ನ್ಯಾಯಾಂಗ ತನಿಖೆಗೆ ಶೋಭಾ ಕರಂದ್ಲಾಜೆ ಒತ್ತಾಯ

Update: 2017-07-23 14:45 GMT

ಮಂಡ್ಯ, ಜು.23: ಟಿ.ನರಸೀಪುರದ ತಹಸೀಲ್ದಾರ್ ಬಿ.ಶಂಕರಯ್ಯ ಆತ್ಮಹತ್ಯೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ.

ರವಿವಾರ ನಗರದ ಶಂಕರಯ್ಯ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಶಂಕರಯ್ಯ ಸಾವಿನ ರಹಸ್ಯ ಬೇಧಿಸಲು ತನಿಖೆ ಅಗತ್ಯ ಎಂದರು. ಜವಾಬ್ಧಾರಿಯುತ ಸ್ಥಾನದಲ್ಲಿದ್ದ ಶಂಕರಯ್ಯ ದಿಢೀರ್ ಆತ್ಮಹತ್ಯೆಗೆ ಶರಣಾಗಿರುವುದು ಅನುಮಾನಕ್ಕೆಡೆ ಮಾಡಿದೆ. ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಸರಕಾರ ತನಿಖೆ ನಡೆಸಬೇಕು ಎಂದು ಅವರು ಹೇಳಿದರು. ಯಾವುದೇ ಕೌಟುಂಬಿಕ ಸಮಸ್ಯೆ ಇರಲಿಲ್ಲ. ಮಗಳ ಮದುವೆ ನಿಶ್ಚಯವಾಗಿತ್ತು. ಆತ್ಮಹತ್ಯೆ ಹಿಂದಿನ ರಾತ್ರಿ ಪತ್ನಿ ಪುಷ್ಟಾವತಿಗೆ ದೂರವಾಣಿ ಕರೆಮಾಡಿ ಮಾತನಾಡಿದ ಶಂಕರಯ್ಯ, ಬೆಳಗ್ಗೆ ಶವವಾಗಿರುವುದು ಅನುಮಾನಕ್ಕೆಡೆ ಮಾಡಿದೆ ಎಂದರು.

ಕೆಲಸದಲ್ಲಿ ತನಗೆ ಭಾರಿ ಒತ್ತಡವಿದೆ ಎಂಬುದಾಗಿ ಶಂಕರಯ್ಯ ಕುಟುಂಬದವರಲ್ಲಿ ಅನೇಕ ಬಾರಿ ಹೇಳಿಕೊಂಡಿದ್ದರೆನ್ನಲಾಗಿದ್ದು, ಎಂತಹ ಒತ್ತಡವಿತ್ತು ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ ಎಂದು ಶೋಭಾ ಹೇಳಿದರು. ಶಂಕರಯ್ಯ ಸಾವಿನ ಪ್ರಕರಣವನ್ನು ತನಿಖೆಗೊಳಪಡಿಸಿದರೆ, ಒಂದು ವೇಳೆ ಆತ್ಮಹತ್ಯೆ ಮಾಡಿಕೊಂಡಿರುವುದು ಸಾಬೀತಾದರೆ, ಆ ಆತ್ಮಹತ್ಯೆಗೆ ಕಾರಣವೇನೆಂಬುದು ತನಿಖೆಯಿಂದ ಹೊರಬೀಳುತ್ತದೆ ಎಂದು ಅವರು ಪ್ರತಿಪಾದಿಸಿದರು. ತಿ.ನರಸೀಪುರ ತಾಲೂಕಿನ ಮರಳು ಮತ್ತು ಭೂ ಮಾಫಿಯಾ ಸಾವಿಗೆ ಕಾರಣವಿರಬಹುದು. ಶಂಕರಯ್ಯ ಅವರ ಶವ ನೇಣುಬಿಗಿದ ಸ್ಥಿತಿಯಲ್ಲಿರುವುದೂ ಅನುಮಾನಕ್ಕೆಡೆ ಮಾಡಿದೆ ಎಂದು ಅವರು ಶಂಕೆ ವ್ಯಕ್ತಪಡಿಸಿದರು. ಡೆತ್‌ನೋಟ್‌ನಲ್ಲಿನ ಕೈಬರಹ ಶಂಕರಯ್ಯ ಅವರದ್ದಲ್ಲ ಎಂಬುದಾಗಿ ಕುಟುಂಬದವರು ಹೇಳುತ್ತಾರೆ. ಜತೆಗೆ, ಕುಟುಂಬದವರು ಆಗಮಿಸುವ ಮುನ್ನವೇ ಶಂಕರಯ್ಯ ಅವರ ಕಿಸೆಯನ್ನು ಪೊಲೀಸರು ಶೋಧಿಸಿದ್ದೇಕೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಮಾಜಿ ಸಚಿವ ಎಂ.ಶಿವಣ್ಣ, ಸಿದ್ದರಾಜುಗೌಡ, ಹೊಸಹಳ್ಳಿ ಶಿವು, ಟಿ.ಡಿ.ಬಸವರಾಜು, ಸಿ.ಟಿ.ಮಂಜುನಾಥ್, ಇತರ ಮುಖಂಡರು ಹಾಜರಿದ್ದರು.

ಸಿಬಿಐ ತನಿಖೆಗೆ ತಾಕೀತು: ಇದಕ್ಕೂ ಮುನ್ನ ಶಂಕರಯ್ಯ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ ಬಿಜೆಪಿ ಮುಖಂಡ, ಮಾಜಿ ಸಚಿವ ಬಿ.ಸೋಮಶೇಖರ್, ಶಂಕರಯ್ಯ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ತಾಕೀತು ಮಾಡಿದರು.
ಡಿ.ಕೆ.ರವಿ, ಕಲ್ಲಪ್ಪ ಹಂಡಿಬಾಗ್, ಎಂ.ಕೆ.ಗಣಪತಿಯಂತಹ ಪ್ರಾಮಾಣಿಕ ಅಧಿಕಾರಿಗಳು ಸಾವನ್ನಪ್ಪಿದ್ದು, ಕಾಂಗ್ರೆಸ್ ಸರಕಾರದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಅವರು ಟೀಕಿಸಿದರು.
ಸಿದ್ದರಾಜುಗೌಡ, ಹೊಸಹಳ್ಳಿ ಶಿವು, ಟಿ.ಡಿ.ಬಸವರಾಜು, ಇತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News