ಕರ್ನಾಟಕ ಶಿಕ್ಷಣ ಕಾಯಿದೆ-2017ರ ತಡೆ ವಿಚಾರ: ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2017-07-25 16:26 GMT

ಬೆಂಗಳೂರು, ಜು.25: ಕರ್ನಾಟಕ ಶಿಕ್ಷಣ ತಿದ್ದುಪಡಿ ಕಾಯಿದೆ -2017ಕ್ಕೆ ತಡೆ ನೀಡುವಂತೆ ಕೋರಿ ರಾಜ್ಯ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ ಸೇರಿದಂತೆ 8 ಖಾಸಗಿ ಶಾಲಾ ಆಡಳಿತ ಮಂಡಳಿಗಳು ಹೈಕೋರ್ಟ್ ಮೆಟ್ಟಿಲೇರಿವೆ.

  ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಅವರಿದ್ದ ಏಕಸದಸ್ಯ ಪೀಠ, ಪ್ರತಿವಾದಿಗಳಾದ ರಾಜ್ಯ ಸರಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

   

    ರಾಜ್ಯ ಸರಕಾರ 1983 ಶಿಕ್ಷಣ ಕಾಯಿದೆಗೆ ತಿದ್ದುಪಡಿ ಮಾಡಿ ಕರ್ನಾಟಕ ಶಿಕ್ಷಣ ಕಾಯಿದೆ -2017 ಕಾಯಿದೆಯನ್ನು ಎಪ್ರಿಲ್ ತಿಂಗಳಿನಲ್ಲಿ ಜಾರಿಗೊಳಿಸಿದೆ. ಇದರ ಅನ್ವಯ ಶಾಲಾ ವಿದ್ಯಾರ್ಥಿಗಳ ಪ್ರವೇಶ ಶುಲ್ಕ ಸೇರಿದಂತೆ ಇನ್ನಿತರೆ ವಿಚಾರಣೆಗಳಲ್ಲಿ ಲೋಪ ಎಸಗದಂತೆ ನಿಗಾಯಿಡಲು ಜಿಲ್ಲಾಧಿಕಾರಿ ನೇತೃತ್ವದ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರಕ್ಕೆ ನೀಡಲಾಗಿದೆ. ಈ ಪ್ರಾಧಿಕಾರ, ಖಾಸಗಿ ಶಾಲೆಗಳು ನಿಯಮಾವಳಿ ಪಾಲಿಸದಿದ್ದಲ್ಲಿ ಸಂಬಂಧಪಟ್ಟ ಶಾಲೆಗೆ 10 ಲಕ್ಷ ರೂ. ಮೊತ್ತದ ದಂಡ ವಿಧಿಸುವ ಅಧಿಕಾರ ಹೊಂದಿದೆ. ಅದೇ ರೀತಿ ಶಾಲಾ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಲೋಪ ಕಂಡು ಬಂದರೆ ಆ ಸಂಸ್ಥೆಯ ಆಡಳಿತ ಮಂಡಳಿಗೆ ಸಂಬಂಧಿಸಿದ ಅಧಿಕಾರಿಗಳಿಗೆ 6 ತಿಂಗಳು ಜೈಲು ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿಲು ಅವಕಾಶ ಕಲ್ಪಿಸಿದೆ. ಆದರೆ ರಾಜ್ಯ ಸರಕಾರಕ್ಕೆ ಅನುದಾನ ರಹಿತ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಜರುಗಿಸುವ ಯಾವುದೇ ಅಧಿಕಾರವಿಲ್ಲ. ಹೀಗಾಗಿ 2017ರ ರಾಜ್ಯ ಶಿಕ್ಷಣ ಕಾಯಿದೆ ನಿಯಮಗಳು ಸಂವಿಧಾನ ಬಾಹಿರವಾಗಿದ್ದು, ತಡೆಯಾಜ್ಞೆ ನೀಡುವಂತೆ ಅರ್ಜಿದಾರರು ಕೋರಿದ್ದಾರೆ. ಅರ್ಜಿದಾರರ ಪರ ವಕೀಲ ಜಿ.ಆರ್. ಮೋಹನ್ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News