ಕಾಗೋಡು ತಿಮ್ಮಪ್ಪರನ್ನು ಟೀಕಿಸುವ ಅರ್ಹತೆ ಕುಮಾರ್‍ಗಿಲ್ಲ : ಹುಲ್ತಿಕೊಪ್ಪ ಶ್ರೀಧರ್
ಶಿವಮೊಗ್ಗ, ಜು. 25: ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ವಿರುದ್ದ ಮಾತನಾಡುವ ಯಾವುದೇ ಯೋಗ್ಯತೆ, ಆರ್ಹತೆ ಬಿಜೆಪಿ ಮುಖಂಡ ಕುಮಾರ್ ಬಂಗಾರಪ್ಪಗೆ ಇಲ್ಲವಾಗಿದೆ ಎಂದು ಸೊರಬದ ಕಾಂಗ್ರೆಸ್ ಮುಖಂಡ ಶ್ರೀಧರ್ ಹುಲ್ತಿಕೊಪ್ಪ ಹೇಳಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಬಂಗಾರಪ್ಪನವರ ಸಮಕಾಲೀನರಾದ ಕಾಗೋಡು ಸಮಾಜವಾದಿ ಹೋರಾಟದಿಂದ ಮೇಲೆ ಬಂದವರು. ರಾಜಕೀಯವಾಗಿ ಹೆಸರುಗಳಿಸಿದ ಕಾಗೋಡು, ಪಕ್ಷ ಕಟ್ಟುವಲ್ಲಿ ಮತ್ತು ಜಿಲ್ಲೆಯ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಇಂತ ಹಿರಿಯರ ಬಗ್ಗೆ ಇಲ್ಲಸಲ್ಲದ ಟೀಕೆ ಮಾಡುತ್ತ ಕಾಲಹರಣ ಮಾಡುವ ಕೆಲಸವನ್ನು ಕುಮಾರ್ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್‍ನಲ್ಲಿ ಇದ್ದು ಎಲ್ಲಾ ಅಧಿಕಾರವನ್ನು ಅನುಭವಿಸಿದ ಕುಮಾರ್, ನಿಷ್ಠಾವಂತ ಕಾರ್ಯಕರ್ತರನ್ನು ಮೂಲೆಗುಂಪು ಮಾಡಿ, ಪಕ್ಷವನ್ನು ಕಟ್ಟದೆ, ಕೌಟುಂಬಿಕ ವಿಚಾರವನ್ನು ಮುಂದಿಟ್ಟುಕೊಂಡು ಅಣ್ಣತಮ್ಮ ಕಿತ್ತಾಡಿ ಪಕ್ಷದ ಅವನತಿಗೆ ಕಾರಣರಾಗಿದ್ದಾರೆ ಎಂದು ದೂರಿದರು.
ಬಿಜೆಪಿಯನ್ನು ಬಾಯಿಗೆಬಂದಂತೆ ಈ ಹಿಂದೆ ಟೀಕಿಸಿದ್ದ ಕುಮಾರ್, ತಮ್ಮ ತಂದೆಯ ಬದ್ಧರಾಜಕೀಯ ವೈರಿ ಯಡಿಯೂರಪ್ಪ ಜೊತೆ ಕೈಜೋಡಿಸಿ ಈಗ ಕಾಂಗ್ರೆಸ್‍ನ್ನು ತೆಗಳುತ್ತಿದ್ದಾರೆ. ಸಚಿವರಾಗಿದ್ದಾಗ ಸೊರಬದ ಅಭಿವೃದ್ಧಿಯನ್ನು ಕಿಂಚಿತ್ತೂ ಮಾಡದೆ, ಇಂದಿಗೂ ಹಿಂದುಳಿದ ತಾಲೂಕನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಲೇವಡಿ ಮಾಡಿದರು. ಗೋಷ್ಠಿಯಲ್ಲಿ ಹಳೇಸೊರಬದ ಜನಾರ್ಧನ, ಹಾಯದ ಅಶೋಕ್, ನ್ಯಾಯವಾದಿ ಲಕ್ಷ್ಮೀಕಾಂತ ಚಿಮಣೂರು ಉಪಸ್ಥಿತರಿದ್ದರು.