×
Ad

ವಿದ್ಯಾರ್ಥಿನಿಯರ ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆ : ಹಾಸ್ಟೆಲ್‍ಗೆ ಭೇಟಿಯಿತ್ತು ಪರಿಶೀಲಿಸಿದ ಡಿ.ಸಿ.

Update: 2017-07-25 17:17 IST

ಶಿವಮೊಗ್ಗ, ಜು. 25: ಹಾಸ್ಟೆಲ್‍ನಲ್ಲಿ ದಿಢೀರ್ ಅಸ್ವಸ್ಥಗೊಂಡು ನಗರದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಲೂಕಿನ ಗಾಜನೂರಿನ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ 30 ವಿದ್ಯಾರ್ಥಿನಿಯರ ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆ ಕಂಡುಬಂದಿದೆ. ಈ ನಡುವೆ ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್‍ರವರು ಮಂಗಳವಾರ ಬೆಳಿಗ್ಗೆ ಹಾಸ್ಟೆಲ್‍ಗೆ  ಭೇಟಿನೀಡಿ ಪರಿಶೀಲಿಸಿದ್ದಾರೆ.

ಮಂಗಳವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ರಘನಂದನ್‍ರವರು ಮಾತನಾಡಿದರು. 'ಎಲ್ಲ ವಿದ್ಯಾರ್ಥಿನಿಯರ ಆರೋಗ್ಯದಲ್ಲಿಯೂ ಸುಧಾರಣೆ ಕಂಡುಬಂದಿದೆ. ಪ್ರಸ್ತುತ ಬಹುತೇಕ ಎಲ್ಲರೂ ಆರೋಗ್ಯವಾಗಿದ್ದು, ಸಹಜ ಸ್ಥಿತಿಗೆ ಮರಳಿದ್ದಾರೆ' ಎಂದು ಮಾಹಿತಿ ನೀಡಿದ್ದಾರೆ.

ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದರೂ ಮಂಗಳವಾರ ಕೂಡ ಅವರನ್ನು ಆಸ್ಪತ್ರೆಯಲ್ಲಿಟ್ಟುಕೊಂಡು ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಲಾಗುವುದು. ಬುಧವಾರ ಬೆಳಿಗ್ಗೆ ಎಲ್ಲರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಹಾಸ್ಟೆಲ್‍ಗೆ ಕಳುಹಿಸಿ ಕೊಡಲಾಗುವುದು ಎಂದು ಡಾ. ರಘನಂದನ್ ಸ್ಪಷ್ಟಪಡಿಸಿದ್ದಾರೆ.

ಜಿಲ್ಲಾಧಿಕಾರಿ ಭೇಟಿ: ಡಿ.ಸಿ. ಡಾ. ಎಂ. ಲೋಕೇಶ್‍ರವರು ಹಾಸ್ಟೆಲ್‍ಗೆ ಭೇಟಿಯಿತ್ತು ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ನಡೆಸಿದರು. ಹಾಸ್ಟೆಲ್‍ನಲ್ಲಿ ನೀಡಲಾಗುತ್ತಿರುವ ಆಹಾರದ ಗುಣಮಟ್ಟದ ಬಗ್ಗೆ ಮಾಹಿತಿ ಪಡೆದುಕೊಂಡರು. ಹಾಗೆಯೇ ಅಡುಗೆ ತಯಾರಿಸುವ ಕೊಠಡಿಯನ್ನು ಪರಿಶೀಲಿಸಿದರು. ಅಡುಗೆ ತಯಾರಿಸುವ ಸಿಬ್ಬಂದಿಗಳ ಜೊತೆ ಸಮಾಲೋಚನೆ ನಡೆಸಿದರು.

