ಕಾಶ್ಮೀರಿಗಳು ನಮ್ಮವರಾಗದೆ ಕಾಶ್ಮೀರ ನಮ್ಮದಾಗಿ ಉಳಿಯದು

Update: 2017-07-23 18:49 GMT

ಕಾಶ್ಮೀರದ ಗಾಯ ಉಲ್ಬಣಿಸುತ್ತಿದೆ. ಪಿಡಿಪಿಯೊಂದಿಗೆ ಬಿಜೆಪಿ ಕೈ ಜೋಡಿಸಿದಾಗ ಕಾಶ್ಮೀರದ ಸಮಸ್ಯೆ ಇತ್ಯರ್ಥಗೊಳ್ಳುವ ದಾರಿಯೊಂದು ತೆರೆದೇ ಬಿಟ್ಟಿತೇನೋ ಎಂದು ದೇಶ ಭಾವಿಸಿತ್ತು. ಕಾಶ್ಮೀರದ ಹಿತಾಸಕ್ತಿಗೆ ಬದ್ಧವಾಗಿರುವ ಪಿಡಿಪಿ ಮತ್ತು ಸಮಗ್ರ ಭಾರತದ ಭಾವನೆಗಳನ್ನು ಪ್ರತಿನಿಧಿಸುವ ಬಿಜೆಪಿ ಇವೆರಡು ಜೊತೆ ಜೊತೆಗೆ ಸಾಗಿದರೆ, ಒಂದಷ್ಟು ಸಮನ್ವಯ ನಿರ್ಧಾರಗಳನ್ನು ತಾಳಲು ಸಾಧ್ಯವಾಗಬಹುದು ಎಂದು ವಿಶ್ಲೇಷಕರು ಭಾವಿಸಿದ್ದರು.

ಪಿಡಿಪಿ-ಬಿಜೆಪಿ ಅಧಿಕಾರ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಪರಿಸ್ಥಿತಿ ಇಷ್ಟರಮಟ್ಟಿಗೆ ವಿಷಮಗೊಂಡಿರಲಿಲ್ಲ. ಕರ್ಫ್ಯೂ ವಿಧಿಸುವಂತಹ ವಾತಾವರಣ ಅಲ್ಲಿರಲಿಲ್ಲ. ಆದರೆ ಪಿಡಿಪಿ ಮತ್ತು ಬಿಜೆಪಿ ಮೈತ್ರಿಯಿಂದ ಭಾರತ-ಕಾಶ್ಮೀರದ ನಡುವಿನ ಹೊಲಿಗೆ ಇನ್ನಷ್ಟು ಹರಿಯಿತು. ದೇಶದ ಆಂತರಿಕ ಭದ್ರತೆಯ ಮೇಲೂ ಇದು ಬೀರಿದ ದುಷ್ಪರಿಣಾಮ ಸಣ್ಣದೇನಲ್ಲ. ಬಹುಶಃ ಕಾಶ್ಮೀರದ ಆಂತರಿಕ ಪ್ರಕ್ಷುಬ್ದತೆಯಿಂದ ಭಾರತದ ಯೋಧರು ಇಂತಹ ಸಂದಿಗ್ಧತೆಯನ್ನು ಯಾವತ್ತೂ ಎದುರಿಸಿಲ್ಲ. ಇದೀಗ ನ್ಯಾಶನಲ್ ಕಾನ್ಫರೆನ್ಸ್‌ನ ಹಿರಿಯ ನಾಯಕರೊಬ್ಬರು ಕಾಶ್ಮೀರ ವಿಷಯದಲ್ಲಿ ಮೂರನೆ ರಾಷ್ಟ್ರದ ಮಧ್ಯಸ್ಥಿಕೆ ಅಗತ್ಯವಿದೆ ಎಂದು ಹೇಳಿದ್ದಾರೆ.

