ಅಂಗವಿಕಲರು ಮುಖ್ಯವಾಹಿನಿಗೆ ಬನ್ನಿ: ಡಾ.ಹರೀಶ್‌ಕುಮಾರ್
ಚಾಮರಾಜನಗರ, ಜು.24:- ಅಂಗವಿಕಲರು ಸರ್ಕಾರಿ ಸೌಲಭ್ಯಗಳನ್ನು ಪಡೆದು ಕೊಂಡು ಮುಖ್ಯವಾಹಿನಿಗೆ ಬರಬೇಕೆಂದು ಪ್ರಭಾರ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ತಿಳಿಸಿದರು.
ಜಿಲ್ಲಾಡಳಿತ ಭವನದ ಜಿ.ಪಂ ಕೆಡಿಪಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲೆಯ ವಿಕಲಚೇತನರ ಕುಂದುಕೊರತೆ ಆಲಿಸುವ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಎಲ್ಲಾ ಜಿಲ್ಲಾ ಮಟ್ಟದ ಇಲಾಖೆಗಳು, ಬ್ಯಾಂಕ್‌ಗಳು, ನಗರಸಭೆ, ಪುರಸಭೆ ಹಾಗೂ ಗ್ರಾಮ ಪಂಚಾಯತ್‌ಗಳಲ್ಲಿ ಅಂಗವಿಕಲರಿಗೆ ಮೀಸಲಿಟ್ಟಿರುವ ಶೇ.3ರಷ್ಟು ಮೀಸಲಾತಿಯನ್ನು ಕಡ್ಡಾಯವಾಗಿ ಬಳಕೆ ಮಾಡಬೇಕೆಂದು ಸೂಚನೆ ನೀಡಿದರು. ಕೆಲವು ಬ್ಯಾಂಕ್‌ಗಳಲ್ಲಿ ಅಂಗವಿಕಲರಿಗೆ ಸಾಲ ನೀಡುತ್ತಿಲ್ಲ ಎಂದು ದೂರುಗಳು ಕೇಳಿಬಂದ ಹಿನ್ನಲೆಯಲ್ಲಿ ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು. ಹುಟ್ಟು ಅಂಗವಿಕಲರಿಗೆ ಸಿಗುವ ಸೌಲಭ್ಯಗಳನ್ನು ಜಿಲ್ಲೆಯಲ್ಲಿರುವ ನಕಲಿ ಅಂಗವಿಕಲರು ಪಡೆದು ಕೊಳ್ಳುತ್ತಿರುವುದರಿಂದ ನಿಜವಾದ ಅಂಗವಿಕಲರಿಗೆ ವಂಚನೆಯಾಗುತ್ತಿದೆ ಎಂದು ವಿಕಲಚೇತನರು ಆರೋಪಿಸಿದರು.
ಅಂಗವಿಕಲರೊಬ್ಬರು ಮಾತನಾಡಿ, ಕೆಲವರು ಇಲಾಖೆಯ ವತಿಯಿಂದ ನೀಡಿರುವ ಮೂರು ಚಕ್ರದ ವಾಹನವನ್ನು ಎರಡು ಚಕ್ರವನ್ನಾಗಿ ಪರಿವರ್ತಿಸಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು. ಇದಕ್ಕೆ ಸ್ಪಂಧಿಸಿದ ಜಿಲ್ಲಾಧಿಕಾರಿಗಳು ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿಗೆ ಜಿಲ್ಲೆಯಲ್ಲಿ ಇದುವರೆಗೆ ಇಲಾಖೆಯ ವಾಹನವನ್ನು ಪಡೆದುಕೊಂಡು ದುರುಪಯೋಗ ಮಾಡಿಕೊಂಡಿರುವವರನ್ನು ಸಾಕ್ಷಿ ಸಮೇತ ಪತ್ತೆಹಚ್ಚಿ ವಾಹನವನ್ನು ವಶಪಡಿಸಿಕೊಂಡು ಪೂರ್ಣ ಮಟ್ಟದ ಅಂಗವಿಕಲರಿಗೆ ನೀಡಿ ಎಂದು ಸೂಚಿಸಿದರು.
ಮತ್ತೆ ಎ.ಟಿ.ಎಂಗಳಲ್ಲಿ ಅಂಗವಿಕಲರು ಹಣ ಡ್ರಾ ಮಾಡಲು ಸೂಕ್ತ ವ್ಯವಸ್ಥೆ ಇಲ್ಲ ಎಂದರು. ಸರ್ಕಾರಿ ಹಾಗೂ ಖಾಸಗಿ ಬಸ್‌ಗಳಲ್ಲಿ ಅಂಗವಿಕಲರಿಗೆ ನಿಗಧಿಯಾದ ಸ್ಥಳವನ್ನು ಬೇರೆ ಪ್ರಯಾಣಿಕರು ಬಳಸಿಕೊಳ್ಳುತ್ತಿದ್ದಾರೆ, ಇದರಿಂದ ಅಂಗವಿಕಲರಿಗೆ ತೊಂದರೆಯಾಗುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಸಭೆಯಲ್ಲಿ ಜಿ.ಪಂ ಉಪ ಕಾರ್ಯದರ್ಶಿ ಮುನಿರಾಜಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಭಾರ ಉಪ ನಿರ್ದೇಶಕ ತಿರುಮಲ್ಲೇಶ್, ಜಿಲ್ಲಾ ಅಂಗವಿಕಲರ ಸಬಲೀಕರಣ ಇಲಾಕೆಯ ಅಧಿಕಾರಿ ಡಿ.ಎನ್.ಮೂಲಿಮನಿ, ಯೋಜನೆ ಸಹಾಯಕ ಪೃಥ್ವಿದಾಸ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಅಂಗವಿಕಲರ ಸಂಘಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಜಿಲ್ಲೆಯ ಎಲ್ಲಾ ಅಂಗವಿಕಲರು ಭಾಗವಹಿಸಿದ್ದರು.