2018 ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ : ಸಿ.ಚನ್ನಿಗಪ್ಪ
ತುಮಕೂರು.ಜು.25:ರಾಜ್ಯದಲ್ಲಿ ಜೆಡಿಎಸ್ ಪಕ್ಷ ಸದೃಡವಾಗಿದ್ದು,2018ರ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದು ಅಧಿಕಾರ ಹಿಡಿಯುವುದು ಶತಸಿದ್ದ ಎಂದು ಮಾಜಿ ಸಚಿವ ಹಾಗೂ ತುಮಕೂರು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸಿ.ಚನ್ನಿಗಪ್ಪ ತಿಳಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಪಕ್ಷದ ರಾಜ್ಯಾಧ್ಯಕ್ಷರು ಮತ್ತು ರಾಷ್ಟ್ರಾಧ್ಯಕ್ಷರ ಸಲಹೆ ಶಾಸಕ ಸಿ.ಬಿ.ಸುರೇಶ್‍ಬಾಬು ಅವರ ಸೂಚನೆಯಂತೆ ಜಿಲ್ಲಾ ವೀಕ್ಷಕರುಗಳ ಸಮ್ಮುಖದಲ್ಲಿ ಜಿಲ್ಲೆಯ ಎಲ್ಲಾ ತಾಲೂಕು, ಹೋಬಳಿ ಮತ್ತು ಬೂತf ಮಟ್ಟದ ಅಧ್ಯಕ್ಷರುಗಳ ನೇಮಕ ಮಾಡಲಾಗಿದೆ. ಅವರುಗಳು ಉಳಿದ ಕಮಿಟಿಗಳ ಸದಸ್ಯರನ್ನು ನೇಮಕ ಮಾಡಿಕೊಂಡು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ 20 ತಿಂಗಳ ಸಮ್ಮಿಶ್ರ ಸರಕಾರದ ಸಾಧನೆಗಳನ್ನು ನಗರ,ಪಟ್ಟಣ ಹಾಗೂ ಗ್ರಾಮೀಣ ಭಾಗದ ಮನೆ, ಮನಗಳಿಗೆ ಮುಟ್ಟಿಸುವ ಕೆಲಸ ಮಾಡಲಿದ್ದಾರೆ ಎಂದರು.
ಜಾತ್ಯಾತೀತ ಜನತಾದಳ ಬಡವರು, ದೀನ ದಲಿತರು, ಕೂಲಿ ಕಾರ್ಮಿಕರ ಪಕ್ಷವಾಗಿದ್ದು,ಅವರು ನಮ್ಮ ಪಕ್ಷದ ಶಕ್ತಿಯಾಗಿದ್ದಾರೆ. ಹಾಲಿ ಜೆಡಿಎಸ್ ಶಾಸಕರಾಗಿರುವ ಜಮೀರ್ ಅಹಮದ್ ಅವರು ಮಾಡಿರುವ ಆರೋಪಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಎಂದು ಮಾರ್ಮೀಕವಾಗಿ ನುಡಿದರು.
ತುಮಕೂರು ಜಿಲ್ಲೆಯಲ್ಲಿ ಕುಡಿಯುವ ನೀರಿಲ್ಲದೆ ಜನರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.ಈಗಾಗಲೇ ಹೇಮಾವತಿ ಜಲಾಶಯದಲ್ಲಿ 12 ಟಿ.ಎಂ.ಸಿಗೂ ಹೆಚ್ಚು ನೀರಿದ್ದರೂ ಜಿಲ್ಲೆಯ ನಾಲೆಗಳಿಗೆ ಕುಡಿಯುವ ನೀರು ಹರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಆ.10 ರಂದು ತುಮಕೂರು ಬಂದ್ ನಡೆಸುವ ಮೂಲಕ ಸರಕಾರದ ಗಮನ ಸೆಳೆಯಲಾಗುವುದು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಸಿ.ಚನ್ನಿಗಪ್ಪ ತಿಳಿಸಿದರು.