ಅಮೆರಿಕ ಅಥವಾ ಇನ್ನಿತರ ದೇಶಗಳ ಮಧ್ಯಸ್ಥಿಕೆಯಿಂದ ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಬೇಕು ಎನ್ನುವ ಮಟ್ಟಕ್ಕೆ ತಲುಪಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಇದನ್ನು ಬಲವಾಗಿ ತಳ್ಳಿ ಹಾಕಿರುವ ಮೆಹಬೂಬ ಮುಫ್ತಿ, ‘‘ಅಮೆರಿಕವೇನಾದರೂ ಮಧ್ಯಪ್ರವೇಶಿಸಿದರೆ ಕಾಶ್ಮೀರ ಇನ್ನೊಂದು ಸಿರಿಯಾ ಆದೀತು’’ ಎಂದು ಎಚ್ಚರಿಸಿದ್ದಾರೆ. ಮೂರನೆ ದೇಶವನ್ನು ಮಧ್ಯಸ್ಥಿಕೆಗೆ ಕರೆಯುವುದು, ಭಾರತದ ಹಿತಾಸಕ್ತಿಯನ್ನು ಮೂರನೇ ದೇಶದ ಕೈಗೆ ಕೊಡುವುದು ಎರಡೂ ಒಂದೆ. ಇಂದು ಕಾಶ್ಮೀರ ಸಮಸ್ಯೆ ಬಿಗಡಾಯಿಸುವುದಕ್ಕೆ ಪಾಕಿಸ್ತಾನ-ಭಾರತ ಎರಡರ ಕೊಡುಗೆಯೂ ಇದೆ.

ಭಾರತದ ನಾಯಕರಿಗೆ ಕಾಶ್ಮೀರದ ಜನರು ಬೇಡ. ಬರೇ ಭೌಗೋಳಿಕ ಭೂಮಿಯಷ್ಟೇ ಬೇಕು. ಇತ್ತ ಪಾಕಿಸ್ತಾನಕ್ಕೆ ಕಾಶ್ಮೀರದ ಜನರ ಒಳಿತಿಗಿಂತ ಭಾರತವನ್ನು ಕೆಣಕುವುದು ಮುಖ್ಯವಾಗಿದೆ. ಕಾಶ್ಮೀರದ ಜನರ ಪಾಲಿಗೆ ಅತ್ತ ಧರಿ, ಇತ್ತ ಪುಲಿ. ಸ್ವತಃ ಇರುವ ದೇಶವನ್ನೇ ಪ್ರಜಾಸತ್ತಾತ್ಮಕವಾಗಿ ಮುನ್ನಡೆಸಲು ವಿಫಲವಾಗಿರುವ ಪಾಕಿಸ್ತಾನ ಕಾಶ್ಮೀರಿಗಳಿಗೆ ನ್ಯಾಯ ನೀಡುತ್ತದೆ ಎನ್ನುವುದು ಕಲ್ಪಿಸಲೂ ಅಸಾಧ್ಯ. ಇತ್ತ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಕಾಶ್ಮೀರದ ಕುರಿತಂತೆ ಸ್ವಂತವಾದ, ಸ್ಪಷ್ಟವಾದ ನಿಲುವೇ ಇಲ್ಲ. ಕಾಶ್ಮೀರದ ಸಮಸ್ಯೆಯನ್ನು ಆರೆಸ್ಸೆಸ್‌ನ ಮೂಗಿನ ನೇರಕ್ಕೆ ಇತ್ಯರ್ಥ ಪಡಿಸಲು ಅದು ಮುಂದಾಯಿತು.

