ಲೋಕಸಭಾ ಸದಸ್ಯ ಸ್ಥಾನ ರದ್ದುಗೊಳಿಸಲು ಒತ್ತಾಯಿಸಿ ಎಸ್‌ಡಿಪಿಐ ಪ್ರತಿಭಟನೆ
ಮಡಿಕೇರಿ, ಜು.24: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸಂಘರ್ಷಗಳು ಹೆಚ್ಚಾಗಲು ಕೆಲವು ಬಿಜೆಪಿ ಸಂಸದರು ನೀಡುತ್ತಿರುವ ಪ್ರಚೋದನೆಯೇ ಕಾರಣವೆಂದು ಆರೋಪಿಸಿರುವ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಘಟನೆ ಬಿ.ಎಸ್.ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಅವರ ಲೋಕಸಭಾ ಸದಸ್ಯ ಸ್ಥಾನವನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದೆ.
ನಗರದ ಇಂದಿರಾಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಎಸ್‌ಡಿಪಿಐ ಪ್ರಮುಖರು ಹಾಗೂ ಕಾರ್ಯಕರ್ತರು ಬಿಜೆಪಿ ಮತ್ತು ಸಂಘ ಪರಿವಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಬಿ.ಸಿ.ರೋಡ್‌ನಲ್ಲಿ ನಡೆದ ಶರತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿರುವಾಗಲೇ ಎಸ್‌ಡಿಪಿಐ ಮತ್ತು ಪಿಎಫ್‌ಐ ವಿರುದ್ಧ ಆರೋಪ ಹೊರಿಸುವ ಮೂಲಕ ಬಿಜೆಪಿ ಹಾಗೂ ಸಂಘ ಪರಿವಾರ ತನಿಖೆಯ ಹಾದಿ ತಪ್ಪಿಸುವ ಯತ್ನ ಮಾಡುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಸೂತಕದ ಮನೆಯಲ್ಲೂ ರಾಜಕೀಯ ಲಾಭಕ್ಕಾಗಿ ಹವಣಿಸುವ ಮಂದಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ದಕ್ಷಿಣ ಕನ್ನಡದಲ್ಲಿ ಕೋಮು ಗಲಭೆ ನಿಯಂತ್ರಣಕ್ಕೆ ಬರಲು ಸಾಧ್ಯವಿಲ್ಲವೆಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷರಾದ ಅಮಿನ್ ಮೊಹಿಸಿನ್ ಅಭಿಪ್ರಾಯಪಟ್ಟರು.
ವೈಯುಕ್ತಿಕ ಕಾರಣಗಳು ಅಥವಾ ಕೌಟುಂಬಿಕ ಕಲಹದಿಂದ ಕೊಲೆಯಾದರೂ ಅದಕ್ಕೆ ಕೋಮು ಬಣ್ಣ ಬಳಿದು ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳನ್ನು ಗುರಿ ಮಾಡುವ ಷಡ್ಯಂತ್ರ ನಡೆಯುತ್ತಿದೆ. ಸಂಸದರಾದ ಶೋಭಾ ಕರಂದ್ಲಾಜೆ ರಾಷ್ಟ್ರೀಯ ತನಿಖಾ ದಳದ ಮೂಲಕ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಕೇಂದ್ರ ಗೃಹ ಸಚಿವರಿಗೆ ಬರೆದಿರುವ ಪತ್ರದಲ್ಲಿ ಈ ರೀತಿ ನಡೆದ ಕೊಲೆ ಪ್ರಕರಣಗಳನ್ನು ಕೂಡ ಸೇರಿಸಿದ್ದಾರೆ. ಆದರೆ ಸಂಘ ಪರಿವಾರದಿಂದ ನಡೆದ ಹತ್ಯಾ ಪ್ರಕರಣಗಳನ್ನು ಮನವಿಯಲ್ಲಿ ಪ್ರಸ್ತಾಪಿಸಿಲ್ಲ. ಇದು ಸಂಸದರ ದ್ವಿಮುಖ ಧೋರಣೆಯಾಗಿದೆ ಎಂದು ಅಮಿನ್ ಮೊಹಿಸಿನ್ ಆರೋಪಿಸಿದರು.
ಆರ್‌ಎಸ್‌ಎಸ್ ಮುಖಂಡ ಪ್ರಭಾಕರ ಭಟ್ ಅವರನ್ನು ಬಂಧಿಸಿದರೆ ರಾಜ್ಯವೇ ಹೊತ್ತಿ ಉರಿಯುತ್ತದೆ ಎಂದು ಬೇಜವಾಬ್ದಾರಿತನದ ಹೇಳಿಕೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಪ್ರಚೋದನೆಯ ಮೂಲಕ ಅಶಾಂತಿಯನ್ನು ಸೃಷ್ಟಿಸುತ್ತಿದ್ದಾರೆ. ದಕ್ಷಿಣ ಕನ್ನಡದಲ್ಲಿ ನಡೆದ ಕೋಮು ಗಲಭೆಗೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಸಂಘ ಪರಿವಾರದ ಮಂದಿಯ ವಿರುದ್ಧ ದೂರು ದಾಖಲಾಗಿದೆ. ಆದರೆ ಯಾರನ್ನೂ ಬಂಧಿಸಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ ಅಮಿನ್ ಮೊಹಿಸಿನ್, ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲದ ಬಿಜೆಪಿ ಸಂಸದರು ಸೌಹಾರ್ದಯುತ ಸಮಾಜವನ್ನು ಸೃಷ್ಟಿಸಲಾಗದೆ, ಕೇವಲ ಕೋಮು ಪ್ರಚೋದನೆ ನೀಡಿ ಶಾಂತಿಯನ್ನು ಕದಡುತ್ತಿದ್ದಾರೆ ಎಂದು ಆರೋಪಿಸಿದರು. ಅಶಾಂತಿಗೆ ಕಾರಣಕರ್ತರಾಗುತ್ತಿರುವ ಸಂಸದರ ಲೋಕಸಭಾ ಸದಸ್ಯ ಸ್ಥಾನವನ್ನು ರದ್ದುಗೊಳಿಸಬೇಕೆಂದು ಅವರು ಒತ್ತಾಯಿಸಿದರು.
ಎಸ್‌ಡಿಪಿಐ ಉಪಾಧ್ಯಕ್ಷರಾದ ಲಿಯಾಕತ್ ಆಲಿ, ನಗರಾಧ್ಯಕ್ಷರಾದ ಕೆ.ಜಿ.ಪೀಟರ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಡ್ಕರ್, ನಗರಸಭಾ ಸದಸ್ಯರಾದ ಮನ್ಸೂರ್, ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.