ತುಮಕೂರು ಜಿಲ್ಲಾ ವೀಕ್ಷಕರಾಗಿ ಆಗಮಿಸಿದ್ದ ಪಟೇಲ್ ಶಿವರಾಂ ಮಾತನಾಡಿ,ಇಂದು ಜೆಡಿಎಸ್ ಪಕ್ಷದ ರಾಷ್ಟ್ರಾಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರ ವಿರುದ್ದ ಮಾತನಾಡುತ್ತಿರುವ ಜಮೀರ್ ಅಹಮದ್,ಇನ್ನಿತರ ಭಿನ್ನಮತೀಯರು ಒಂದು ಕಾಲದಲ್ಲಿ ಹೆಚ್.ಡಿ.ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ಹಿಂದೆ ಮುಂದೆ ಸುಳಿದಾಡಿದವರು,ಎಲ್ಲಾ ರೀತಿಯ ಅಧಿಕಾರವನ್ನು ಅನುಭವಿಸಿದವರು.ಈಗ ಅವರ ಜೆಡಿಎಸ್ ಪಕ್ಷದ ಬಗ್ಗೆ ಮಾತನಾಡುತ್ತಿದ್ದಾರೆ.ಇದು ಶೋಭೆ ತರುವ ವಿಚಾರವಲ್ಲ.ಹಾಗಾಗಿ ಮುಂದಿನ ಚುನಾವಣೆಗಳಲ್ಲಿ ಜನರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ತಾಲೂಕು ಅಧ್ಯಕ್ಷ ಮುಹಮದ್ ಇಕ್ಬಾಲ್ ಮಾತನಾಡಿ,ಜಮೀರ್ ಅಹಮದ್ ಅವರು ಇಂದಿಗೂ ಜೆಡಿಎಸ್ ಋಣದಲ್ಲಿಯೇ ಇದ್ದಾರೆ.ಉಚಿಡ ಮನೆಗೆ ಕೆಟ್ಟದನ್ನು ಬಯಸುವುದು ಸರಿಯಲ್ಲ.1972 ರಿಂದಲೂ ಜೆಡಿಎಸ್ ಒಂದು ರೀತಿಯಲ್ಲಿ ನಾಯಕರನ್ನು ತಯಾರು ಮಾಡುವ ಕಾರ್ಖಾನೆ. ಸಿ.ಎಂ.ಇಬ್ರಾಹಿಂ, ನಜೀರ್‍ಸಾಬ್,ಮೀರಾಜುದ್ದೀನ್ ಪಟೇಲ್,ರೋಷನ್ ಬೇಗ್ ರಂತಹ ನಾಯಕರು ರಾಜಕಾರಣದಲ್ಲಿ ಪ್ರಬಲ ನಾಯಕರಾಗಿ ಗುರುತಿಸಿಕೊಂಡಿದ್ದೇ ಜೆಡಿಎಸ್ ಪಕ್ಷದಿಂದ.ಅಲ್ಪಸಂಖ್ಯಾತರು ತಮ್ಮ ಓಟುಗಳನ್ನು ಯಾರಿಗೂ ಮಾರಿಕೊಂಡಿಲ್ಲ. ನಮ್ಮ ರಕ್ಷಣೆಗೆ ಯಾರು ನಿಲ್ಲುತ್ತಾರೋ ಅವರಿಗೆ ಮತ ಚಲಾಯಿಸುತ್ತಾ ಬಂದಿದ್ದಾರೆ.ಇದುವರೆಗೂ ಜೆಡಿಎಸ್ ಪಕ್ಷದಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆ ಸಿಕ್ಕಿದೆ. ಮುಂದೆಯೂ ಸಿಗುತ್ತದೆ ಎಂಬ ನಂಬಿಕೆ ನಮಗಿದೆ ಎಂದರು.
ತುಮಕೂರು ಜಿಲ್ಲೆಯಲ್ಲಿ ಮುಸ್ಲಿಂರ ಸುಮಾರು 3 ಲಕ್ಷಕ್ಕೂ ಅಧಿಕ ಮತಗಳಿದ್ದರೂ ಒಂದು ಎಂ.ಎಲ್.ಎ ಸ್ಥಾನವನ್ನು ಗೆಲ್ಲಲ್ಲು ಸಾಧ್ಯವಾಗಿಲ್ಲ.ಈ ಬಾರಿ ಜೆಡಿಎಸ್‍ನಿಂದ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಟಿಕೇಟ್ ನೀಡದರೆ ಸ್ಪರ್ಧಿಸಲು ನಾನು ಸಿದ್ದನಿರುವುದಾಗಿ ಮಹಮದ್ ಇಕ್ಬಾಲ್ ಸ್ಪಷ್ಟಪಡಿಸಿದರು.
ಇದೇ ವೇಳೆ ತಾಲೂಕು ಅಧ್ಯಕ್ಷರು ಹಾಗೂ ಬೂತ ಅಧ್ಯಕ್ಷರುಗಳಿಗೆ ನೇಮಕಾತಿ ಪತ್ರ ನೀಡಿ,ಕಾರ್ಯಾಭಾರ ವಹಿಸಲಾಯಿತು.