ಪಿಡಿಪಿಯಾಗಲಿ, ಬಿಜೆಪಿಯಾಗಲಿ ಕಾಶ್ಮೀರಿಗಳ ವಿಷಯದಲ್ಲಿ ಪ್ರಾಮಾಣಿಕವಾಗಿಲ್ಲ. ಮಾತುಗಳು ಮತ್ತು ಆಚರಣೆ ಪರಸ್ಪರ ವಿರೋಧಾಭಾಸಗಳಿಂದ ಕೂಡಿರುವುದು ಕಾಶ್ಮೀರದ ಗಾಯ ಇನ್ನಷ್ಟು ಉಲ್ಬಣಿಸುವುದಕ್ಕೆ ಕಾರಣವಾಗಿದೆ. ಪಿಡಿಪಿ ಪ್ರತ್ಯೇಕತಾವಾದಿಗಳ ಜೊತೆಗೆ ಮೃದು ನಿಲುವು ಹೊಂದಿದೆ. ಅಫ್ಝಲ್‌ಗುರುವನ್ನು ಹುತಾತ್ಮನೆಂದು ಆ ಪಕ್ಷ ಭಾವಿಸುತ್ತದೆ. ಇದೇ ಸಂದರ್ಭದಲ್ಲಿ ಬಿಜೆಪಿ ಅದಕ್ಕೆ ವ್ಯತಿರಿಕ್ತವಾದ ನಿಲುವನ್ನು ಹೊಂದಿದೆ. ಅಫ್ಝಲ್‌ಗುರು ಅದರ ಪಾಲಿಗೆ ಉಗ್ರವಾದಿ. ಇವೆರಡೂ ಪಕ್ಷಗಳಿಗೆ ಅಧಿಕಾರ ಬೇಕಾಗಿತ್ತೇ ಹೊರತು, ಕಾಶ್ಮೀರದ ಕುರಿತ ಹಿತಾಸಕ್ತಿಯಲ್ಲ. ಮುಖ್ಯವಾಗಿ ಕಾಶ್ಮೀರದಂತಹ ಸೂಕ್ಷ್ಮ ಪ್ರದೇಶದಲ್ಲಿ ಆರೆಸ್ಸೆಸ್ ನೇರವಾಗಿ ಹಸ್ತಕ್ಷೇಪ ನಡೆಸಿದ್ದು ಕಾಶ್ಮೀರದ ಸದ್ಯದ ಸಮಸ್ಯೆಯ ಮುಖ್ಯ ಕಾರಣ. ಪಂಡಿತರ ಪುನರ್ವಸತಿಯ ಹೆಸರಿನಲ್ಲಿ ಅದು ನೀಡಿದ ಹೇಳಿಕೆಗಳು, ಪಂಡಿತರಿಗಾಗಿ ಪ್ರತ್ಯೇಕ ಗೆಟ್ಟೋಗಳನ್ನು ನಿರ್ಮಾಣ ಮಾಡುವ ನಿರ್ಧಾರ, ಸೇನೆಯ ಮೂಲಕವೇ ಪ್ರತಿಭಟನೆಯನ್ನು ಬಗ್ಗು ಬಡಿಯುವ ಆತುರ, ಇವುಗಳ ಜೊತೆಗೆ ಕಾಶ್ಮೀರಿಗಳ ಆಹಾರದ ಭಾಗವಾಗಿರುವ ಗೋಮಾಂಸದ ಕುರಿತಂತೆ ಸರಕಾರ ತಳೆದ ನಿಲುವು, ಇವೆಲ್ಲವೂ ಒಟ್ಟಿನಲ್ಲಿ ಕೇಂದ್ರ ಸರಕಾರದ ಕುರಿತಂತೆ ಅಳಿದುಳಿದ ಕಾಶ್ಮೀರಿಗಳ ಭರವಸೆಗಳನ್ನು ಗುಡಿಸಿ ಹಾಕಿತು.

