×
Ad

ದೃಶ್ಯ ಮಾಧ್ಯಮದ ನಡುವೆಯೂ ಮುದ್ರಣ ಮಾಧ್ಯಮದ ಮೌಲ್ಯ ಗಟ್ಟಿಯಾಗಿದೆ: ಕೃ.ಪ.ಗಣೇಶ್

Update: 2017-07-24 19:48 IST

ಗುಂಡ್ಲುಪೇಟೆ, ಜು.24: ದೃಶ್ಯ ಮಾಧ್ಯಮದ ಹಾವಳಿಯಲ್ಲೂ ಪತ್ರಿಕೆಗಳಿಗೆ ತನ್ನದೇ ಆದ ಮೌಲ್ಯ ಹೆಚ್ಚಾಗುತ್ತಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಕೃ.ಪ. ಗಣೇಶ್ ಅಭಿಪ್ರಾಯಪಟ್ಟರು.

ಪಟ್ಟಣದ ಜೆ.ಎಸ್.ಎಸ್.ಕಾಲೇಜಿನ ಸಭಾಂಗಣದಲ್ಲಿ ದಿವಂಗತ ಪತ್ರಕರ್ತ ಎನ್.ನಾಗರಾಜು ಅವರ ವೇದಿಕೆಯಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಮುಖ್ಯ ಭಾಷಣ ಮಾಡಿ ಮಾತನಾಡುತ್ತ, ಇಂದಿನ ದಿನಗಳಲ್ಲಿ ದೃಶ್ಯ ಮಾಧ್ಯಮದ ಲೈವ್ ಸುದ್ದಿಗಳೊಂದಿಗೆ ಪೈಪೋಟಿ ನೀಡುತ್ತಿರುವ ಪತ್ರಿಕೆಗಳಿಗೆ ಒತ್ತಡದ ಜೊತೆಗೆ ಸ್ವಾರಸ್ಯಕರ ಸುದ್ದಿಗಳನ್ನು ನೀಡುವ ಮಹತ್ತರವಾದ ಹೊಣೆಗಾರಿಕೆಯನ್ನು ಪತ್ರಿಕೆಗಳು ಮಾಡುತ್ತಿದೆ. ಇದರಿಂದಲೇ ಪತ್ರಿಕೆಗಳ ಪ್ರಸಾರ ಸಂಖ್ಯೆ ದಿನೇ ದಿನೇ ಹೆಚ್ಚಲು ಕಾರಣವಾಗಿದೆ ಎಂದರು.

ಕನ್ನಡಿಗರು ಹೆಚ್ಚು ಹೆಚ್ಚು ಓದುಗರಾಗುವ ಮುಖಾಂತರ ಪತ್ರಿಕೆಗಳ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿ ಮಕ್ಕಳಿಗೆ ಪತ್ರಿಕೆಗಳ ಸುದ್ದಿಗಳನ್ನು ಓದಿಸುವುದರಿಂದ ಅರಿವನ್ನು ಮೂಡಿಸಲು ಸಾಧ್ಯವಾಗುತ್ತದೆ. ಪತ್ರಕರ್ತರು ಒತ್ತಡದ ಬದುಕಿನ ನಡುವೆಯೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗಿದೆ. ಪತ್ರಿಕೆಯಂಬುದು ಬಯಲು ವಿಶ್ವ ವಿದ್ಯಾನಿಲಯವಿದ್ದಂತೆ, ಸುದ್ದಿಗಾರ ವೀರ ಯೋಧನಂತೆ ಹೋರಾಟ ನಡೆಸಿದ ಪತ್ರಕರ್ತರು ನಮ್ಮಲ್ಲಿ ಇದ್ದಾರೆ. ಅದಕ್ಕೆ ತಾಜಾ ಉದಾಹರಣೆಯಾಗಿ ಮುಂಬೈನ ತಾಜ್ ಹೋಟೆಲ್ ಪ್ರಕರಣದಲ್ಲಿ ಪ್ರಾಣದ ಹಂಗನ್ನು ತೊರೆದು ಕಸಬ್ ಎಂಬ ಉಗ್ರನ ಛಾಯಾಚಿತ್ರವನ್ನು ತೆಗೆದು ಶಿಕ್ಷೆಗೆ ಗುರಿಯಾಗುವಂತೆ ಮಾಡಿದ ಪತ್ರಕರ್ತರ ಸಾಧನೆ ಅಮೂಲ್ಯವಾದುದು ಎಂದರು.

