ಚಂದ್ರಶೇಖರ್ ಆಝಾದ್ ಜನ್ಮ ದಿನಾಚರಣೆ
ಚಿಕ್ಕಬಳ್ಳಾಪುರ, ಜು.23: ಪ್ರಸ್ತುತ ದಿನಗಳಲ್ಲಿ ದೇಶಪ್ರೇಮವನ್ನು ರಾಷ್ಟ್ರೀಯ ಹಬ್ಬಗಳಿಗೆ ಸೀಮಿತಗೊಳಿಸುವ ಜೊತೆಗೆ ಸ್ವಾತಂತ್ರ್ಯಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ದೇಶಪ್ರೇಮಿಗಳನ್ನೂ ಸಹ ಮರೆಯಲಾಗುತ್ತಿದೆ ಎಂದು ಕೆ.ವಿ. ಮತ್ತು ಪಚಗಿರಿ ದತ್ತಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ವಿ. ನವೀನ್ ಕಿರಣ್ ಬೇಸರ ವ್ಯಕ್ತಪಡಿಸಿದರು.
ನಗರದ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀ ಚಂದ್ರಶೇಖರ್ ಆಜಾದ್ ಯುವಕರ ಸಂಘದಿಂದ ಆಯೋಜಿಸಿದ್ದ ಚಂದ್ರಶೇಖರ್ ಆಜಾದ್‌ರ 111ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು, ಪ್ರಸ್ತುತದ ಯುವ ಪೀಳಿಗೆಯಲ್ಲಿ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡುವ ಪರಿಕಲ್ಪನೇ ಇಲ್ಲವಾಗಿದ್ದು, ದೇಶದ ಬಗ್ಗೆ ಯೋಚಿಸುವ ಬದಲು ಅಂತರ್ಜಾಲ, ಮೊಬೈಲ್‌ಗಳಿಗೆ ಅಂಟಿಕೊಳ್ಳುತ್ತಿರುವುದು ವಿಷಾದನೀಯ ಎಂದರು.
ಆಟವಾಡುವ ವಯಸ್ಸಿನಲ್ಲಿಯೇ ಅಪಾರವಾದ ದೇಶಪ್ರೇಮವನ್ನು ಬೆಳಸಿಕೊಳ್ಳುವ ಮೂಲಕ ಕೆಚ್ಚೆದೆಯಿಂದಲೇ ಬ್ರಿಟೀಷರ ವಿರುದ್ಧ ಹೋರಾಡಿದ ಆಜಾದ್‌ರವರು ತಮ್ಮ 25ನೇ ವಯಸ್ಸಿನಲ್ಲಿಯೇ ಹುತಾತ್ಮರಾದರೂ ಅಪಾರ ಕೀರ್ತಿಯೊಂದಿಗೆ ಎಂದಿಗೂ ಅಳಿಸಲಾಗದ ಇತಿಹಾಸವನ್ನು ಸೃಷ್ಟಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಲಕ್ಷಾಂತರ ಸ್ವಾತಂತ್ರ ಸೇನಾನಿಗಳ ತ್ಯಾಗ ಬಲಿದಾನಗಳಿಂದ ಒಲಿದ ಸ್ವಾತಂತ್ರ್ಯದ ಫಲವನ್ನು ಕೆಲವರಿಗೆ ಮಾತ್ರ ಸೀಮಿತಗೊಳಿಸಿರುವುದು ದುರಂತವಾಗಿದೆ. ಅಲ್ಲದೆ ಬಲಿದಾನದಿಂದ ಪಡೆದ ಸ್ವಾತಂತ್ರ್ಯವನ್ನು ಇಂದಿನ ಯುವ ಪೀಳಿಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದ ಅವರು, ಸ್ವಾತಂತ್ರ್ಯಕ್ಕಾಗಿ ಮಡಿದ ವೀರ ಯೋಧರ ವಿಚಾರಧಾರೆಗಳ ಕುರಿತು ಚರ್ಚಿಸುವ ಪರಿಪಾಠ ಬೆಳಸಿಕೊಳ್ಳುವ ಜೊತೆಗೆ ಅವರ ತತ್ವಾದರ್ಶಗಳನ್ನು ಪ್ರಸ್ತುತ ಯುವ ಪೀಳಿಗೆ ಮೈಗೂಡಿಸಿಕೊಳ್ಳುವುದು ಪ್ರಸ್ತುತದ ಸಮಾಜಕ್ಕೆ ಅತ್ಯಗತ್ಯವಾಗಿದೆ ಎಂದರು.