ಇದೇ ಸಂದರ್ಭದಲ್ಲಿ ಸೇನೆ ಅತ್ಯಾತುರದಿಂದ ನಡೆಸಿದ ಎನ್‌ಕೌಂಟರ್‌ಗಳು, ನಿದ್ರಿಸಿದ ನಾಗರಿಕರನ್ನು ಗಾಯಗೊಳಿಸಿ ಎಬ್ಬಿಸಿದಂತಾಯಿತು. ಯಾವುದೇ ರಾಜಕೀಯ ಮುತ್ಸದ್ದಿತನದ ನಿಲುವುಗಳನ್ನು ಪ್ರದರ್ಶಿಸದೇ, ನೇರವಾಗಿ ಆರೆಸ್ಸೆಸ್ ಮಾರ್ಗದರ್ಶನಲ್ಲಿ ಕೇಂದ್ರ ಸರಕಾರ ಮುಂದೆ ಸಾಗಿದ ಪರಿಣಾಮವನ್ನು ಇಂದು ಕಾಶ್ಮೀರ ಮತ್ತು ಭಾರತ ಉಣ್ಣುತ್ತಿದೆ. ನೋಟು ನಿಷೇಧದಿಂದ ಕಾಶ್ಮೀರ ಸಮಸ್ಯೆ ಇತ್ಯರ್ಥವಾಗುತ್ತದೆ ಎಂದು ಭಾವಿಸಿರುವ ಸರಕಾರ, ಕಾಶ್ಮೀರ ಸಮಸ್ಯೆಯ ಕುರಿತಂತೆ ಅದೆಷ್ಟು ಅಜ್ಞಾನಿಯಾಗಿದೆ ಎನ್ನುವುದನ್ನು ಹೇಳುತ್ತದೆ.ಉಗ್ರ ವಾನಿಯ ಮೃತದೇಹದ ಮೆರವಣಿಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಕಾಶ್ಮೀರಿಗಳು ಭಾಗವಹಿಸಿರುವುದು ಕೇಂದ್ರ ಸರಕಾರಕ್ಕೆ ಬಹುದೊಡ್ಡ ಮುಖಭಂಗವಾಯಿತು.

ಇದಾದ ಬಳಿಕ ನಾಗರಿಕರ ವಿರುದ್ಧ ಭಾರತೀಯ ಸೇನೆ ಮತ್ತು ಕೇಂದ್ರ ಸರಕಾರ ಸೇಡಿನ ರಾಜಕಾರಣ ನಡೆಸಲು ಶುರು ಹಚ್ಚಿತು. ಪ್ರತಿಭಟನಾಕಾರರೆಲ್ಲ ಪ್ರತ್ಯೇಕವಾದಿಗಳು, ಉಗ್ರವಾದಿಗಳು ಎಂಬಂತೆ ಸೇನೆ ಉಪಚರಿಸ ತೊಡಗಿತು. ಪೆಲೆಟ್ ಗನ್‌ಗಳನ್ನು ಬಳಸಿ ನಾಗರಿಕರನ್ನು ದಮನಿಸಲು ಹೊರಟದ್ದಂತೂ ಬರ್ಬರ ಕೃತ್ಯವೆಂದು ವಿಶ್ವವೇ ಬಣ್ಣಿಸಿತು. ಅಮಾಯಕ ಮಕ್ಕಳು, ಮಹಿಳೆಯರು ತಮ್ಮ ಕಣ್ಣುಗಳನ್ನು ಕಳೆದುಕೊಂಡರು. ಶಾಶ್ವತವಾಗಿ ವಿರೂಪಗೊಂಡರು. ಅಮಾಯಕ ಕಾಶ್ಮೀರಿಗಳ ಮೇಲೆ ಪದೇ ಪದೇ ನಡೆದ ದಬ್ಬಾಳಿಕೆಯ ವೀಡಿಯೊಗಳು ಬೆಂಕಿಯಂತೆ ಕಾಶ್ಮೀರದಾದ್ಯಂತ ಹರಡಿ, ಪರಿಸ್ಥಿತಿಯನ್ನು ಇನ್ನಷ್ಟು ಕೆಡಿಸಿ ಹಾಕಿತು. ಇದೇ ಸಂದರ್ಭದಲ್ಲಿ ಕಾಶ್ಮೀರಿಯೊಬ್ಬನನ್ನು ಸೇನೆ ತನ್ನ ಜೀಪಿಗೆ ಗುರಾಣಿಯಾಗಿ ಕಟ್ಟಿ, ಕಲ್ಲು ತೂರಾಟವನ್ನು ತಡೆಯಲು ಯತ್ನಿಸಿದ್ದು ಸೇನೆಯ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಯಿತು. ಇದನ್ನು ಸಮರ್ಥಿಸಿಕೊಳ್ಳುವ ಮೂಲಕ ಕಾಶ್ಮೀರದ ಘನತೆಗೇ ಧಕ್ಕೆ ಉಂಟುಮಾಡಿತು.