ಇತ್ತೀಚಿಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮೌಲ್ಯ ಕುಸಿಯುತ್ತಿದ್ದು, ಪ್ರತಿಕಾ ರಂಗಕ್ಕೂ ಅದು ಅಂಟಿಕೊಳ್ಳುವ ಭಯವಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ವಿಶ್ವಾಸಾರ್ಹ ಸುದ್ದಿಗಳನ್ನು ನೀಡುವುದರೊಂದಿಗೆ ಪತ್ರಿಕೆಗಳು ಸಮಾಜದ ಕಳಕಳಿಯನ್ನು ಸಾರಿ ಹೇಳುವ ಮೂಲಕ ತಮ್ಮದೇ ಆದ ಪರಂಪರೆಯನ್ನು ಉಳಿಸಿಕೊಂಡು ಮುನ್ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಹಸೀಲ್ದಾರ್ ಕೆ.ಸಿದ್ದು ಮಾತನಾಡಿ, ಪತ್ರಕರ್ತರು ದಿಟ್ಟ ವರದಿಗಾರಿಕೆಯ ಜೊತೆಗೆ ಅನೇಕ ಅಡೆತಡೆಗಳನ್ನು ಮೆಟ್ಟಿ ನಿಂತು ಸುದ್ದಿ ನೀಡುವುದರ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿರುವುದು ಶ್ಲಾಘನೀಯ ಎಂದರು. ಸರ್ಕಾರದ ಸವಲತ್ತುಗಳು ಜನಸಾಮಾನ್ಯರಿಗೆ ಸರಿಯಾಗಿ ತಲುಪಲು ಸರ್ಕಾರಿ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸವನ್ನು ಮಾಡುತ್ತಿದಾರೆ. ಅಲ್ಲದೆ ಸಮಾಜದ ಅಂಕುಂಡೊಂಕುಗಳನ್ನು ಸರಿಪಡಿಸುವ ಮಹತ್ತರವಾದ ಜವಾಬ್ದಾರಿ ವರದಿಗಾರರಿಗಿದೆ ಎಂದರು.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾ.ಬಾಬು, ಎಚ್.ಎಸ್,ಮಹದೇವಪ್ರಸಾದ್‌ರವರ ಪುತ್ರ ಗಣೇಶ್‌ಪ್ರಸಾದ್, ಜಿ.ಪಂ.ಸದಸ್ಯ ಕೆ.ಎಸ್.ಮಹೇಶ್, ತಾ.ಪಂ.ಅಧ್ಯಕ್ಷ ಎಚ್.ಎನ್.ನಟೇಶ್, ಪುರಸಭಾ ಅಧ್ಯಕ್ಷೆ ಭಾಗ್ಯಮ್ಮ, ಎ.ಪಿ.ಎಂ.ಸಿ.ಅಧ್ಯಕ್ಷ ಶಿವಪ್ಪ, ಪಿಕಾರ್ಡೊ ಅಧ್ಯಕ್ಷ ಮಲ್ಲಿಕಾರ್ಜುನಪ್ಪ, ಚಾಮುಲ್ ನಿರ್ದೇಶಕ ಕಣ್ಣೇಗಾಲ ಸ್ವಾಮಿ, ಪುರಸಭಾ ಸದಸ್ಯರಾದ ಜಿ.ಕೆ.ನಾಗೇಂದ್ರ, ಶಶಿಧರ್, ಮಾಜಿ ಅಧ್ಯಕ್ಷ ಪುಟ್ಟತಾಯಮ್ಮ, ಪ್ರಾಂಶುಪಾಲ ಡಾ. ಎನ್.ಮಹದೇವಸ್ವಾಮಿ ಉಪನ್ಯಾಸಕ ಹೊನ್ನೇಗೌಡ , ಪತ್ರಕರ್ತರಾದ ನಾ. ಅಶ್ವಥ್‌ಕುಮಾರ್, ಸೋಮಶೇಖರ್, ಮಹದೇವಸ್ವಾಮಿ, ರಾಜೇಶ್‌ಭಟ್ , ಮಹದೇವಪ್ರಸಾದ್, ಚಿಕ್ಕತುಪ್ಪೂರು ಮಲ್ಲು , ದೇವಯ್ಯ ವಿಶ್ವನಾಥ್, ರಾಜಗೋಪಾಲ್, ಮಲ್ಲೇಶ್, ವಿರೇಂದ್ರಪ್ರಸಾದ್, ಅಂಕಳ್ಳಿ ವೀರಭದ್ರಪ್ಪ , ಹೆಗ್ಗಡಳ್ಳಿ ಸಿದ್ದು, ಭೈರೇಶ್, ದೀಪಾಶ್ರೀನಿವಾಸ್, ಸುಬ್ಬುರಾವ್, ಸ್ಟುಡಿಯೋ ಚಂದ್ರು, ಹಂಗಳ ಮಂಜು ಮತ್ತು ಕಾಲೇಜು ವಿದ್ಯಾರ್ಥಿಗಳು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News