ಆದಿವಾಸಿ ವಿದ್ಯಾರ್ಥಿಗಳಿಗೆ ಕಿರುಕುಳ: ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಆರೋಪ
ಮಡಿಕೇರಿ, ಜು.24: ವಿರಾಜಪೇಟೆ ಪಟ್ಟಣದ ಚಿಕ್ಕಪೇಟೆ ಛತ್ರಕೆರೆ ಬಳಿ ಇರುವ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ವಿದ್ಯಾರ್ಥಿ ನಿಲಯದಲ್ಲಿ ಮೂವರು ಆದಿವಾಸಿ ವಿದ್ಯಾರ್ಥಿನಿಯರನ್ನು ಗುರಿಯಾಗಿಸಿಕೊಂಡು ಶಿಕ್ಷಕರೊಬ್ಬರು ಹಾಗೂ ಅಡುಗೆಯ ಸಿಬ್ಬಂದಿಯೊಬ್ಬರು ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ ಎಂದು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಸಂಚಾಲಕರಾದ ವೈ.ಕೆ.ಗಣೇಶ್ ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿದ್ಯಾರ್ಥಿ ನಿಲಯಕ್ಕೆ ಸಮಾಜ ಕಲ್ಯಾಣ ಇಲಾಖೆ, ಗಿರಿಜನ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹಾಗೂ ಜಿ.ಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರು ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಒಂಭತ್ತನೇ ತರಗತಿಯ ಒಬ್ಬಳು ಹಾಗೂ ಏಳನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಪ್ರತಿದಿನ ಬಟ್ಟೆ ಒಗೆಯುವುದು ಮತ್ತು ಚರಂಡಿ ಶುಚಿಗೊಳಿಸುವ ಕೆಲಸ ನೀಡಲಾಗುತ್ತಿದೆ. ಮಾಡದೇ ಇದ್ದಾಗ ಅವಾಚ್ಯ ಶಬ್ದಗಳಿಂದ ನಿಂಧಿಸಿ ಮಾನಸಿಕವಾಗಿ ನೋವನ್ನುಂಟು ಮಾಡಲಾಗುತ್ತಿದೆ. ಅಲ್ಲದೆ ಹಣ ಕಳ್ಳತನ ಮಾಡಿದ ಆರೋಪವನ್ನು ಕೂಡ ಹೊರಿಸಲಾಗುತ್ತಿದೆ.
ಇದರಿಂದ ಮನನೊಂದ ಈ ಮೂವರು ವಿದ್ಯಾರ್ಥಿನಿಯರುಮನೆಗೆ ಮರಳಿದ್ದು, ಹಾಸ್ಟೇಲ್‌ಗೆ ಹೋಗುವುದಿಲ್ಲವೆಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಎಂದು ವೈ.ಕೆ.ಗಣೇಶ್ ಆರೋಪಿಸಿದ್ದಾರೆ. ಪೋಷಕರು ಕೇಳಲು ಹೋದಾಗ ನಾವು ಮಕ್ಕಳಿಗೆ ಯಾವುದೇ ರೀತಿಯ ತೊಂದರೆ ನೀಡಿಲ್ಲ, ಮಕ್ಕಳು ಸುಳ್ಳು ಹೇಳುತ್ತಿದ್ದಾರೆ ಎಂದು ಶಿಕ್ಷಕಿ ಹಾಗೂ ಅಡುಗೆ ಸಿಬ್ಬಂದಿ ಸಮಜಾಯಿಷಿಕೆ ನೀಡಿದ್ದಾರೆ. ಅಲ್ಲದೆ ಈ ಮೂವರು ವಿದ್ಯಾರ್ಥಿಗಳಿಗೆ ಹಾಸ್ಟೆಲ್ನಲ್ಲಿ ಹಾಜರಾತಿ ಸಿಗದಂತೆ ಮಾಡಿದ್ದಾರೆ ಎಂದು ಗಣೇಶ್ ಟೀಕಿಸಿದ್ದಾರೆ.
ಬಾವಿಯಲ್ಲಿ ನೀರು ಬತ್ತಿ ಹೋಗಿದೆ ಎನ್ನುವ ಕಾರಣ ನೀಡಿ ಸ್ನಾನಕ್ಕೆ ವಾರಕ್ಕೆ ಒಂದು ದಿನ ಮಾತ್ರ ನೀರು ನೀಡಲಾಗುತ್ತಿದೆ. ಮಳೆಗಾಲದಲ್ಲಿ ಸೋಲಾರ್ ಇಲ್ಲದೆ ಬಿಸಿ ನೀರು ಇಲ್ಲ ಎಂದು ಹೇಳುತ್ತಾರೆ. ಹಾಸ್ಟೇಲ್‌ನ ಅವ್ಯವಸ್ಥೆಗಳ ಬಗ್ಗೆ ಪೊನ್ನಂಪೇಟೆ ಸಮಾಜ ಕಲ್ಯಾಣ ಇಲಾಖೆಗೆ ಈಗಾಗಲೇ ದೂರು ನೀಡಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗಣೇಶ್ ಆರೋಪಿಸಿದ್ದಾರೆ.
ಐಟಿಡಿಪಿ ಇಲಾಖೆಯ ಅಧಿಕಾರಿ ಪ್ರಕಾಶ್ ಅವರು ಎಲ್ಲಾ ರೀತಿಯ ಮೂಲಭೂತ ಸೌಲಭ್ಯ ಇದೆ, ಕೊರತೆ ಇಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಥಳ ಪರಿಶೀಲನೆ ನಡೆಸಿದರೆ ಹಾಸ್ಟೆಲ್ ಕರ್ಮಕಾಂಡ ಬಯಲಾಗುತ್ತದೆ ಎಂದು ಗಣೇಶ್ ತಿಳಿಸಿದ್ದಾರೆ.
ಆದಿವಾಸಿ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಗುರುತಿಸಿಕೊಳ್ಳುವುದೇ ಕಷ್ಟ. ಹೀಗಿರುವಾಗ ಬಂದ ವಿದ್ಯಾರ್ಥಿಗಳಿಗೂ ಅಗತ್ಯ ಸೌಲಭ್ಯ ನೀಡದೆ ವಂಚಿಸುತ್ತಿರುವುದು ಸರಿಯಾದ ಕ್ರಮವಲ್ಲವೆಂದು ಗಣೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.