ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಕ

Update: 2017-07-25 16:25 GMT

 ಬೆಂಗಳೂರು, ಜು.25: ರಾಮಚಂದ್ರಾಪುರ ಮಠದಲ್ಲಿ ಅವ್ಯವಹಾರಗಳು ಹೆಚ್ಚಾಗಿದ್ದು, ಆಡಳಿತಾಧಿಕಾರಿ ನೇಮಕ ಮಾಡಬೇಕೆಂಬ ವಿಚಾರಕ್ಕೆ ತನಿಖೆ ನಡೆಸಲು ಸರಕಾರದ ಮುಖ್ಯ ಕಾರ್ಯದರ್ಶಿ ನೀಡಿದ್ದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.
             
 ಈ ಸಂಬಂಧ ಶ್ರೀಮದ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು. ಅಲ್ಲದೆ, ರಾಜ್ಯ ಸರಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ನಾಲ್ಕು ವಾರಗಳ ಕಾಲಾವಕಾಶ ನೀಡಿದೆ. ಅರ್ಜಿದಾರರ ಪರ ವಾದಿಸಿದ ವಕೀಲರು, ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಕ ಹಾಗೂ ಅವ್ಯವಹಾರಗಳ ತನಿಖೆ ನಡೆಸಲು ಮುಜರಾಯಿ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು ಆದೇಶಿಸಬೇಕು. ಆದರೆ, ಇಲ್ಲಿ ಸರಕಾರದ ಮುಖ್ಯಕಾರ್ಯದರ್ಶಿಗಳೆ ತನಿಖೆಗೆ ಆದೇಶಿಸಿದ್ದಾರೆ. ಹೀಗಾಗಿ, ಈ ಆದೇಶಕ್ಕೆ ತಡೆ ನೀಡಬೇಕೆಂದು ಮನವಿ ಮಾಡಿದರು.
 ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠವು ರಾಜ್ಯ ಸರಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ನಾಲ್ಕು ವಾರಗಳ ಕಾಲಾವಕಾಶ ನೀಡಿ ಆದೇಶಿಸಿತು.
 ಈ ಹಿಂದೆ ಅತ್ಯಾಚಾರ ಆರೋಪ ಬಂದಾಗ ಆರು ನ್ಯಾಯಾಧೀಶರು ವಿಚಾರಣೆ ನಡೆಸುವುದಿಲ್ಲ ಅಂತ ಪ್ರಕರಣದಿಂದ ಹಿಂದೆ ಹೋಗಿದ್ದರು. ನ್ಯಾ. ಕೆ.ಎನ್.ಫಣೀಂದ್ರ, ನ್ಯಾ. ರಾಮ್ಮೋಹನ್ ರೆಡ್ಡಿ, ನ್ಯಾ. ಎನ್.ಕುಮಾರ್, ನ್ಯಾ. ಎಚ್.ಜಿ.ರಮೇಶ್, ನ್ಯಾ ಭಜಂತ್ರಿ ಹಾಗೂ ನ್ಯಾ.ಎಸ್.ಕೆ.ಮುಖರ್ಜಿ ವಿವಿಧ ಕಾರಣಗಳಿಂದ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದರು.

   ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಬೇಕೆಂದು ಎದುರ್ಕಳ ಈಶ್ವರ ಭಟ್ ಮತ್ತು ಜೈಕೃಷ್ಣ ಅವರು ಹೈಕೋರ್ಟ್ ಮೊರೆ ಹೋಗಿದ್ದರು. 22 ಬ್ಯಾಂಕ್ ಅಕೌಂಟ್‌ಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿತ್ತು. ವಿಚಾರಣೆ ನಡೆಸಿದ್ದ ಹೈಕೋರ್ಟ್ ಸರಕಾರಕ್ಕೆ ತನಿಖೆ ನಡೆಸುವಂತೆ ಆದೇಶಿಸಿತ್ತು.

ಮನವಿಯಲ್ಲಿ ಏನಿತ್ತು?: ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಿಸಬೇಕು ಮತ್ತು ಸ್ವಾಮೀಜಿ ಮಠದಲ್ಲಿದ್ದು ಅಧಿಕಾರ ಚಲಾಯಿಸುವುದನ್ನು ತಡೆಯಬೇಕು ಎಂದು ಒತ್ತಾಯಿಸಿ ಎದುರ್ಕಳ ಈಶ್ವರ ಭಟ್ ಮತ್ತು ಜೈಕೃಷ್ಣ ಅವರು 2016ರ ಎ.30 ರಂದು ಅಂದಿನ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ಅವರಿಗೆ ಮನವಿ ಸಲ್ಲಿಸಿದ್ದರು. ಪೀಠಾಧಿಪತಿ ಸ್ಥಾನದಿಂದ ರಾಘವೇಶ್ವರ ಶ್ರೀಗಳನ್ನು ಕೆಳಗಿಳಿಸಬೇಕು. ಮಠದ ಸ್ಥಿರ ಮತ್ತು ಚರಾಸ್ತಿ ಮೇಲೆ ನಿಯಂತ್ರಣ ಹೊಂದದಂತೆ ಸೂಚಿಸಬೇಕು. ಪೂಜಾ ಕಾರ್ಯವನ್ನು ಹೊರತು ಪಡಿಸಿ ಮಠದ ಎಲ್ಲ ವ್ಯವಹಾರಗಳನ್ನು ನೋಡಿಕೊಳ್ಳಲು ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಧ್ಯಕ್ಷತೆಯಲ್ಲಿ ಸಮಿತಿ ನೇಮಿಸಬೇಕೆಂದು ಅವರು ಮನವಿ ಮಾಡಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News