ಕಾಶ್ಮೀರ ಯಾರದ್ದು? ಹೇಗೆ ಕರ್ನಾಟಕ ಕನ್ನಡಿಗರದ್ದೋ, ಗುಜರಾತ್ ಗುಜರಾಥಿಗಳದ್ದೋ ಹಾಗೆಯೇ ಕಾಶ್ಮೀರ ಕಾಶ್ಮೀರಿಗಳದ್ದು. ತನ್ನದೆಂದು ಭಾರತ-ಪಾಕಿಸ್ತಾನ ಎರಡೂ ಅದೆಷ್ಟು ಬೊಬ್ಬಿಟ್ಟರೂ, ಬಡಿದಾಡಿದರೂ, ಅಂತಿಮವಾಗಿ ಸೇನಾ ಬಲದಿಂದ ಒಂದು ಭೂಭಾಗವನ್ನು ವಶಪಡಿಸಿಕೊಳ್ಳಬಹುದೇ ಹೊರತು, ಅಲ್ಲಿನ ಕಾಶ್ಮೀರಿಯತ್‌ನ್ನು ಅಲ್ಲ. ಆದುದರಿಂದ ಕಾಶ್ಮೀರ ಯಾರದ್ದು ಎನ್ನುವುದನ್ನು ತೀರ್ಮಾನಿಸುವ ಹಕ್ಕು ಕಾಶ್ಮೀರಿಗಳಿಗೇ ಬಿಡಬೇಕು. ಅದಕ್ಕೆ ಬೇಕಾದ ವಾತಾವರಣವನ್ನು ಅಲ್ಲಿ ನಿರ್ಮಾಣ ಮಾಡಬೇಕು. ಬಿಜೆಪಿ ಮತ್ತು ಪಿಡಿಪಿ ತಮ್ಮ ತಮ್ಮ ಹಿಡನ್ ಅಜೆಂಡಾಗಳನ್ನು ಬದಿಗಿಟ್ಟು ಕಾಶ್ಮೀರಿಗಳ ಬದುಕಿಗಾಗಿ ಮಿಡಿಯಬೇಕು. ಅಟಲ್ ಬಿಹಾರಿ ವಾಜಪೇಯಿ ಅವರು ಇದನ್ನು ಸಾಧಿಸುವ ಹಂತದಲ್ಲಿದ್ದರು.

