ಆಸ್ಪತ್ರೆಯಲ್ಲೇ ಮೃತ್ಯುಂಜಯ ಹೋಮ ನಡೆಸಿದ ವೈದ್ಯರು !

Update: 2017-07-26 07:04 GMT

ಹೈದರಾಬಾದ್,ಜು.26 : ಹೆಚ್ಚುತ್ತಿರುವ ನವಜಾತ ಶಿಶುಗಳ ಸಾವಿನಿಂದ ಕಂಗೆಟ್ಟ ನಗರದ ಖ್ಯಾತ ಹಾಗೂ 150 ವರ್ಷ ಹಳೆಯದಾದ ಗಾಂಧಿ ಆಸ್ಪತ್ರೆಯ ವೈದ್ಯರು ಸೋಮವಾರ ಆಸ್ಪತ್ರೆಯಲ್ಲಿಯೇ  ಮೃತ್ಯುಂಜಯ ಹೋಮ ನಡೆಸಿ ಆಸ್ಪತ್ರೆಗೆ ದಾಖಲಾಗುವ ಗರ್ಭಿಣಿಯರ ಹಾಗೂ ಅವರಿಗೆ ಹುಟ್ಟುವ ಶಿಶುಗಳ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಈ ಹೋಮವನ್ನು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯ ಮುಂದಾಳತ್ವದಲ್ಲಿ ನಡೆಸಲಾಗಿತ್ತಲ್ಲದೆ ಹಲವಾರು ಸಿಬ್ಬಂದಿ ಇದಕ್ಕೆ ಧನಸಹಾಯ ಕೂಡ ಮಾಡಿದ್ದರು.

ಮೃತ್ಯುಂಜಯ ಹೋಮ ಸುಮಾರು ನಾಲ್ಕು ತಾಸುಗಳ ಕಾಲ ನಡೆದಿದೆ. ಆದರೆ ಹೋಮ ನಡೆಸಿದ ಸುದ್ದಿ ಬಹಿರಂಗಗೊಂಡು ಟೀಕೆಗಳು ಹರಿದು ಬರಲಾರಂಭಿಸಿದಂತೆ ಪ್ರಕರಣದ ತನಿಖೆಗೆ ಆದೇಶಿಸಲಾಗಿದೆ.  ನಾವು ಇಂತಹ ಪೂಜೆಗಳನ್ನು ಉತ್ತೇಜಿಸುವುದಿಲ್ಲ ಎಂದು ಇದೀಗ ಆಸ್ಪತ್ರೆಯ ಡೆಪ್ಯುಟಿ ಸುಪರಿಂಟೆಂಡೆಂಟ್ ಎನ್ ನರಸಿಂಹ ರಾವ್ ಹೇಳಿಕೊಂಡಿದ್ದಾರಲ್ಲದೆ  ತನಿಖಾ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ತಿಳಿಸಿದ್ದಾರೆ.

ಕೆಲ ತಿಂಗಳ ಹಿಂದಿನ ತನಕ ಈ ಆಸ್ಪತ್ರೆಯ ಪ್ರಸೂತಿ ವಿಭಾಗದಲ್ಲಿ ದಿನವೊಂದಕ್ಕೆ 25ರಿಂದ 30 ಹೆರಿಗೆಗಳು ನಡೆಯುತ್ತಿದ್ದವು. ಆದರೆ  ಇತ್ತೀಚಿಗಿನ ವಾರಗಳಲ್ಲಿ ಈ ವಿಭಾಗದಲ್ಲಿ ಕನಿಷ್ಠ  ಆರು ನವಜಾತ ಶಿಶುಗಳ ಸಾವು ಆಸ್ಪತ್ರೆಗೆ ಕೆಟ್ಟ ಹೆಸರು ತಂದಿತ್ತೆನ್ನಲಾಗಿದೆ. 'ಇತ್ತೀಚೆಗೆ ಆಸ್ಪತ್ರೆಯಲ್ಲಿ ಸಂಭವಿಸಿದ ಶಿಶುಗಳ ಸಾವಿನ ಪ್ರಮಾಣ ಹಿಂದಿಗಿಂತ ಹೆಚ್ಚೇನಲ್ಲ. ನಿಜ ಹೇಳಬೇಕೆಂದರೆ ತೀರಾ ವಿಷಮ ಸ್ಥಿತಿಯಲ್ಲಿರುವವನ್ನು ಇಲ್ಲಿಗೆ ತರಲಾಗುತ್ತಿದೆ. ನಾವು ಯಾವುದೇ ರೋಗಿಗೆ ಚಿಕಿತ್ಸೆ ನಿರಾಕರಿಸುವುದಿಲ್ಲ.'' ಎಂದು ರಾವ್ ಹೇಳಿದ್ದಾರೆ.

ಇಂತಹ ಹೋಮ ಅಥವಾ ಪೂಜೆಗಳನ್ನು ಆಸ್ಪತ್ರೆಯಲ್ಲಿ ಇನ್ನು ಮುಂದೆ ನಡೆಸದಂತೆ ಇಲ್ಲಿನ ಸಿಬ್ಬಂದಿಗೆ ತಾಕೀತು ಮಾಡಲಾಗಿದೆ. ಆಸ್ಪತ್ರೆಯ ಪ್ರಸೂತಿ ರೋಗ ವಿಭಾಗದ ಮುಖ್ಯಸ್ಥೆ ಹರಿ ಅನುಪಮಾ ಅವರು ಸ್ಪಷ್ಟೀಕರಣ ನೀಡುತ್ತಾ  ಈ ಪೂಜೆಯನ್ನು ಸರಕಾರದ ಖರ್ಚಿನಲ್ಲಿ ನಡೆಸಿಲ್ಲ ಎಂದು ಹೇಳಿದ್ದಾರೆ. 'ಕೆಲ ನರ್ಸುಗಳು, ನಾಲ್ಕನೇ ದರ್ಜೆ ಉದ್ಯೋಗಿಗಳು, ಕೆಲ ರೋಗಿಗಳು ಹಾಗೂ ನಾನು ಭಾಗವಹಿಸಿದ್ದೆವು. ಮೇಲಾಗಿ ಇದನ್ನು ಆಸ್ಪತ್ರೆಯ ಕಾರಿಡಾರಿನಲ್ಲಿ ನಡೆಸಲಾಗಿತ್ತೇ ವಿನಹ ವಾರ್ಡಿನಲ್ಲಲ್ಲ,'' ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News