟಿಕೋನವೇ ಬದಲಾಗಿದೆ.
ಹವಮಾನದಲ್ಲಿ ಉಂಟಾಗುವ ವೈಪರಿತ್ಯವನ್ನು ನಾಲ್ಕು ದಿನಗಳ ಮುಂಚಿತವಾಗಿಯೇ ತಿಳಿದುಕೊಳ್ಳುವಷ್ಟರ ಮಟ್ಟಿಗೆ ತಂತ್ರಜ್ಞಾನ ನಮ್ಮಲ್ಲಿ ಇದೆ. ಮೀನುಗಾರರು ಮೀನುಗಳನ್ನು ಹಿಡಿಯಲು ಆಳ ಸಮುದ್ರಕ್ಕೆ ಹುಡಿಕಿಕೊಂಡು ಹೋಗಬೇಕಾದ ಸ್ಥಿತಿ ಇತ್ತು, ಆದರೇ ಇಸ್ರೋ ಸಂಸ್ಥೆ ಮೀನು ಹೆಚ್ಚು ಇರುವ ಸ್ಥಳವನ್ನು ತಿಳಿಸುವ ಕೆಲಸ ಮಾಡುತ್ತಿರುವುದರಿಂದ ಮೀನುಗಾರರಿಗೆ ಹೆಚ್ಚು ಅನುಕೂಲಕರವಾಗಿದ್ದು, ಇದರಿಂದ 29 ಸಾವಿರ ಕೋಟಿ ಇಂಧನ ವಾರ್ಷಿಕವಾಗಿ ಉಳಿತಾಯವಾಗುತ್ತಿದೆ ಎಂದು ಹೇಳಿದರು. ಬಾಹ್ಯಕಾಶದಲ್ಲಿ ಭಾರತ ಮುಂಚೂಣಿಯಲ್ಲಿದೆ. ಸುತ್ತಮುತ್ತ ಯಾವ ಸಮಸ್ಯೆ ಇದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ ಎಂದರು.
ಭಾರತ ದೇಶದಲ್ಲಿ ಜನ ಸಂಖೆ ಹೆಚ್ಚಾಗುತ್ತಿದ್ದು, ಭೂಮಿ ನಶಿಸುತ್ತದೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಭೂಮಿಯನ್ನು ನಾವು ಹೇಗೆ ಕಾಪಾಡಿಕೊಳ್ಳುತ್ತೇವೆಯೋ ಅದು ಅಷ್ಟು ದಿನ ಗಟ್ಟಿಯಾಗಿರಲಿದೆ. ವಿಜ್ಞಾನ ಕ್ಷೇತ್ರದಲ್ಲಿ ಪ್ರತಿ ದಿನ ಹೊಸ ಹೊಸ ಬೆಳೆವಣಿಗೆ ನಡೆಯುತ್ತಿದೆ. ಇದರಿಂದ ಯುವ ಪೀಳಿಗೆ ವಿಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಬೆಳೆವಣಿಗೆಯನ್ನು ಅರಿತು ಸಮಸ್ಯೆ ನಿವಾರಣೆಗೆ ಮುಂದಾಗಬೇಕು. ಮುಂದಿನ 4 ದಶಕಗಳ ಕಾಲ ಇಂದಿನ ಯುವ ಜನಾಂಗ ಜೀವಿಸುವುದರಿಂದ ವಿಜ್ಞಾನದ ಮೂಲಕ ಸಮಸ್ಯೆಯನ್ನು ನಿವಾರಿಸಿಕೊಂಡು, ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಮಾಡಬೇಕಿದೆ. ಯುವಕರು ಕ್ರೀಡೆ, ವಿಜ್ಞಾನ ಹಾಗೂ ಆಧ್ಯಾತ್ಮಗಳ ಮೂಲಕ ತಮ್ಮನ್ನು ತಾವು ಕ್ರೀಯಾಶೀಲರನ್ನಾಗಿಟ್ಟುಕೊಳ್ಳಬೇಕು. ವಿಶ್ವದ ಕೆಲವು ರಾಷ್ಟ್ರಗಳಲ್ಲಿ ಜೀವನ ಮಟ್ಟ ಈಗಾಗಲೇ ಸುಧಾರಣೆಯಾಗಿದೆ. ಆದರೆ ನಮ್ಮ ದೇಶದಲ್ಲಿ ಇನ್ನೂ ಜೀವನ ಮಟ್ಟ ಸುಧಾರಣೆಯಾಗಬೇಕಾದ ಸ್ಥಿತಿ ಇದ್ದು, ಇದರ ಕಡೆಗೆ ಪ್ರತಿಯೊಬ್ಬರು ಗಮನಹರಿಸಬೇಕಾಗಿದೆ. ಯಾವುದೇ ವ್ಯಕ್ತಿ ಸಾಧನೆ ಮಾಡಬೇಕಾದರೆ ತನ್ನ ಮಾತೃ ಭಾಷೆ ಅತ್ಯಗತ್ಯ. ಕನ್ನಡಿಗರೇ ಕನ್ನಡ ಭಾಷೆಯ ಬಗ್ಗೆ ಕಿಳರಿಮೆಯಿಂದ ಮಾತನಾಡುವ ಕಾಲ ಬಂದಿದೆ. ಹೊರ ರಾಷ್ಟ್ರದಿಂದ ಬಂದವರು ನಮ್ಮ ಭಾಷೆಯನ್ನು ಪ್ರೀತಿಸುತ್ತಿದ್ದಾರೆ. ನಾವುಗಳು ನಮ್ಮ ಭಾಷೆಯನ್ನು ಪ್ರೀತಿಸುವುದನ್ನು ಕಲಿಯಬೇಕು ಎಂದು ಹೇಳಿದರು. ಮಾತೃ ಭಾಷೆಯನ್ನು ಎಂದೂ ಮರೆಯಬಾರದು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಕಲೇಶಪುರ ಉಪವಿಭಾಗಾಧಿಕಾರಿ ಪಿ. ಶಿವರಾಜ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಮಾಜಿ ಅಧ್ಯಕ್ಷ ಬಿ.ಎನ್. ರಾಮಸ್ವಾಮಿ, ಮಾಜಿ ಅಧ್ಯಕ್ಷ ಬಿ.ಎನ್. ರಾಮಸ್ವಾಮಿ, ತಾಲೂಕು ಸಲಹಾ ಸಮಿತಿ ಅಧ್ಯಕ್ಷ ಜಿ.ಓ. ಮಹಾಂತಪ್ಪ ಹಾಗೂ ಕಸಾಪದ ಎಲ್ಲಾ ತಾಲೂಕು ಅಧ್ಯಕ್ಷರು ಉಪಸ್ಥಿತರಿದ್ದರು. ಜಾವಗಲ್ ಪ್ರಸನ್ನ ಅವರು ಸ್ವಾಗತಿಸಿದರು.