ಯುಪಿಎ ಸರಕಾರದ ಆಡಳಿತದಲ್ಲೂ ಕಾಶ್ಮೀರದ ಪರಿಸ್ಥಿತಿ ತೀರಾ ಹದೆಗೆಟ್ಟಿರಲಿಲ್ಲ. ಹೀಗಿರುವಾಗ, ನೂತನ ಸರಕಾರದ ಅವಧಿಯಲ್ಲಿ ಯಾಕೆ ಪರಿಸ್ಥಿತಿ ಈ ಪ್ರಮಾಣದಲ್ಲಿ ಬಿಗಡಾಯಿಸಿತು ಎನ್ನುವುದನ್ನು ಕೇಂದ್ರ ಸರಕಾರ ಮತ್ತು ಕಾಶ್ಮೀರದ ಮೈತ್ರಿ ಸರಕಾರ ಆತ್ಮವಿಮರ್ಶೆ ಮಾಡಿಕೊಳ್ಳುವ ಅಗತ್ಯವಿದೆ. ಮುಖ್ಯವಾಗಿ ಆರೆಸ್ಸೆಸ್ ಅನಗತ್ಯವಾಗಿ ಕಾಶ್ಮೀರದಲ್ಲಿ ಮೂಗು ತೂರಿಸಿದರೆ ಅದರ ಪರಿಣಾಮ ಇನ್ನಷ್ಟು ಭೀಕರವಾಗಬಹುದು. ಈಗಾಗಲೇ ಕಾಶ್ಮೀರವನ್ನು ಮುಂದಿಟ್ಟು ಪಾಕಿಸ್ತಾನ ಭಾರತದ ಅಪಾರ ಸಂಖ್ಯೆಯ ಯೋಧರನ್ನು ಕೊಂದು ಹಾಕಿದೆ. ಕಾಶ್ಮೀರವನ್ನು ಕಾಯುತ್ತಿರುವ ಯೋಧರು ಒಂದು ರೀತಿಯಲ್ಲಿ ಗೊಂದಲ ಮತ್ತು ಅಸಹಾಯಕತೆಯ ನಡುವೆ ಸಿಲುಕಿ ಹಾಕಿಕೊಂಡಿದ್ದಾರೆ. ಒಂದೆಡೆ ಪಾಕಿಸ್ತಾನ, ಇನ್ನೊಂದೆೆಡೆ ಕಾಶ್ಮೀರದ ಉಗ್ರರು, ಮಗದೊಂದೆಡೆ ಕಲ್ಲುತೂರುವ ನಾಗರಿಕರು. ನಮ್ಮ ಯೋಧರನ್ನು ಇಂತಹದೊಂದು ಸಂಕಷ್ಟಕ್ಕೆ ಸಿಲುಕಿಸಿರುವುದು ಕಾಶ್ಮೀರದ ಕುರಿತಂತೆ ಕೇಂದ್ರ ಸರಕಾರದ ಗೊಂದಲಕಾರಿ ನಿಲುವೇ ಆಗಿದೆ.

ಮೂರನೆ ರಾಷ್ಟ್ರವೊಂದರ ಮಧ್ಯಸ್ಥಿಕೆಯಲ್ಲಿ ಕಾಶ್ಮೀರ ಸಮಸ್ಯೆ ಇತ್ಯರ್ಥವಾಗುವ ಅಗತ್ಯ ಖಂಡಿತ ಇಲ್ಲ. ಬದಲಿಗೆ ಕಾಶ್ಮೀರದ ಇತ್ಯರ್ಥ ಕಾಶ್ಮೀರಿಗಳಿಂದಲೇ ನಡೆಯಲಿ ಮತ್ತು ಅದಕ್ಕೆ ಪೂರಕವಾತಾವರಣವನ್ನು ಭಾರತ ಒದಗಿಸಿಕೊಡಲಿ. ಕಾಶ್ಮೀರವೆಂದರೆ ಬರೇ ಭೌಗೋಳಿಕ ಗಡಿರೇಖೆಗಳಷ್ಟೇ ಅಲ್ಲ, ಕಾಶ್ಮೀರದ ಜನರೂ ಕೂಡ ಎನ್ನುವುದನ್ನು ಅರ್ಥ ಮಾಡಿಕೊಂಡು ಅವರನ್ನು ಸಮೀಪಿಸುವ ಪ್ರಯತ್ನವನ್ನು ಭಾರತ ಮಾಡಬೇಕು. ಕಾಶ್ಮೀರವನ್ನು ಎಂದೆಂದಿಗೂ ಭಾರತದಲ್ಲೇ ಉಳಿಯುವಂತೆ ಮಾಡುವ ಎಲ್ಲ ಹಾದಿಗಳನ್ನು ಮುಕ್ತ ಮನಸ್ಸಿನಿಂದ ತೆರೆದುಕೊಟ್ಟರಷ್ಟೇ ಕಾಶ್ಮೀರದಲ್ಲಿ ಶಾಂತಿ ಸಾಧ್ಯ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News