ಅಲ್ಲದೆ ಆಜಾದ್, ಭಗತ್‌ಸಿಂಗ್, ನೇತಾಜಿ ಸೇರಿದಂತೆ ಸ್ವಾತಂತ್ರ್ಯಕ್ಕಾಗಿ ಮಡಿದವರ ಆಲೋಚನೆಗಳು, ಆದರ್ಶ ಹಾಗೂ ದೇಶಾಭಿಮಾನ ಬೆಳಸಿಕೊಂಡಲ್ಲಿ ಮಾತ್ರ ಅವರ ಸ್ಮರಣೆಗಾಗಿ ಆಚರಿಸುವ ದಿನಾಚರಣೆಗಳು ಅರ್ಥಗರ್ಭಿತವಾಗಿ ನೆರವೇರುವುದು ಎಂದು ಅಭಿಪ್ರಾಯಪಟ್ಟರು.
ಶೇಖರ್ ಆಜಾದ್ ಯುವಕರ ಸಂಘದ ವರದರಾಜು ಮಾತನಾಡಿ, ದೇಶವನ್ನು ಬ್ರಿಟೀಷರಿಂದ ಬಂಧಮುಕ್ತಗೊಳಿಸಲು ಚಿಕ್ಕ ವಯಸ್ಸಿನಲ್ಲಿಯೇ ಹೋರಾಟ ಜವಾಬ್ದಾರಿಯನ್ನು ಹೊತ್ತ ಚಂದ್ರಶೇಖರ್ ಆಜಾದ್, ಬ್ರಿಟೀಷರ ಸಿಂಹಸ್ವಪ್ನವಾಗಿ ಕಾಡುತ್ತಿದ್ದ ಕ್ರಾಂತಿಕಾರಿ ಹೋರಾಟಗಾರರಾಗಿದ್ದರು ಎಂದ ಅವರು, ಆಜಾದ್ ಅವರ ದೇಶಪ್ರೇಮ, ಧೈರ್ಯ, ನಿಷ್ಠೆ ಸೇರಿದಂತೆ ಅವರ ಜೀವನದ ಕುರಿತು ತಿಳಿಸಿದರು.
ಚಂದ್ರಶೇಖರ್ ಆಜಾದ್‌ರ 111ನೇ ಜನ್ಮದಿನಾಚರಣೆಯ ಅಂಗವಾಗಿ ನಗರದ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಅನ್ನದಾನ ಮಾಡಲಾಯಿತು. ಈ ಸಂದರ್ಭದಲ್ಲಿ ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಮಹೇಶ್, ನಂದಿ ಗ್ರಾಪಂ ಉಪಾಧ್ಯಕ್ಷ ರಮೇಶ್, ನಗರಸಭಾ ಸದಸ್ಯ ಕಿಸಾನ್ ಕೃಷ್ಣಪ್ಪ, ಸತೀಶ್, ಇಂತಿಯಾಜ್, ಕರವೇ ಯುವ ಸೇನೆಯ ರಾಮೇಗೌಡ, ಪ್ರಕಾಶ್, ಗೋಪಿನಾಥ್, ವೆಂಕಟರಾಮಪ್ಪ, ಲಕ್ಷ್ಮಣ್ ಸೇರಿದಂತೆ ಮತ್ತಿತರರು ಇದ್ದರು.