ಜನಸಂಖ್ಯೆ ಹೆಚ್ಚಳದಿಂದ ರಾಷ್ಟ್ರ ನಿರ್ಮಾಣ ಸಾದ್ಯವಿಲ್ಲ: ನಿಂಗಯ್ಯ
ಮೂಡಿಗೆರೆ, ಜು.24: ಭಾರತದಲ್ಲಿ ದಿನನಿತ್ಯ ಜನಸಂಖ್ಯೆ ಹೆಚ್ಚಾಗುತ್ತಿರುವುದು ಯಾವ ಪುರುಷಾರ್ಥಕ್ಕಾಗಿ? ಜನಸಂಖ್ಯಾ ಹೆಚ್ಚಳದಿಂದ ರಾಷ್ಟ್ರ ನಿರ್ಮಾಣ ಸಾಧ್ಯವಿಲ್ಲ ಎಂದು ಶಾಸಕ ಬಿ.ಬಿ.ನಿಂಗಯ್ಯ ತಿಳಿಸಿದರು.
ಅವರು ಸೋಮವಾರ ಪಟ್ಟಣದ ತಾಪಂ ಸಭಾಂಗಣದಲ್ಲಿ ಅತೀವೃಷ್ಟಿ ಹಾಗೂ ವಿವಿಧ ಇಲಾಖೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ನಂತರ ಮಾತನಾಡಿದರು. ನಮ್ಮ ದೇಶದಲ್ಲಿ ಯಜಮಾನ ಒಬ್ಬ ದುಡಿದರೆ ಉಳಿದವರೆಲ್ಲಾ ಕೂತು ಸೋಮಾರಿಗಳಂತೆ ತಿನ್ನುತ್ತಾರೆ. ಬಿಕ್ಷುಕರು ಹೆಚ್ಚಾಗಿದ್ದಾರೆ. ದುಡಿಯುವವರ ಸಂಖ್ಯೆ ಕಡಿಮೆಯಾಗಿದೆ. ರಾಷ್ಟ್ರ ನಿರ್ಮಾಣಕ್ಕೆ ಜನಸಂಖ್ಯೆ ಬಳಕೆಯಾಗದಿದ್ದ ಮೇಲೆ ಜನಸಂಖ್ಯೆ ಹೆಚ್ಚಳಕ್ಕೆ ಮೊದಲು ಬ್ರೇಕ್ ಹಾಕಬೇಕಿದೆ. ಇಲ್ಲವಾದರೆ ದೇಶ ಮುಂದುವರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ತಾಲೂಕಿನಲ್ಲಿ 51 ಶಾಲೆಗಳು ಮುಚ್ಚಿದ್ದು, ಈ ವರ್ಷದಲ್ಲಿ ಗೌಡಹಳ್ಳಿಯಲ್ಲಿ ಒಂದು ಶಾಲೆಯನ್ನು ಮುಚ್ಚಲಾಗಿರುವುದು ದುರಂತ. ತಾಲೂಕಿನಲ್ಲಿ ಬಹುತೇಕ ಶಾಲೆಗೆ ಸೇರದ ಮಕ್ಕಳಿದ್ದಾರೆ. ಮಕ್ಕಳನ್ನು ಶಾಲೆಗೆ ಸೆರಿಸುವಂತೆ ಶಿಕ್ಷಣ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳುವುದರ ಜೊತೆಗೆ ಶಾಲೆ ಮುಚ್ಚುತ್ತಿರುವ ಬಗ್ಗೆ ಪೂರ್ಣ ಮಾಹಿತಿ ನೀಡಬೇಕು. ತಾಲೂಕಿನಲ್ಲಿ ಎಲ್ಲಾ ತೋಟಗಳ ಮಾಲೀಕರು ಕರೆಗಳನ್ನು ನಿರ್ಮಿಸಿದ್ದಾರೆ. ಅಲ್ಲಿ ಮೀನು ಕೃಷಿ ಮಾಡಿ ಲಾಭ ಪಡೆಯುವ ಬಗ್ಗೆ ರೈತರಲ್ಲಿ ಉತ್ಸಾಹ ತುಂಬಿಸುವ ಕೆಲಸ ಮೀನುಗಾರಿಕೆ ಇಲಾಖೆಯಿಂದ ಆಗಬೇಕು ಎಂದರು.
ಮಳೆಯಿಂದಾಗಿ ಪಿಡಬ್ಲೂಡಿ ಇಲಾಖೆಗೆ ಸಂಬಂಧಿಸಿದ ರಾಜ್ಯ ಹೆದ್ದಾರಿ ಮತ್ತು ಮೋರಿಗಳು ಹಾನಿ ಹಾಗೂ ಮೆಸ್ಕಾಂ ಇಲಾಖೆಗೆ ಸಂಬಂಧಿಸಿದ ಸುಮಾರು 40ಕ್ಕೂ ಅಧಿಕ ವಿದ್ಯುತ್ ಟ್ರಾನ್ಸ್‌ಫರ್ಮರ್ ಬಸ್ಮಗೊಂಡಿವೆ. ಕಾಡಾನೆ ಹಾವಳಿಯಿಂದ ತತ್ತರಿಸಿರುವ ಜನರಿಗೆ ಮುಕ್ತಿ ಕಾಣಬೇಕೆಂದರೆ ಎಲಿಫೆಂಟ್ ಕಾರ್ಡರ್ ಮಾಡಬೇಕಾಗಿದೆ. ಇಂತಹ ಅನೇಕ ತಾಲೂಕಿನ ಸಮಸ್ಯೆಗಳನ್ನು ಪರಿಹರಿಸಲು ಜು.25ರಂದು ಚಿಕ್ಕಮಗಳೂರಿನಲ್ಲಿ ನಡೆಯುವ ಜಿಲ್ಲಾ ಉಸ್ತುವಾರಿ ಸಚಿವರ ಕೆಡಿಪಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ತಹಸೀಲ್ದಾರ್ ನಂದಕುಮಾರ್, ತಾ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗುರುದತ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.