ಕೇಂದ್ರ ಜಲ ಆಯೋಗಕ್ಕೆ ಯೋಜನಾ ವರದಿ ಸಲ್ಲಿಕೆ: ಎಂ.ಬಿ.ಪಾಟೀಲ್
ಬೆಂಗಳೂರು, ಜು.25: ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಜಲ ಆಯೋಗಕ್ಕೆ ಯೋಜನಾ ವರದಿಯನ್ನು ಸಲ್ಲಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾವೇರಿ ನೀರಾವರಿ ನಿಗಮದ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಮೇಕೆದಾಟು ಯೋಜನೆಯು ಅಂತರರಾಜ್ಯ ನದಿ ವಿವಾದಕ್ಕೆ ಸಂಬಂಧಿಸಿದ್ದಾಗಿದೆ. ಆದುದರಿಂದ, ಕೇಂದ್ರ ಜಲ ಆಯೋಗವು ಕೆಲ ಆಕ್ಷೇಪಗಳನ್ನು ವ್ಯಕ್ತಪಡಿಸಿತ್ತು. ಈ ಬಗ್ಗೆ ಈಗಾಗಲೆ ಸಭೆ ನಡೆಸಿದ್ದೇವೆ. ಸಮರ್ಪಕವಾದ ಉತ್ತರಗಳು ಸಿದ್ಧವಾಗಿದೆ. ಇನ್ನೊಂದು ವಾರದಲ್ಲಿ ಕಳುಹಿಸಿಕೊಡುತ್ತೇವೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.
ಲಿಂಗಾಯತ ಧರ್ಮದ ಬೇಡಿಕೆ: ನಾವು ಲಿಂಗಾಯತಕ್ಕೆ ಮಾತ್ರ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕು ಎಂದು ಕೇಳಿದ್ದೇವೆ. ಕುರುಬರು ಹಾಗೂ ಒಕ್ಕಲಿಗರಿಗೆ ಧರ್ಮದ ಸ್ಥಾನ ನೀಡುವಂತೆ ಕೇಳಿಲ್ಲ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನೆ ಕೇಳಿ ಎಂದು ಎಂ.ಬಿ.ಪಾಟೀಲ್ ಹೇಳಿದರು.
ವೀರಶೈವ, ಲಿಂಗಾಯತ ಎರಡೂ ಒಂದೇ. ಲಿಂಗಾಯತ ಧರ್ಮವನ್ನ ಹುಟ್ಟುಹಾಕಿದವರು ಬಸವಣ್ಣ. ಜಾತಿಯನ್ನ ಹುಟ್ಟು ಹಾಕುವಂತಹ ಸಣ್ಣ ಮನುಷ್ಯ ಬಸವಣ್ಣನವರಲ್ಲ. ಅವರು ಲಿಂಗಾಯತ ಧರ್ಮವನ್ನ ಹುಟ್ಟುಹಾಕಿದರು. ಹಿಂದೂ ಧರ್ಮಕ್ಕೂ, ಲಿಂಗಾಯತ ಧರ್ಮಕ್ಕೂ ಬಹಳಷ್ಟು ವ್ಯತ್ಯಾಸವಿದೆ ಎಂದು ಅವರು ತಿಳಿಸಿದರು.
ನಮ್ಮಲ್ಲಿ ಕೆಲವರು ಬಸವತತ್ವಗಳನ್ನು ಒಪ್ಪುವುದಿಲ್ಲ. ಬಸವಣ್ಣನವರನ್ನು ಸಮಾಜ ಸುಧಾರಕ ಅಂತ ಪಂಚಪೀಠದವರು ಕರೆಯುತ್ತಾರೆ. ಆದರೆ, ‘ಗುರು’ ಅಂತ ಪಂಚ ಪೀಠದವರು ಬಸವಣ್ಣರನ್ನು ಒಪ್ಪಿಕೊಳ್ಳುತ್ತಿಲ್ಲ. ಅವರ ಮನವೊಲಿಸುವ ಪ್ರಯತ್ನ ಮಾಡುತ್ತೇವೆ ಎಂದು ಎಂ.ಬಿ.ಪಾಟೀಲ್ ಹೇಳಿದರು. ವೀರಶೈವ ಸಮಾಜದ ಮುಖಂಡರು, ಸ್ವಾಮೀಜಿಗಳು ಪ್ರತ್ಯೇಕ ಲಿಂಗಾಯತ ಧರ್ಮದ ಬೇಡಿಕೆಯ ಪರವಾಗಿದ್ದಾರೆ. ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ನೇತೃತ್ವದ ಸಚಿವರ ತಂಡ ರಾಜ್ಯಾದ್ಯಂತ ಈ ಸಂಬಂಧ ಪ್ರವಾಸ ಕೈಗೊಳ್ಳಲಿದೆ. ಅನ್ಯ ಕೆಲಸದ ನಿಮಿತ್ತ ನಾನು ಈ ಪ್ರವಾಸದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದರು.
ವಿರಕ್ತ, ಪಂಚಾಚಾರ್ಯರ ಪಂಥಗಳು ಇವೆ. ಅವರನ್ನೂ ಧರ್ಮದಡಿ ತರುವ ಪ್ರಯತ್ನ ಮಾಡುತ್ತೇವೆ. ಬಸವಣ್ಣನ ತತ್ವ ಒಪ್ಪುವವರು ಧರ್ಮದ ಬೇಡಿಕೆಯನ್ನು ಒಪ್ಪುತ್ತಾರೆ ಎಂದು ಎಂ.ಬಿ.ಪಾಟೀಲ್ ಹೇಳಿದರು.