ನಾಲೆಗೆ ನೀರು ಬಿಡುಗಡೆಗೆ ಆಗ್ರಹಿಸಿ ಹೆದ್ದಾರಿ ತಡೆ

Update: 2017-07-25 14:59 GMT

ಮದ್ದೂರು, ಜು.25: ಕೆಆರ್‍ಎಸ್ ಜಲಾಶಯದಿಂದ ತಮಿಳುನಾಡಿಗೆ ಹರಿಸುತ್ತಿರುವ ನೀರು ಸ್ಥಗಿತಗೊಳಿಸಿ, ನಾಲೆಗಳಿಗೆ ಹರಿಸುವಂತೆ ಒತ್ತಾಯಿಸಿ ರೈತಸಂಘದ ಕಾರ್ಯಕರ್ತರು ಮಂಗಳವಾರ ರಸ್ತೆತಡೆ ನಡೆಸಿದರು.
ಬೆಂಗಳೂರು ಮೈಸೂರು ಹೆದ್ದಾರಿಯ ಕೊಪ್ಪ ವೃತ್ತದಲ್ಲಿ ರಸ್ತೆತಡೆ ನಡೆಸಿದ ರೈತರು, ಸರಕಾರ, ಜಿಲ್ಲಾಡಳಿತ, ನೀರಾವರಿ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೆಲವು ಪ್ರತಿಭಟನಾಕಾರರು ಶಿರಾಸನದ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಜನಜಾನುವಾರುಗಳ ಕುಡಿಯುವ ನೀರಿಗೆ ಪರದಾಡುವಂತಹ ಪರಿಸ್ಥಿತಿ ಬಂದಿದ್ದರೂ ನಾಲೆಗಳಿಗೆ ನೀರು ಹರಿಸಲು ಮುಂದಾಗುತ್ತಿಲ್ಲವೆಂದು ಕಿಡಿಕಾರಿದರು.
ಮೂರು ವರ್ಷದಿಂದ ಬರಗಾಲವಿದೆ. ಕೆಲವು ದಿನಗಳಿಂದ ಸುರಿ ಮಳೆಯಿಂದಾಗಿ ಜಲಾಶಯಕ್ಕೆ ಅಲ್ಪಸ್ವಲ್ಪ ನಿರು ಬರುತ್ತಿದೆ. ನಾಲೆಗೆ ನೀರುಹರಿಸದೆ ತಮಿಳುನಾಡಿಗೆ ಬಿಡಲಾಗುತ್ತಿದೆ ಎಂದು ಅವರು ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲಾಉಸ್ತವಾರಿ ಸಚಿವರು ಕೂಡಲೇ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ಕರೆದು ಕಾವೇರಿ ಸಲಹಾ ಸಮಿತಿ ಸಭೆ ನಡೆಸಿ ನಾಲೆಗೆ ನೀರುಹರಿಸಬೇಕು. ಇಲ್ಲವಾದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಕೋಣಸಾಲೆ ನರಸರಾಜು, ತಾಲೂಕು ಅಧ್ಯಕ್ಷ ಜಿ.ಎ.ಶಂಕರ್, ಅಣ್ಣೂರು ಮಹೇಂದ್ರ, ಸಿದ್ದೇಗೌಡ, ಲಿಂಗಪ್ಪಾಜಿ, ಯರಗನಹಳ್ಳಿ ರಾಮಕೃಷ್ಣಯ್ಯ, ಅಶೋಕ್, ರವಿಕುಮಾರ್, ನಾಗರಾಜು, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News