'ಅಡುಗೆ ತಯಾರಿಸುವ ವೇಳೆ ಪ್ರತ್ಯೇಕ ಉಡುಪುಗಳನ್ನು ಧರಿಸಬೇಕು. ತಲೆಗೆ ಡಿಸ್ಪೋಸಬಲ್ ಕ್ಯಾಪ್, ಗ್ಲೌಸ್, ಏಫ್ರಾನ್, ಶುಭ್ರವಾದ ಬಿಳಿ ಬಟ್ಟೆಗಳನ್ನು ಧರಿಸಬೇಕು. ಅಡುಗೆ ಮನೆಯಲ್ಲಿ ಸ್ವಚ್ಚತೆ ಕಾಯ್ದುಕೊಳ್ಳಬೇಕು. ಪ್ರತ್ಯೇಕ ಪಾದರಕ್ಷೆ ಬಳಸಬೇಕು. ಶೌಚಾಲಯಕ್ಕೆ ತೆರಳಿದ ನಂತರ ಕೈಕಾಲುಗಳನ್ನು ತೊಳೆದುಕೊಂಡು ಅಡುಗೆ ಮನೆಗೆ ಬರಬೇಕು' ಎಂದು ಅಡುಗೆ ತಯಾರಿಸುವವರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದು ವಿದ್ಯಾರ್ಥಿನಿಯರು ಸೇವಿಸಿದ ಆಹಾರದ ಸ್ಯಾಂಪಲ್‍ನ್ನು ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆ ಹಿನ್ನೆಲೆ: ಹಾಸ್ಟೆಲ್‍ನಲ್ಲಿ ಸುಮಾರು 300 ವಿದ್ಯಾರ್ಥಿಗಳಿದ್ದಾರೆ. ಭಾನುವಾರ ರಾತ್ರಿ ಊಟ ಮಾಡಿದ ನಂತರ 30 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದರು. ಹೊಟ್ಟೆನೋವು, ವಾಂತಿ ಮಾಡಿಕೊಳ್ಳಲಾರಂಭಿಸಿದ್ದರು. ಇದರಲ್ಲಿ ಮೂವರು ವಿದ್ಯಾರ್ಥಿನಿಯರು ತೀವ್ರ ನಿತ್ರಾಣಗೊಂಡಿದ್ದರು. ತಕ್ಷಣವೇ ಇವರನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.

'ಹಾಸ್ಟೆಲ್‍ಗೆ ಕಳುಹಿಸಿ ಕೊಡಲಾಗುವುದು' : ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ರಘುನಂದನ್

 'ಆಸ್ಪತ್ರೆಗೆ ದಾಖಲಾಗಿದ್ದ ಎಲ್ಲ ವಿದ್ಯಾರ್ಥಿನಿಯರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಯಾವುದೇ ಸಮಸ್ಯೆಯಿಲ್ಲವಾಗಿದೆ. ಬುಧವಾರ ಬೆಳಿಗ್ಗೆ ಎಲ್ಲ ವಿದ್ಯಾರ್ಥಿನಿಯರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಹಾಸ್ಟೆಲ್‍ಗೆ ಕಳುಹಿಸಿ ಕೊಡಲಾಗುವುದು' ಎಂದು ಸರ್ಕಾರಿ ಮೆಗ್ಗಾನ್ ಬೋಧನಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ರಘುನಂದನ್‍ರವರು ಮಂಗಳವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

ಪ್ರಯೋಗಾಲಯದ ವರದಿಯತ್ತ ಚಿತ್ತ...!

ವಿದ್ಯಾರ್ಥಿನಿಯರು ಅಸ್ವಸ್ಥಗೊಳ್ಳಲು ದೋಷಪೂರಿತ ಆಹಾರ ಸೇವನೆ ಕಾರಣವೆಂದು ಹೇಳಲಾಗುತ್ತಿದೆ. ಆದರೆ ಹಾಸ್ಟೆಲ್‍ನಲ್ಲಿ ಸರಿಸುಮಾರು 300 ವಿದ್ಯಾರ್ಥಿಗಳಿದ್ದಾರೆ. ಆದರೆ ಇದರಲ್ಲಿ ಕೇವಲ 30 ವಿದ್ಯಾರ್ಥಿನಿಯರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿರುವುದು ಹಲವು ರೀತಿಯ ಚರ್ಚೆಗಳಿಗೆ ಕಾರಣವಾಗಿದೆ. ಮತ್ತೊಂದೆಡೆ ವಿದ್ಯಾರ್ಥಿನಿಯರು ಸೇವಿಸಿದ್ದ ಆಹಾರದ ಸ್ಯಾಂಪಲ್‍ನ್ನು ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ. ಪ್ರಯೋಗಾಲಯದ ವರದಿ ಬಂದ ನಂತರ ಸ್ಪಷ್ಟ ಕಾರಣ ತಿಳಿದುಬರಬೇಕಾಗಿದ್ದು, ಪ್ರಯೋಗಾಲಯದ ವರದಿಯತ್ತ ಎಲ್ಲರ ಚಿತ್ತ ನೆಟ್ಟಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News