ಚಿನ್ನದ ಸರ ಕಸಿದು ಪರಾರಿ
Update: 2017-07-24 20:14 IST
ಚಿಕ್ಕಮಗಳೂರು, ಜು.24: ಆಗಂತುಕನೋರ್ವ ನಗರದ ಚರ್ಚ್ ಬಳಿ ಮೊಬೈಲ್‌ನಲ್ಲಿ ಮಾತಾಡುತ್ತಿದ್ದಂತೆ ನಟಿಸಿ ಮಹಿಳೆಯೋರ್ವರ ಕತ್ತಿನಿಂದ ಚಿನ್ನದ ಸರವನ್ನು ಕಸಿದು ಪರಾರಿಯಾಗಿರುವ ಘಟನೆ ನಡೆದಿದೆ.
ಹೌಸಿಂಗ್ ಬೋರ್ಡ್ ನಿವಾಸಿ ಶ್ರೀಮತಿ ಸ್ಟೆಲ್ಲಾ ರೋಡ್ರಿಗಸ್ ಎಂಬವರ ಕತ್ತಿನಿಂದ ಸರ ಎಗರಿಸಿ ಆಗಂತುಕ ಪರಾರಿಯಾಗಿದ್ದಾನೆ. ಮಾರುತಿ ಓಮ್ನಿಯಲ್ಲಿ ಬಂದಿದ್ದ ಆಗಂತುಕನು ಚರ್ಚ್ ಬಳಿ ನಿಂತು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಂತೆ ನಟಿಸಿದ್ದ. ಈ ವೇಳೆ ದಾರಿಯಲ್ಲಿ ನಡೆಯುತ್ತಿದ್ದ ಮಹಿಳೆಯ ಕೊರಳಿಗೆ ಕೈಹಾಕಿ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾನೆ.
ಕಸಿದ ಎರಡು ಸರಗಳಲ್ಲಿ ಸುಮಾರು 17 ಗ್ರಾಂ ನಷ್ಟು ಚಿನ್ನವಿದ್ದು, 45900 ರೂ.ಗಳ ಚಿನ್ನದ ಆಭರಣದ ಕಳ್ಳತನ ನಡೆದಿದೆ ಎಂದು ಶ್ರೀಮತಿ ಸ್ಟೆಲ್ಲಾ ರೋಡ್ರಿಗಸ್ ನಗರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.